ಹೊಸನಗರ : ತಾಲ್ಲೂಕಿನ ಮಣಸಟ್ಟೆ ಗ್ರಾಮದ ಮೂಡುಗಲ್ಲುವಿನಲ್ಲಿ ಮನೆ ಬೀಗ ಮುರಿದು ಸುಮಾರು ₹70 ಸಾವಿರ ಮೌಲ್ಯದ ಸಿಪ್ಪೆಗೋಟು ಅಡಿಕೆ ಕಳ್ಳತನವಾಗಿರುವ ಘಟನೆ ನಡೆದಿದ್ದು, ಮೂಡುಗಲ್ಲಿನ ನಿವಾಸಿ ಕೃಷ್ಣಮೂರ್ತಿ ಟಿ.ಎಂ. ಅವರು ಹೊಸನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನಾ ವಿವರ :
ಶಿವಮೊಗ್ಗದಲ್ಲಿ ವಾಸವಾಗಿರುವ ಕೃಷ್ಣಮೂರ್ತಿ ವಾರಾಂತ್ಯದಲ್ಲಿ ತಮ್ಮ ಗ್ರಾಮಕ್ಕೆ ಬರುತ್ತಾರೆ. ಏಪ್ರಿಲ್ 13ರ ಬೆಳಿಗ್ಗೆ 7.30ಕ್ಕೆ ಮನೆಯ ಮುಂಭಾಗದ ಬೀಗ ಹಾಕಿ ಅವರು ಶಿವಮೊಗ್ಗಕ್ಕೆ ತೆರಳಿದ್ದರು. ಆದರೆ, ಏಪ್ರಿಲ್ 18ರ ಸಂಜೆ 5 ಗಂಟೆಗೆ ಮನೆಗೆ ವಾಪಾಸಾಗುವಾಗ, ಮುಂಭಾಗದ ಬೀಗ ಮುರಿದಿದ್ದು, ಕಿಟಕಿಯ ಗಾಜು ಕೂಡ ಒಡೆಯಲ್ಪಟ್ಟಿರುವುದು ಅವರ ಗಮನಕ್ಕೆ ಬಂದಿದೆ.
ಹಿಂಬದಿಯ ಬಾಗಿಲು ತೆರೆದಿರುವುದನ್ನು ಕಂಡು, ಒಳಗಿನ ಕೊಠಡಿಯಲ್ಲಿದ್ದ 8 ಚೀಲಗಳಲ್ಲಿ ಒಟ್ಟು 3.20 ಕ್ವಿಂಟಾಲ್ ಸಿಪ್ಪೆಗೋಟು ಅಡಿಕೆ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಸ್ಥಳೀಯ ಅಡಿಕೆ ಮಂಡಿ ಮತ್ತು ಅಡಿಕೆ ವ್ಯಾಪಾರಿಗಳಲ್ಲಿ ವಿಚಾರಣ ನಡೆಸಿದರೂ ಅಡಿಕೆ ಪತ್ತೆಯಾಗದ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿಯವರು ಠಾಣೆಗೆ ದೂರು ನೀಡಿದ್ದಾರೆ.
ಘಟನೆ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

