ಅಡಿಕೆ ಮರದಿಂದ ಬಿದ್ದು ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ವಿಮಾ ಪರಿಹಾರದ ಚೆಕ್ ವಿತರಣೆ

Written by malnadtimes.com

Published on:

ಹೊಸನಗರ ; ಅಡಿಕೆ ಗೊನೆಗಾರರು ಕೆಲಸ ಮಾಡುವ ವೇಳೆ ಆಯತಪ್ಪಿ ಮರದಿಂದ ಬೀಳುವ ಪ್ರಕರಣಗಳು ಆಗಾಗ್ಗೆ ನಡೆಯುತ್ತವೆ. ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ಬೆಳೆಗಾರರು ವಿಮಾಸೌಲಭ್ಯ ಹೊಂದುವುದು ಅತಿ ಅಗತ್ಯ ಎಂದು ಮಾಮ್‌ಕೋಸ್ ಉಪಾಧ್ಯಕ್ಷ ಎಚ್.ಎಸ್.ಮಹೇಶ್ ಹುಲ್ಕುಳಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಅವರು ಮಾಮ್‌ಕೋಸ್ ಶಾಖಾ ಕಛೇರಿಯಲ್ಲಿ ಅಡಿಕೆ ಮರದಿಂದ ಬಿದ್ದು ಮೃತಪಟ್ಟ ಗೊನೆಗಾರನ ಕುಟುಂಬದ ಸದಸ್ಯರಿಗೆ 6 ಲಕ್ಷ ರೂ. ವಿಮಾ ಪರಿಹಾರ ಮೊತ್ತದ ಚೆಕ್ ಹಸ್ತಾಂತರ ಮಾಡಿ ಮಾತನಾಡಿದರು.

ಮಾಮ್‌ಕೋಸ್ ಸಂಸ್ಥೆಯು ಹಲವು ವರ್ಷಗಳಿಂದ ಬೆಳೆಗಾರರ ಹಿತ ಕಾಯಲು ಶ್ರಮಿಸುತ್ತಿದೆ. ಮಾರುಕಟ್ಟೆ ಧಾರಣೆ, ಸ್ಥಿರತೆಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವ ಜೊತೆಗೆ ಬೆಳೆಗಾರರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಯತ್ನ ನಿರಂತರವಾಗಿ ಸಂಸ್ಥೆಯ ಕಡೆಯಿಂದ ನಡೆಯುತ್ತಿದೆ. ಸಂಸ್ಥೆಯ ಸದಸ್ಯರಿಗೆ ಆರೋಗ್ಯ ವಿಮಾ ಸೇರಿದಂತೆ ಸಂಭವನೀಯ ಅವಘಡಗಳಿಗೆ ಗುಂಪುವಿಮಾ ಅಭಿರಕ್ಷೆ ಯೋಜನೆಯಡಿಯಲ್ಲಿ ವಿಮಾ ಸುರಕ್ಷೆ ಹೊಂದಲು ಅವಕಾಶ ಕಲ್ಪಿಸಿದೆ. ಬೆಳೆಗಾರರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.

ಸಂತ್ರಸ್ಥ ಕುಟುಂಬದ ಸದಸ್ಯರು ಹಾಗೂ ಬೆಳೆಗಾರರಿಗೆ ಅವರು ಸಾಂತ್ವನ ನುಡಿಗಳನ್ನು ನುಡಿದು, ವಿಮಾ ಹಣವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ವೇಳೆ ಷೇರುದಾರ ಕೆ.ಜಿ. ಶ್ರೀವತ್ಸ, ಮೃತ ಕೊನೆಗಾರ ಪ್ರದೀಪ್ ಅವರ ಪತ್ನಿ ಕೆ.ಎನ್.ಜಯಂತಿ, ಸಂಸ್ಥೆಯ ನಿರ್ದೇಶಕರಾದ ಕೆ.ವಿ.ಕೃಷ್ಣಮೂರ್ತಿ, ಎಚ್.ಧರ್ಮೆಂದ್ರ, ವ್ಯವಸ್ಥಾಪಕ ಎಸ್.ಕೆ.ಗಣಪತಿ, ಸಿಬ್ಬಂದಿಗಳಾದ ಮಧುಸೂದನ್, ವಿದ್ಯಾಶ್ರೀ, ದಿವ್ಯ ಇನ್ನೂ ಮುಂತಾದವರು ಉಪಸ್ಥಿದರಿದ್ದರು.

Leave a Comment