ಶಿವಮೊಗ್ಗ

ಶಿವಮೊಗ್ಗ ದಸರಾ ಆನೆ ರಂಪಾಟ: ಅರಣ್ಯಾಧಿಕಾರಿಗಳ ಅಮಾನತಿಗೆ ‘ಕರವೇ ಸಿಂಹಸೇನೆ’ ಆಗ್ರಹ

'Karave Simhasene' demands suspension of forest officials

Shivamogga KaRaVe

ಶಿವಮೊಗ್ಗ: ನಗರದಲ್ಲಿ ನಡೆದ ದಸರಾ ಮೆರವಣಿಗೆಯಲ್ಲಿ ಆನೆಗಳು ನಿಯಂತ್ರಣ ತಪ್ಪಿ ಓಡಿದ ಘಟನೆಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸಿಂಹಸೇನೆ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು.

WhatsApp Group Join Now
Telegram Group Join Now
Instagram Group Join Now

ನಿಯಮ ಉಲ್ಲಂಘಿಸಿ ಆನೆಗಳನ್ನು ಬಳಸಿಕೊಂಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಟಗಾರ್ ಹಾಗೂ ಸಿಸಿಎಫ್ ಹನುಮಂತಪ್ಪ ಅವರನ್ನು ತಕ್ಷಣವೇ ಕೆಲಸದಿಂದ ಅಮಾನತುಗೊಳಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಳ್ಳಲಾಗಿದ್ದ ಈ ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ರವಿಪ್ರಸಾದ್ ಅವರು ಇಲಾಖೆಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.

ಅನಾರೋಗ್ಯ ಮತ್ತು ಅಪೌಷ್ಟಿಕತೆ:

ಇತ್ತೀಚೆಗಷ್ಟೇ ಸಕ್ರೆಬೈಲು ಆನೆ ಬಿಡಾರದ ‘ಶೌರ್ಯ’ ಎಂಬ ಆನೆ ಮೃತಪಟ್ಟಿದ್ದು, ‘ವಿಕ್ರಾಂತ್’ ಮತ್ತು ‘ಬಾಲಣ್ಣ’ ಎಂಬ ಆನೆಗಳು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿವೆ. ಬಿಡಾರದ ಆನೆಗಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.

ತರಬೇತಿ ಇಲ್ಲದ ಆನೆಗೆ ಅಂಬಾರಿ:

ಸರಿಯಾದ ತರಬೇತಿ ಪಡೆದಿದ್ದ ‘ಸಾಗರ್’ ಆನೆಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರನೆ ಬದಲಾಯಿಸಲಾಗಿದೆ. ಯಾವುದೇ ತರಬೇತಿ ಇಲ್ಲದ ‘ಸೋಮಣ್ಣ’ ಎಂಬ ಆನೆಗೆ ಅಂಬಾರಿ ಹೊರಿಸಿದ್ದರಿಂದ, ಅದು ಗಾಬರಿಯಿಂದ ದಿಕ್ಕಾಪಾಲಾಗಿ ಓಡಿ ಅಂಬಾರಿ ಧ್ವಂಸಗೊಂಡಿದೆ. ಈ ಘಟನೆಯಿಂದ ಶಿವಮೊಗ್ಗದ ಗೌರವಕ್ಕೆ ರಾಷ್ಟ್ರಮಟ್ಟದಲ್ಲಿ ಧಕ್ಕೆಯಾಗಿದೆ.

ಭ್ರಷ್ಟಾಚಾರ ಮತ್ತು ಕಾನೂನು ಉಲ್ಲಂಘನೆ:

ಆನೆಗಳ ಆಹಾರಕ್ಕಾಗಿ 5.5 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿದ್ದರೂ, ಆನೆಗಳಿಗೆ ಕೊಳೆತ ಆಹಾರ ನೀಡಲಾಗುತ್ತಿದೆ. ಸೂಕ್ತ ಪಶುವೈದ್ಯಾಧಿಕಾರಿಗಳ ನೇಮಕವಾಗಿಲ್ಲ ಹಾಗೂ ಆನೆಗಳ ಆರೋಗ್ಯ ತಪಾಸಣೆಯೂ ನಡೆದಿಲ್ಲ. ಮೆರವಣಿಗೆಯಲ್ಲಿ ಭಾಗವಹಿಸಲು ಸರ್ಕಾರದಿಂದ ಯಾವುದೇ ಅಧಿಕೃತ ಒಪ್ಪಿಗೆ ಪತ್ರ ಇರಲಿಲ್ಲ, ಈಗ ನಕಲಿ ದಾಖಲೆ ಸೃಷ್ಟಿಸಲಾಗುತ್ತಿದೆ.

ದೊಡ್ಡ ಅನಾಹುತ ತಪ್ಪಿದೆ:

ದಸರಾ ಉತ್ಸವದ ವೇಳೆ ಫ್ರೀಡಂ ಪಾರ್ಕ್‌ನಲ್ಲಿ ಆನೆಗಳು ರೊಚ್ಚಿಗೆದ್ದಾಗ ಸಾರ್ವಜನಿಕರು ಪ್ರಾಣಾಪಾಯದಿಂದ ಕೂದಲೆಳೆ ಜಂಟಿ ಪಾರಾಗಿದ್ದಾರೆ. ಒಂದು ವೇಳೆ ಕಾಲ್ತುಳಿತ ಸಂಭವಿಸಿದ್ದರೆ ನೂರಾರು ಜನ ಬಲಿಯಾಗುತ್ತಿದ್ದರು. ವನ್ಯಜೀವಿ ಕಾನೂನುಗಳನ್ನು ಗಾಳಿಗೆ ತೂರಿ, ರಾಜಕೀಯ ಒತ್ತಡಕ್ಕೆ ಮಣಿದು ಇಂತಹ ನಿರ್ಧಾರ ಕೈಗೊಂಡಿರುವ ಅಧಿಕಾರಿಗಳ ವಿರುದ್ಧ ಕಠಿಣ ತನಿಖೆಯಾಗಬೇಕು. ಶಿವಮೊಗ್ಗದಲ್ಲೇ ಹಲವು ವರ್ಷಗಳಿಂದ ಬೀಡುಬಿಟ್ಟು ನಿರ್ಲಕ್ಷ್ಯ ವಹಿಸಿರುವ ಈ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸಂಘಟನೆ ಎಚ್ಚರಿಸಿದೆ.

ಈ ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ರವಿಪ್ರಸಾದ್ ಎಂ., ಜಿಲ್ಲಾಧ್ಯಕ್ಷ ಮಧುಸೂದನ್ ಎಂ., ಪರಿಸರ ನಾಗರಾಜ್, ನಾಗರಾಜ್ ಶೆಟ್ಟರ್, ದಿಲೀಪ್ ನಾಡಿಗ್ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!