ರಿಪ್ಪನ್‌ಪೇಟೆ : ಈದ್ ಮಿಲಾದ್ ಮತ್ತು ಗಣೇಶೋತ್ಸವ ಹಬ್ಬಗಳಲ್ಲಿ ಧ್ವನಿವರ್ಧಕ ಅಳವಡಿಕೆ ಮಾಡುವ ಸೌಂಡ್ ಸಿಸ್ಟಂ ಮಾಲೀಕರು ಕಾರ್ಯಕ್ರಮ ಆಯೋಜಕರು ಪೊಲೀಸ್ ಇಲಾಖೆಯ ಪರವಾನಗಿ ಇಲ್ಲದೆ ಧ್ವನಿವರ್ಧಕವನ್ನು ಹಾಕುವಂತಿಲ್ಲ ಎಂದು ಹೊಸನಗರ ವೃತ್ತ ನಿರೀಕ್ಷಕ ಗೌಡಪ್ಪ ಗೌಡಪ್ಪ ಖಡಕ್ ವಾರ್ನಿಂಗ್ ನೀಡಿದರು.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಹಾಗೂ ಗಣೇಶ ಹಬ್ಬದ ಅಂಗವಾಗಿ ಸುತ್ತಮುತ್ತಲಿನ ಸೌಂಡ್ ಸಿಸ್ಟಂ ಮಾಲೀಕರಿಗಾಗಿ ಮುಂಜಾಗ್ರತ ಕ್ರಮವಾಗಿ ಸಭೆ ನಡೆಸಿ, ಸುಪ್ರೀಂಕೋರ್ಟ್‌ನ ಆದೇಶವನ್ನು ಧ್ವನಿವರ್ಧಕ ಅಳವಡಿಕೆಯ ಸಂದರ್ಭದಲ್ಲಿ ಕಡ್ಡಾಯವಾಗಿ ಪಾಲಿಸುವುದು. ಗಣೇಶ ಹಬ್ಬದ ಸಂದರ್ಭದಲ್ಲಿ ತಾವುಗಳು ಟ್ರ್ಯಾಕ್ಟರ್ ಮತ್ತು ಟ್ಪೈಲರ್ ಗಳಿಗೆ ಪರವಾನಗಿ ಇದೆಯೇ ಮತ್ತು ಚಾಲಕ ಲೈಸೆನ್ಸ್ ಪಡೆದಿದ್ದಾರೆಯೇ? ಯಾವುದೇ ಮುಖಂಡರ ಒತ್ತಾಸೆಗೆ ಒಳಗಾಗದೆ ಕಾನೂನಿನಡಿಯಲ್ಲಿಯೇ ತಾವು ಕಾರ್ಯ ನಿರ್ವಹಿಸಿ ಇಲ್ಲದೆ ಹೋದರೆ ನಿಮ್ಮ ಮೇಲೆ ದೂರು ದಾಖಲಿಸಬೇಕಾಗುತ್ತದೆಂದು ಧ್ವನಿವರ್ಧಕದವರಿಗೆ ನ್ಯಾಯಾಲಯದ ಆದೇಶದಲ್ಲಿನ ಮಾಹಿತಿಯನ್ನು ಸವಿಸ್ತಾರವಾಗಿ ಮನವರಿಕೆ ಮಾಡಿದರು.
ಡಿ.ಜೆ. ಅಳವಡಿಕೆ ಹಾಗೂ ಮೈಕ್ ಸೌಂಡ್ ಹೆಚ್ಚು ಹಾಕಿದಲ್ಲಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು, ಧ್ವನಿವರ್ಧಕ ಶಬ್ದವನ್ನು ಮಿತವಾಗಿ ಇರುವಂತೆ ನೋಡಿಕೊಳ್ಳಬೇಕು. ಯಾರಾದರೂ ಸಮಿತಿಯವರ ಒತ್ತಡಕ್ಕೆ ಮಣಿದು ಮುಂದುವರೆದರೆ ಅವರು ಭಾರಿ ಸಮಸ್ಯೆ ಎದುರಿಸಬೇಕಾಗುವುದೆಂದು ತಿಳಿಸಿ, ಶೀಘ್ರದಲ್ಲಿಯೇ ಗಣೇಶ ಹಬ್ಬದ ಕುರಿತು ಜಿಲ್ಲೆಯ ಪೊಲೀಸ್ ಮತ್ತು ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಶಾಂತಿ ಸಮಿತಿಯ ಸಭೆಯನ್ನು ಕರೆಯಲಾಗುತ್ತಿದ್ದು ಆ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯವರ ಹಾಗೂ ತಮ್ಮಗಳ ಸಮ್ಮುಖದಲ್ಲಿಯೇ ಕಾನೂನಿನಡಿಯಲ್ಲಿ ಕಡ್ಡಾಯವಾಗಿ ಧ್ವನಿವರ್ಧಕ ಮತ್ತು ಡಿಜೆ ಬಳಕೆ ಹಾಗೂ ಸಮಿತಿಯವರು ಅನುಸರಿಸಬೇಕಾದ ನಿಯಮಗಳ ಕುರಿತು ಚರ್ಚಿಸಲಾಗುವುದೆಂದು ಹೇಳಿದರು.

ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಮಾತನಾಡಿ, ಕಳೆದ ವರ್ಷ ಪರ ಊರುಗಳಿಂದ ಬಂದು ಗಣೇಶೋತ್ಸವದಲ್ಲಿ ಧ್ವನಿವರ್ಧಕ ಅಳವಡಿಸಿದರ ವಿರುದ್ದ ಕೇಸ್ ದಾಖಲಿಸಲಾಗಿತ್ತು. ಇದರಿಂದಾಗಿ ಈ ವರ್ಷ ಅಡ್ವಾನ್ಸ್ ಆಗಿಯೇ ತಮ್ಮಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಭೆ ನಡೆಸಲಾಗಿದೆ. ತಾವು ಹಬ್ಬದ ಸಂದರ್ಭದಲ್ಲಿ ಯಾರದೋ ಮುಲಾಜಿಗೆ ಒಳಗಾಗದೆ ಕಡ್ಡಾಯವಾಗಿ ಕಾನೂನು ಪಾಲನೆ ಮಾಡಿ ಶಾಂತಿ ಸುವ್ಯವಸ್ಥೆಯೊಂದಿಗೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ಒಳಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶವಿದ್ದು ಆ ನಂತರದಲ್ಲಿ ಬಳಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆಯನ್ನು ನೀಡಿದರು.

