ಶಿವಮೊಗ್ಗ: ನಗರದಲ್ಲಿ ಅದ್ದೂರಿಯಾಗಿ ಸಾಗಬೇಕಿದ್ದ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಭಾರೀ ಅವಘಡ ಸಂಭವಿಸಿದೆ. ನಾಡದೇವತೆ ಚಾಮುಂಡೇಶ್ವರಿ ದೇವಿಯ ಅಂಬಾರಿ ಹೊತ್ತಿದ್ದ ‘ಸೋಮಣ್ಣ’ ಆನೆಯು ಏಕಾಏಕಿ ದಾರಿ ತಪ್ಪಿ ವಾಪಸ್ ನುಗ್ಗಿದ ಪರಿಣಾಮ, ಐತಿಹಾಸಿಕ ಶಿವಮೊಗ್ಗ ದಸರಾ ಜಂಬೂಸವಾರಿ ಅರ್ಧದಲ್ಲೇ ಮೊಟಕುಗೊಂಡಿದೆ.
ಜಂಬೂಸವಾರಿ ಮೆರವಣಿಗೆ ಆರಂಭವಾಗಿ ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಸೋಮಣ್ಣ ಆನೆಯು ನಿಯಂತ್ರಣ ಕಳೆದುಕೊಂಡು, ಬಂದ ದಾರಿಯಲ್ಲೇ ಹಿಂದಕ್ಕೆ ಓಡಿದೆ. ಆನೆಯ ಈ ಅನಿರೀಕ್ಷಿತ ವರ್ತನೆಯಿಂದಾಗಿ ಬೆನ್ನ ಮೇಲಿದ್ದ ಚಾಮುಂಡೇಶ್ವರಿ ಅಂಬಾರಿಯು ಕೆಳಗೆ ಬಿದ್ದು ಸಂಪೂರ್ಣವಾಗಿ ಹಾನಿಗೊಳಗಾಗಿದೆ.
ದಾರಿ ತಪ್ಪಿದ ಆನೆಯು ರಸ್ತೆಯಲ್ಲೇ ವಾಪಸ್ ನುಗ್ಗುತ್ತಿದ್ದಂತೆ, ಮೆರವಣಿಗೆ ವೀಕ್ಷಿಸಲು ನೆರೆದಿದ್ದ ಸಾರ್ವಜನಿಕರು ಪ್ರಾಣಭಯದಿಂದ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಈ ಗೊಂದಲದ ನಡುವೆ ಸೋಮಣ್ಣ ಆನೆಯು ರಸ್ತೆ ಬದಿ ನಿಂತಿದ್ದ ಒಂದು ಕಾರು ಹಾಗೂ ಎರಡು-ಮೂರು ಬೈಕ್‌ಗಳಿಗೆ ಗುದ್ದಿ ಹಾನಿ ಮಾಡಿದೆ.
ರೊಚ್ಚಿಗೆದ್ದಂತೆ ವರ್ತಿಸಿದ ಆನೆಯನ್ನು ನಿಯಂತ್ರಿಸಲು ಮಾವುತರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಆತಂಕದ ವಾತಾವರಣದ ನಡುವೆಯೂ, ಅರಣ್ಯ ಸಿಬ್ಬಂದಿ ಭಯದಲ್ಲೇ ಕಾರ್ಯಾಚರಣೆ ನಡೆಸಿ ಆನೆಯನ್ನು ಹತೋಟಿಗೆ ತಂದು ಸೆರೆಹಿಡಿಯುವಲ್ಲಿ ನಿರತರಾಗಿದ್ದಾರೆ. ಸಂಭ್ರಮದಿಂದ ಕಳೆಗಟ್ಟಬೇಕಿದ್ದ ದಸರಾ ಮೆರವಣಿಗೆಯು ಈ ದಿಢೀರ್ ಅವಘಡದಿಂದಾಗಿ ಆತಂಕದಲ್ಲಿ ಅಂತ್ಯ ಕಂಡಿದೆ.

