ಹೊಸನಗರ ; ತಾಲ್ಲೂಕಿನ ವಾರಂಬಳ್ಳಿ ಗ್ರಾಮದ ಸರ್ವೆ ನಂಬರ್ 58ರಲ್ಲಿ ಅರಣ್ಯ ಜಾಗದಲ್ಲಿ ನಗರ ಭಾಗದ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಅಕ್ರಮವಾಗಿ ಶೆಡ್ ನಿರ್ಮಿಸಲಾಗಿದೆ ಎಂದು ನಗರ ಅರಣ್ಯಧಿಕಾರಿಗಳಿಗೆ ವಾರಂಬಳ್ಳಿ ಗ್ರಾಮದ ಬಿ.ಎಸ್ ವಿಷ್ಣು ಎಂಬುವರು ದೂರು ನೀಡಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ವಿಷ್ಣು, ವಾರಂಬಳ್ಳಿ ಸರ್ವೆ ನಂಬರ್ 58ರಲ್ಲಿ ಸುಮಾರು 100 ಅಡಿಯಷ್ಟು ಅಗಲ ಹಾಗೂ ಉದ್ದವಾಗಿ ಅರಣ್ಯ ಜಾಗವನ್ನು ಸ್ವಚ್ಛಗೊಳಿಸಿ ತೆಂಗಿನ ಗಿಡಗಳನ್ನು ನೆಡುವುದರ ಜೊತೆಗೆ ಬೆಲೆ ಬಾಳುವ ಕಾಡು ಜಾತಿಯ ಮರಗಳನ್ನು ಕಡಿದಿದ್ದಾರೆ. ಜೊತೆಗೆ ಅಕ್ರಮವಾಗಿ ಶೆಡ್ ನಿರ್ಮಿಸಿ ಮನೆ ಕಟ್ಟುವ ಸಂಚನ್ನು ಮಾಡಲಾಗಿದೆ. ಶೆಡ್ ನಿರ್ಮಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಗಮನಕ್ಕೂ ತರಲಾಗಿದ್ದು ಆದರೇ ಅರಣ್ಯಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ ಅವರು, ನಗರ ವಲಯ ಅರಣ್ಯಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಲಾಗಿದೆ ಎಂದಿದ್ದಾರೆ.

ಶಾಸಕ ಆರಗ ಜ್ಞಾನೇಂದ್ರರವರ ಪಾತ್ರವಿಲ್ಲ :
ಕಳೆದ 15 ದಿನಗಳ ಹಿಂದೆ ಅರಣ್ಯ ಇಲಾಖೆಯ ಜಾಗದಲ್ಲಿ ಶೆಡ್ ನಿರ್ಮಿಸಲಾಗಿದ್ದು ಆ ಸಂದರ್ಭದಲ್ಲಿ ಯಾವುದೇ ರಾಜಕೀಯ ಮಾತಿಗೆ ಮನ್ನಣೆ ನೀಡದೇ ಅರಣ್ಯ ಇಲಾಖೆಯವರು ತೆರವುಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಶೆಡ್ ನಿರ್ಮಿಸಿದವರು ಶಾಸಕ ಆರಗ ಜ್ಞಾನೇಂದ್ರರ ಮನೆಗೆ ಹೋಗಿದ್ದರು ಶಾಸಕರು, ಒಬ್ಬರು ಅರಣ್ಯ ಜಾಗದಲ್ಲಿ ಮನೆ ಕಟ್ಟಿಕೊಂಡರೆ ಎಲ್ಲರೂ ಅರಣ್ಯ ಜಾಗದಲ್ಲಿ ಮನೆ ಕಟ್ಟಿಕೊಳ್ಳುತ್ತಾರೆ. ಅರಣ್ಯ ಜಾಗದಲ್ಲಿ ಮನೆ ಕಟ್ಟಿಕೊಳ್ಳುವುದು ಬೇಡ ಕೇಸ್ ವಗೈರೆ ಹಾಕಿಸಿಕೊಳ್ಳುವುದು ಬೇಡ. ಬೇರೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಳ್ಳಿ ಎಂದು ಬುದ್ಧಿಮಾತು ಹೇಳಿದ್ದಾರೆ ಎನ್ನಲಾಗಿದೆ.

ತೀರ್ಥಹಳ್ಳಿ ಕೈ ಮುಖಂಡರು ಸಾಥ್ !?
ವಾರಂಬಳ್ಳಿ ಗ್ರಾಮದ ಸರ್ವೆ ನಂಬರ್ 58ರಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ಶೆಡ್ ನಿರ್ಮಿಸಲು ಜಾಗ ಸ್ವಚ್ಛಗೊಳಿಸಲು ತೀರ್ಥಹಳ್ಳಿಯ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ಪ್ರಚೋದಿಸಿದ್ದಾರೆ. ಮನೆ ಶೆಡ್ ನಿರ್ಮಿಸಿ ಏನೂ ಆಗುತ್ತದೊ ನೋಡೋಣ ಎಂದು ಕಾಂಗ್ರೆಸ್ ಮುಖಂಡರನ್ನು ಕಳುಹಿಸಿ ಶೆಡ್ ನಿರ್ಮಿಸಲಾಗಿದೆ ಎಂದು ಆ ಭಾಗದ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಒಬ್ಬರಿಗೆ ಶೆಡ್ ಮನೆ ನಿರ್ಮಿಸಲು ಬಿಟ್ಟರೆ ನಾಳೆಯಿಂದ ನೂರಾರು ಶೆಡ್, ಮನೆಗಳು ನಿರ್ಮಾಣವಾಗಲಿದ್ದು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡರೆ ಒಳ್ಳೆಯದು. ರಾಜಕೀಯ ನಾಯಕರ ಮಾತಿಗೆ ಮಣೆ ಹಾಕಿದರೆ ಮುಂದಾಗುವ ಅನಾಹುತಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳೆ ಪೂರ್ಣ ಜವಾಬ್ದಾರರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದು, ಶ್ರೀಮಂತರಿಗೆ ಒಂದು ಕಾನೂನು ಬಡವರಿಗೆ ಒಂದು ಕಾನೂನು ಇರುವುದಿಲ್ಲ. ನಾವು ಬಡವರು ಸರ್ಕಾರಿ ಬೇರೆ ಜಾಗವಿಲ್ಲ ನಾವು ಅರಣ್ಯ ಇಲಾಖೆಯ ಜಾಗದಲ್ಲಿ ಮನೆ ಕಟ್ಟಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





