ರಿಪ್ಪನ್‌ಪೇಟೆ ; ಮೌಲ್ಯಗಳ ಪುನರುತ್ಥಾನಕ್ಕೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಮಹತ್ವ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯಮಹಾಸ್ವಾಮೀಜಿ ಹೇಳಿದರು.
ಹೆದ್ದಾರಿಪುರ ಶ್ರೀರಾಮಕೃಷ್ಣ ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅವೇರ್‌ನೆಸ್ ಶ್ರೀಶಿವರಾಮಕೃಷ್ಣ ಇಂಟರ್‌ನ್ಯಾಷನಲ್ ಸ್ಕೂಲ್ ಪೂರ್ವ ಪ್ರಾಥಮಿಕ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಪ್ರತಿಭಾ ಪ್ರದರ್ಶನ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಶಿಕ್ಷಣಕ್ಕೆ ಜಗತ್ತನ್ನು ಬದಲಾಯಿಸುವ ಶಕ್ತಿಯಿದ್ದು ಆರ್ಥಿಕ ಬೆಳವಣಿಗೆ ಸಾಮಾಜಿಕ, ಸಾಮರಸ್ಯ, ಜ್ಞಾನ. ಹೀಗೆ ಗುಣಮಟ್ಟದ ಮೌಲ್ಯಾಧಾರಿತ ಶಿಕ್ಷಣಕ್ಕೆ ಪೋಷಕ ವರ್ಗ ಮತ್ತು ಶಿಕ್ಷಕ ಸಮೂಹ ಹೆಚ್ಚಿನ ಆಸಕ್ತಿ ವಹಿಸುವಂತಾಗ ಬೇಕು. ವಿದ್ಯಾರ್ಥಿಗಳಲ್ಲಿ ಶಿಸ್ತು, ವ್ಯಕ್ತಿತ್ವ, ಸಮಯ ಪ್ರಜ್ಞೆ ಮತ್ತು ನಾಯಕತ್ವ ಗುಣ ಬೆಳಸುವ ಅಗತ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀರಾಮಕೃಷ್ಣ ಇನ್‌ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅವೇರ್‌ನೆಸ್ ವ್ಯವಸ್ಥಾಪಕ ಸಿ.ಕೆ.ಶಿವರಾಮ ವಹಿಸಿದ್ದರು.
ಕ್ಷೇತ್ರ ಶಾಸಕ ಮಾಜಿ ಸಚಿವ ಆರಗ ಜ್ಞಾನೇಂದ್ರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ನಮ್ಮ ಮಕ್ಕಳಿಗೆ ರಾಷ್ಟ್ರನಾಯಕ ಮತ್ತು ಕವಿಗಳ ಪರಿಚಯ ಮಾಡಿಸುವ ಮೂಲಕ ಭಾರತೀಯ ಸಂಸ್ಕೃತಿ ಸನಾತನ ಧರ್ಮದ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಸುಸಂಸ್ಕೃತರನ್ನಾಗಿ ಬೆಳೆಸಬೇಕು ಎಂದರು.
ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್‌ನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಹೆಚ್.ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕಲಿಕೆ ಸಂದರ್ಭದಲ್ಲಿ ಮಕ್ಕಳು ವಿಸ್ತಾರವಾಗಿ ಆಲೋಚಿಸುವ ಮತ್ತು ತಮಗೆ ಲಭ್ಯವಾಗುವ ಹಲವು ಗ್ರಂಥಗಳ ಮತ್ತು ನೀತಿ ಕಥೆ ಸೇರಿದಂತೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಕಥೆಗಳನ್ನು ಓದಿ ಮನನ ಮಾಡಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಓದಿನೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗುವಂತೆ ಕರೆ ನೀಡಿದರು.
ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವಾಸಪ್ಪಗೌಡ, ಹೆದ್ದಾರಿಪುರ ಗ್ರಾಮ ಪಂಚಾಯಿತ್ ಅಧ್ಯಕ್ಷೆ ವಿನಂತಿ, ಕ್ಷೇತ್ರಶಿಕ್ಷಣಾಧಿಕಾರಿ ಹೆಚ್.ಆರ್.ಕೃಷ್ಣಮೂರ್ತಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಹಾರೋಹಿತ್ತಲು, ಗ್ರಾಮ ಪಂಚಾಯಿತ್ ಮಾಜಿ ಅಧ್ಯಕ್ಷ ಹೆಚ್.ಕೆ.ನಾಗರಾಜ, ಬಟ್ಟೆಮಲ್ಲಪ್ಪ ವ್ಯಾಸಮಹರ್ಷಿ ಗುರುಕುಲ ಸಂಸ್ಥಾಪಕ ಮಂಜುನಾಥ ಬ್ಯಾಣದ, ಅಮೃತ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಚಿನ್‌ಗೌಡ, ಎಂ.ಜಿ.ಅಪೂರ್ವ, ವಿನುತ ಮುಖ್ಯಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಕಿ ಜಿ.ವೈ.ರಶ್ಮಿ ಸ್ವಾಗತಿಸಿದರು. ವಿದ್ಯಾ ವಾರ್ಷಿಕ ವರದಿ ಓದಿದರು. ಅನುಶ್ರೀ ನಿರೂಪಿಸಿದರು. ಎಸ್.ಎನ್.ರಶ್ಮಿ ವಂದಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನಾ ನೃತ್ಯ ರೂಪಕ ಜರುಗಿತು.
ಸಾಲಬಾಧೆಗೆ ಬೇಸತ್ತು ನೇಣಿಗೆ ಶರಣಾದ ರೈತ
ರಿಪ್ಪನ್‌ಪೇಟೆ ; ಸಾಲಬಾಧೆಗೆ ಬೇಸತ್ತು ರೈತರೊಬ್ಬರು ತಮ್ಮದೇ ಅಡಿಕೆ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ರಿಪ್ಪನ್‌ಪೇಟೆ ಠಾಣಾ ವ್ಯಾಪ್ತಿಯ ಹರತಾಳು ಬಳಿಯ ಘನಂದೂರು ಗ್ರಾಮದಲ್ಲಿ ನಡೆದಿದೆ.
ಹರತಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ ಹುಣಸವಳ್ಳಿ ಘನಂದೂರು ಗ್ರಾಮದ ಪುಟ್ಟನಾಯ್ಕ್ (80) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.
ಮೃತ ಪುಟ್ಟನಾಯ್ಕ್ ಅವರು ಕೃಷಿ ಉದ್ದೇಶದಿಂದ ಸಾಲ ಮಾಡಿದ್ದು ಬೆಳೆ ನಷ್ಟದಿಂದ ಸಾಲ ಕಟ್ಟಲಾಗದೇ ಬ್ಯಾಂಕ್ ಮತ್ತು ಸಂಘ ಸಂಸ್ಥೆಗಳಲ್ಲಿ ಸಾಲಕ್ಕೆ ಬಡ್ಡಿ ಹೆಚ್ಚಾದ ಕಾರಣ ಬೇಸತ್ತಿದ್ದರು ಎನ್ನಲಾಗಿದೆ.
ಮೃತ ವ್ಯಕ್ತಿ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್ ಹೊಸನಗರ ಶಾಖೆಯಲ್ಲಿ ತೋಟಗಾರ್ಸ್ ಅಡಿಕೆ ಮಂಡಿಯಲ್ಲಿ ಪಿ.ಎಲ್.ಡಿ.ಬ್ಯಾಂಕ್ 17.50 ಲಕ್ಷ ರೂ. ಸಾಲ ಮಾಡಿದ್ದ ಎನ್ನಲಾಗಿದೆ.
ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದು, ಪುತ್ರ ನೀಡಿದ ದೂರಿನನ್ವಯ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಕೇಸ್ ದಾಖಲಿಸಿಕೊಂಡು ಕ್ರಮ ಜರುಗಿಸಿದ್ದಾರೆ.