ರಿಪ್ಪನ್‌ಪೇಟೆ ; ಸರ್ಕಾರ ಜಾರಿಗೆ ತಂದಿರುವ ಕಲಿಕಾ ಹಬ್ಬ ಕಾರ್ಯಕ್ರಮವು ಉತ್ತಮ ರೂಪುರೇಷೆಯನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಉದಯೋನ್ಮುಖ ಪ್ರತಿಭೆಯನ್ನು ಗುರುತಿಸುವ ವಿಭಿನ್ನ ಕಾರ್ಯಕ್ರಮವಾಗಿದೆ ಎಂದು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಆರ್. ರಂಗನಾಥ್ ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಪದನಿಮಿತ್ತ ಬ್ಲಾಕ್ ಯೋಜನ ಸಮನ್ವಯಾಧಿಕಾರಿಗಳ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಹೊಸನಗರ, ಗ್ರಾಮ ಪಂಚಾಯಿತಿ ಬಾಳೂರು, ಸಮೂಹ ಸಂಪನ್ಮೂಲ ಕೇಂದ್ರ ರಿಪ್ಪನ್‌ಪೇಟೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಬಾಳೂರು ಇವರ ಸಂಯುಕ್ತಾಶ್ರಯದಲ್ಲಿ ಬಾಳೂರು ಶಾಲೆಯಲ್ಲಿ ರಿಪ್ಪನ್‌ಪೇಟೆ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಆಧಾರಿತ 2024-25ನೇ ಸಾಲಿನ ಕಲಿಕಾ ಹಬ್ಬವನ್ನು ಆಯೋಜಿಸಲಾಗಿದ್ದು, ಈ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದು ಬರೀ ಕಲಿಕಾ ಹಬ್ಬವಲ್ಲ, ಕಥೆಯನ್ನು ಕಟ್ಟುವ, ಕಥೆಯನ್ನು ಹೇಳುವ, ನೆನಪಿನ ಶಕ್ತಿಯನ್ನು ಗುರುತಿಸುವ, ಕಲಿಯುವ ಹಾಗೂ ಕಲಿಸುವ ಆಸಕ್ತಿಯನ್ನು ಬೆಳೆಸುವ ಕಾರ್ಯಕ್ರಮವೇ ಕಲಿಕಾ ಹಬ್ಬವಾಗಿದೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ಸಿಕ್ಕಾಗ ಅದನ್ನು ಬಳಸಿಕೊಳ್ಳಬೇಕು ಎಂದ ಅವರು, ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಸಹಕಾರ ಅತ್ಯಗತ್ಯ ಎಂದರು.
ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಎಷ್ಟು ಅಗತ್ಯವೋ ಓದುವುದರಲ್ಲಿ ಸಹ ಅಷ್ಟೇ ಆಸಕ್ತಿ ವಹಿಸಬೇಕು. ವಿದ್ಯಾರ್ಥಿಗಳ ಓದು ಹಾಗೂ ಕಾರ್ಯ ಚಟುವಟಿಕೆಯನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು, ಓದಿನೆಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ ಜೆ ಲೋಕೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಾಳೂರು ಗ್ರಾಪಂ ಅಧ್ಯಕ್ಷ ಶ್ರೀನಿವಾಸ್ ಆಚಾರ್, ಪಿಡಿಒ ಭರತ್, ಸದಸ್ಯರಾದ ಲೀಲಾವತಿ ದೊಡ್ಡಯ್ಯ, ಹೊಸನಗರ ಕ.ರಾ.ಸ.ನೌ. ಸಂಘದ ಅಧ್ಯಕ್ಷ
ಸೋಮಶೇಖರ್ ಬಂಡಿ, ಗೌರವಾಧ್ಯಕ್ಷ ಜಗದೀಶ್ ಕಾಗಿನಲ್ಲಿ, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ವಾಣಿ ಟೀಕಪ್ಪ, ಬಡ್ತಿ ಮುಖ್ಯ ಶಿಕ್ಷಕ ದುಗ್ಗಪ್ಪ, ಸಿ.ಆರ್.ಪಿ. ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಸಿಆರ್‌ಪಿ ಮಂಜುನಾಥ್ ಸ್ವಾಗತಿಸಿದರು. ಸಹ ಶಿಕ್ಷಕ ಈಶ್ವರಪ್ಪ ಎಂ.ಎಂ ವಂದಿಸಿದರು.