ತೊಗರ್ಸಿಯಲ್ಲಿ ದಾಸೋಹ ಸೇವೆ ಮಠದ ಭಕ್ತ ಸಮೂಹದಿಂದಲೇ ಆಗಲಿ ; ತಹಸೀಲ್ದಾರರಿಗೆ ಮನವಿ

Written by malnadtimes.com

Published on:

ರಿಪ್ಪನ್‌ಪೇಟೆ ; ಇತಿಹಾಸ ಪ್ರಸಿದ್ದ ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರೆಯಲ್ಲಿ ಮಳೆಹಿರೇಮಠದಿಂದ ನಡೆಸಲಾಗುತ್ತಿದ್ದ ದಾಸೋಹ ಕಾರ್ಯಕ್ರಮವನ್ನು ಏಕಾಏಕಿ ಬದಲಾಯಿಸಿ ಮುಜರಾಯಿ ಇಲಾಖೆಯಿಂದ ನಡೆಸಿದ್ದು ಸರಿಯಲ್ಲ. ಈ ಹಿಂದೆ ಮಠದ ಭಕ್ತ ಸಮೂಹದವರೇ ದಾಸೋಹವನ್ನು ಶಿಸ್ತುಬದ್ದವಾಗಿ ಸುವ್ಯವಸ್ಥೆಯಿಂದ ನಡೆಸುತ್ತಿದ್ದು ಏಕಾಏಕಿ ಬದಲಾವಣೆ ಮಾಡಿರುವ ಕ್ರಮ ಸರಿಯಾಗಿಲ್ಲ ಎಂದು ಆರೋಪಿಸಿ ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಮಾಜಿ ಉಪಾದ್ಯಕ್ಷ ಹಾಗೂ ವೀರಶೈವ ಸಮಾಜದ ಮುಖಂಡ ಜಿ.ಎಂ.ದುಂಡರಾಜಗೌಡ ಮತ್ತು ಗ್ರಾಮ ಪಂಚಾಯ್ತಿ ಸದಸ್ಯ, ದೇವಸ್ಥಾನದ ಭಕ್ತ ಜಿ.ಡಿ.ಮಲ್ಲಿಕಾರ್ಜುನ ತಹಸೀಲ್ದಾರರಿಗೆ ಪತ್ರ ಬರೆಯುವ ಮೂಲಕ ಈ ಹಿಂದಿನಂತೆ ಮಠದ ಮತ್ತು ಭಕ್ತ ಸಮೂಹದವರೇ ನಿರ್ವಹಣೆ ಮಾಡಲು ಅವಕಾಶ ಮಾಡುವಂತೆ ಆಗ್ರಹಿಸಿದ್ದಾರೆ.

WhatsApp Group Join Now
Telegram Group Join Now
Instagram Group Join Now

ರಿಪ್ಪನ್‌ಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಹಿಂದೂ ದೇವಾಲಯಗಳ ನಿರ್ವಹಣೆಯಲ್ಲಿ ಸೋತಿದೆ. ದೇವಾಲಯಗಳಿಂದ ಬರುವಂತಹ ಆದಾಯವನ್ನು ಅನ್ಯಕೋಮುಗಳ ಉದ್ದಾರಕ್ಕೆ ಬಳಸುತ್ತಿದೆ. ತಲೆತಲಾಂತರದಿಂದ ನಡೆದು ಕೊಂಡು ಬಂದ ಸಂಪ್ರದಾಯ ದೇಗುಲಗಳ ಅಚಾರ ವಿಚಾರಗಳನ್ನು ಸರಿಯಾಗಿ ನಡೆಸುತ್ತಿಲ್ಲ. ಕೂಡಲೇ ಸರ್ಕಾರ ಹಿಂದೂ ದೇವಾಲಯಗಳನ್ನು ಭಕ್ತರ ಸುಪರ್ದಿಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಯಾವುದೇ ಕಾರಣಕ್ಕೂ ಮಠಗಳ ಮೇಲೆ ಪ್ರಭುತ್ವದ ದಾಳಿಯನ್ನು ಸಹಿಸುವುದಿಲ್ಲ. ಪೂಜೆ ರಥೋತ್ಸವ ಧಾರ್ಮಿಕ ಕಾರ್ಯಕ್ರಮಗಳು ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ ಹಾಗೆಯೇ ಜಾತ್ರಾ ಮಹೋತ್ಸವಕ್ಕೆ ರಾಜ್ಯ-ಹೊರರಾಜ್ಯ ವ್ಯಾಪ್ತಿಯಿಂದ ಸಹಸ್ರಾರು ಭಕ್ತರು ಬಂದು ಹೋಗುತ್ತಾರೆ. ದೂರದೂರುಗಳಿಂದ ಬರುವ ಭಕ್ತರಿಗೆ ಅನ್ನದಾಸೋಹ ಮಾಡಲಾಗುತ್ತದೆ. ಆದರೆ ಈ ಭಾರಿ ಪೂರ್ವಭಾವಿ ಸಭೆಯಲ್ಲಿ ನುಡಿದಂತೆ ನಡೆಯದೆ ಮಠದಿಂದ ಅನ್ನದಾಸೋಹ ಮಾಡುವುದನ್ನು ನಿಷೇಧಿಸಲಾಗಿ ದೂರದೂರುಗಳಿಂದ ರಥೋತ್ಸವಕ್ಕೆ ಬಂದ ಭಕ್ತರು ಉಪವಾಸದಿಂದ ವಾಪಾಸ್ ಮರಳುವಂತಾಯಿತು
ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಇಂತಹ ಕಹಿ ಘಟನೆಗಳು ಮರುಕಳಿಸದಂತೆ ಮುಜರಾಯಿ ಇಲಾಖೆಯ ತಹಸೀಲ್ದಾರ್, ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಗಮನಹರಿಸಿ ತೊಗರ್ಸಿ ಮಠದಲ್ಲಿ ಅಮಾವಾಸ್ಯೆ ಮತ್ತು ಹಬ್ಬ-ಹರಿದಿನಗಳ ಜಾತ್ರಾ ಮಹೋತ್ಸವದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತರಿಗೆ ಈ ಹಿಂದೆ ನಡೆಸಿಕೊಂಡು ಬರುವಂತೆ ಮಳೆಹಿರೇಮಠದ ಶ್ರೀಗಳ ಸಮ್ಮುಖದಲ್ಲಿ ಭಕ್ತರ ಸಹಕಾರದಲ್ಲಿ ದಾಸೋಹ ವ್ಯವಸ್ಥೆ ಮುಂದುವರಿಸಲು ಆವಕಾಶ ಮಾಡಿಕೊಡುವಂತೆ ಪತ್ರದ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಹಾಲಸ್ವಾಮಿಗೌಡ ಬೆಳಕೋಡು, ಕುಂಸೇರಮನೆ ಜಯಪ್ಪ ಆಲವಳ್ಳಿ, ಮಲ್ಲೇಶಪ್ಪ, ಕೆ.ಎಂ.ರಾಜುಗೌಡ, ಬಿ.ಎಸ್.ಈಶ್ವರಪ್ಪಗೌಡ ಬೈದೂರು, ಬಸವರಾಜ. ರಿಪ್ಪನ್‌ಪೇಟೆ, ದೇವರಾಜಗೌಡ ಗವಟೂರು ಇನ್ನಿತರರು ಹಾಜರಿದ್ದರು.

Leave a Comment