ಹೊಸನಗರ ; ಪ್ರಪಂಚದಾದ್ಯಂತ ಮುಸ್ಲಿಮರು ಒಂದು ತಿಂಗಳು ಸೂರ್ಯೋದಯದಿಂದ ಸೂರ್ಯಾಸ್ತಮದವರೆಗೆ ಉಪವಾಸ ಆಚರಿಸುವ ಪವಿತ್ರ ತಿಂಗಳು ರಂಜಾನ್ ಆಗಿದ್ದು ಈದ್-ಉಲ್-ಫಿತರ್ ಹಬ್ಬವನ್ನು ರಂಜಾನ್ ತಿಂಗಳ ಕೊನೆಯಲ್ಲಿ ಆಚರಿಸಲಾಗುತ್ತದೆ.

ಆದಾಗ್ಯೂ ರಂಜಾನ್ ತಿಂಗಳಾದ್ಯಂತ, ಬಡವರಿಗೆ ದಾನ ವಿತರಿಸಲಾಗುತ್ತದೆ ಹಾಗೂ ಈದ್ ದಿನದಂದು ನಿರ್ವಹಿಸುವ ವಿಶೇಷ ನಮಾಜ್ ಅನ್ನು ಈದ್-ಉಲ್-ಫಿತರ್ (ರಂಜಾನ್ ಹಬ್ಬ) ಎಂದು ಕರೆಯಲಾಗುತ್ತದೆ.

ಈ ಮಾಸದಲ್ಲಿ ಪವಿತ್ರ ಗ್ರಂಥ ಖುರಾನ್ ಅನಾವರಣಗೊಂಡಿದ್ದು ಈದ್ ನಮಾಝ್ ಸಲ್ಲಿಸುವ ಮೊದಲು ಶ್ರೀಮಂತರು ವರ್ಷವಿಡೀ ದುಡಿದು ಸಂಪಾದಿಸಿದ ಸ್ವತ್ತಿನ 2.5% ನ್ನು ಬಡವರಿಗೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ನಿರ್ಗತಿಕರಿಗೆ ‘ಜಕಾತ್’ ರೂಪದಲ್ಲಿ ಪಾವತಿಸಿದೆ, ಮಧ್ಯಮ ವರ್ಗದವರು ‘ಫಿತ್ರ್’ ಹೆಸರಿನಲ್ಲಿ ಕನಿಷ್ಠ 90 ರೂ.ಗಳಂತೆ ಕಡು ಬಡವರಿಗೆ ದಾನ ಮಾಡುವುದು ಕಡ್ಡಾಯವಾಗಿದೆ ಎಂದು ಜಾಮಿಯಾ ಮಸೀದಿ ಖತೀಬರಾದ ಜನಾಬ್ ಮುಫ್ತಿ ಮೊಹಮ್ಮದ್ ಇಂತಿಯಾಝ್ ಅಭಿಪ್ರಾಯಪಟ್ಟರು.

ಇಂದು ಬೆಳಿಗ್ಗೆ ಮಸೀದಿ ರಸ್ತೆಯಲ್ಲಿರುವ ಮಸ್ಜಿದ್ ನಿಂದ ಹಳೆ ಸಾಗರ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ ಮುಸ್ಲಿಂ ಬಾಂಧವರು, ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತರ್ (ರಂಜಾನ್ ಹಬ್ಬ) ಖುತ್ಬಾ ನಿರ್ವಹಿಸಿದರು.

ಈ ಸಂದರ್ಭದಲ್ಲಿ ವಿಶೇಷ ಪ್ರವಚನ ನೀಡಿದ ಅವರು, ಇಸ್ಲಾಂ ಧರ್ಮದ ಪ್ರಮುಖ ಎರಡು ಹಬ್ಬಗಳಿದ್ದು ಎರಡೂ ತನ್ನದೇ ಆದ ವಿಷೇಶತೆಯನ್ನು ಹೊಂದಿವೆ, ಈ ಹಬ್ಬಗಳನ್ನು ಸಂತೋಷದ ಜೊತೆಗೆ ಧಾರ್ಮಿಕ ಆಚಾರ ವಿಚಾರಗಳನ್ನು ಅಳವಡಿಸಿಕೊಂಡು ಆಚರಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿಯ ಎರಡನೇ ಖತೀಬರಾದ ಜನಾಬ್ ಹಾಫಿಝ್ ಅಬ್ದುಲ್ಲಾ, ಮೌಝನ್ ಅಬುತಾಲಿಬ್, ಕಮಿಟಿಯ ಪದಾಧಿಕಾರಿಗಳು, ಸಮುದಾಯದ ಮುಖಂಡರು, ಯುವಕರು ಮತ್ತು ಮಕ್ಕಳು ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಹಂಚಿಕೊಂಡರು.