ಶಿವಮೊಗ್ಗ ಸುದ್ದಿ

ಮಳಲಿ ಮಠದಲ್ಲಿ ಅದ್ದೂರಿ ಕಾರ್ತಿಕ ಧರ್ಮ ದೀಪೋತ್ಸವ: ರಂಭಾಪುರಿ ಜಗದ್ಗುರುಗಳು ನೀಡಿದ ಸಂದವೇನು?

"ದೀಪ ಬೆಳಗಿಸುವುದು ಕೇವಲ ಧಾರ್ಮಿಕ ಸಂಪ್ರದಾಯವಲ್ಲ; ಅದು ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ಹರಡುವ ಮಹೋನ್ನತ ಜೀವನ ಸಂದೇಶವಾಗಿದೆ," ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

Malali mutt

ತೀರ್ಥಹಳ್ಳಿ: “ದೀಪ ಬೆಳಗಿಸುವುದು ಕೇವಲ ಧಾರ್ಮಿಕ ಸಂಪ್ರದಾಯವಲ್ಲ; ಅದು ಅಜ್ಞಾನದ ಕತ್ತಲೆಯನ್ನು ಕಳೆದು ಜ್ಞಾನದ ಬೆಳಕನ್ನು ಹರಡುವ ಮಹೋನ್ನತ ಜೀವನ ಸಂದೇಶವಾಗಿದೆ,” ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

WhatsApp Group Join Now
Telegram Group Join Now
Instagram Group Join Now

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಮಳಲಿ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ‘ಕಾರ್ತಿಕ ಧರ್ಮ ದೀಪೋತ್ಸವ’ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಜಗದ್ಗುರುಗಳ ಆಶೀರ್ವಚನದ ಮುಖ್ಯಾಂಶಗಳು:

ವೀರಶೈವ ಧರ್ಮದ ಶಿವತತ್ವದಲ್ಲಿ ಜ್ಯೋತಿಯು ಪರಮ ಚೈತನ್ಯದ ಸಂಕೇತವಾಗಿದೆ. ಬಾಹ್ಯವಾಗಿ ಬೆಳಗುವ ದೀಪವು ನಮ್ಮ ಅಂತರಂಗದಲ್ಲಿ ಜ್ಞಾನ, ವಿವೇಕ, ಸತ್ಯನಿಷ್ಠೆ ಮತ್ತು ಮಾನವೀಯತೆಯ ಬೆಳಕನ್ನು ಮೂಡಿಸಬೇಕು.

ಶ್ರೀ ಜಗದ್ಗುರು ರೇಣುಕಾಚಾರ್ಯರು ಪ್ರತಿಪಾದಿಸಿದ ಶಿವತತ್ವ ಪರಂಪರೆ, ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲ ಸಿದ್ಧಾಂತಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ನಿತ್ಯ ಜೀವನದ ನಡೆ-ನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು.

ಮಠಗಳು ಧರ್ಮ ಸಂರಕ್ಷಣೆಯೊಂದಿಗೆ ಶಿಕ್ಷಣ, ಸಂಸ್ಕಾರ, ಸಮಾನತೆ ಮತ್ತು ಸೇವಾ ಭಾವಗಳನ್ನು ಬೆಳೆಸುವ ಪವಿತ್ರ ಕ್ಷೇತ್ರಗಳಾಗಿವೆ. ಯುವ ಪೀಳಿಗೆಯಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮತ್ತು ಸಾಂಸ್ಕೃತಿಕ ಅಭಿಮಾನ ಮೂಡಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದರು.

ಇದೇ ಸಂದರ್ಭದಲ್ಲಿ, ಪ್ರತಿ ವರ್ಷ ಅದ್ದೂರಿಯಾಗಿ ದೀಪೋತ್ಸವ ಆಚರಿಸುತ್ತಿರುವ ಮಳಲಿ ಮಠದ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳಿಗೆ ರೇಷ್ಮೆ ಮಡಿ, ಸ್ಮರಣಿಕೆ ಹಾಗೂ ಫಲಪುಷ್ಪ ನೀಡಿ ಜಗದ್ಗುರುಗಳು ಶುಭ ಹಾರೈಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, “ಇಂದಿನ ಸಮಾಜಕ್ಕೆ ಸಾವಿರಾರು ದೀಪಗಳ ಬೆಳಕಿಗಿಂತ, ಮನುಷ್ಯನ ಮನಸ್ಸಿನಲ್ಲಿರುವ ದ್ವೇಷ, ಅಸೂಯೆ, ಅಹಂಕಾರವನ್ನು ನಿವಾರಿಸುವ ಜ್ಞಾನದ ಬೆಳಕು ಬೇಕಾಗಿದೆ. ಡಾ. ನಾಗಭೂಷಣ ಶ್ರೀಗಳ ಕ್ರಿಯಾಶೀಲತೆಯಿಂದ ಮಳಲಿ ಮಠವು ಮಲೆನಾಡಿನಲ್ಲಿ ಮನೆಮಾತಾಗಿದೆ,” ಎಂದು ಶ್ಲಾಘಿಸಿದರು.

“ಧರ್ಮವು ನಮ್ಮನ್ನು ವಿಭಜಿಸದೆ, ಉನ್ನತೀಕರಣದತ್ತ ಕೈಹಿಡಿದು ಕರೆದೊಯ್ಯುವ ಮಹಾನ್ ಶಕ್ತಿಯಾಗಿದೆ. ಅಂತರಂಗದ ಅಜ್ಞಾನ ಕಳೆಯುವ ಮಹತ್ಕಾರ್ಯವನ್ನು ಮಳಲಿ ಮಠ ಮಾಡುತ್ತಿದೆ.”
– ಆರಗ ಜ್ಞಾನೇಂದ್ರ, ಶಾಸಕ

ಮಳಲಿ ಸಂಸ್ಥಾನ ಮಠ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, “ವೀರಶೈವ ಧರ್ಮ ಸಂಸ್ಕೃತಿಯು ಮನುಷ್ಯನ ಅಂತರಂಗವನ್ನು ಪರಿಶುದ್ಧಗೊಳಿಸಿ ಸನ್ಮಾರ್ಗದತ್ತ ಕರೆದೊಯ್ಯುವ ಜೀವನ ದರ್ಶನವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಶಾಂತಿ, ಹೃದಯದಲ್ಲಿ ಶಿವಭಕ್ತಿ ಮತ್ತು ಸಮಾಜದಲ್ಲಿ ಸಹೋದರತ್ವದ ಜ್ಯೋತಿ ಬೆಳಗಬೇಕು,” ಎಂದು ಆಶಿಸಿದರು.

“ದೇವರ ಮುಂದೆ ಬೆಳಗುವ ದೀಪಕ್ಕಿಂತ ದುಃಖದಲ್ಲಿರುವವರ ಬದುಕಿನಲ್ಲಿ ಬೆಳಗಿಸುವ ದೀಪ ಶ್ರೇಷ್ಠ. ದೀಪದಿಂದ ದೀಪ ಹಚ್ಚುವಂತೆ ಜ್ಞಾನದಿಂದ ಜ್ಞಾನದ ದೀಪ ಹಚ್ಚೋಣ,”
– ಆರ್.ಎಸ್. ಪ್ರಶಾಂತ್, ಹಿರಿಯ ಪತ್ರಕರ್ತ ರಿಪ್ಪನ್‌ಪೇಟೆ

ಪ್ರಶಸ್ತಿ ಪ್ರದಾನ:

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಿ.ಎಚ್. ಬಾಳನಗೌಡ್ರ, ಡಿ.ಆರ್. ವಿಜಯ್‌ಕುಮಾರ್ ದುಮ್ಮ, ಎಚ್.ಎನ್. ವ್ಯೋಮಕೇಶಗೌಡ ಹಾಲಗುಡ್ಡೆ, ಈಶ್ವರಪ್ಪಗೌಡ ಹಾರೋಹಿತ್ತಲು, ಪರಮೇಶ್ವರಗೌಡ ಕಮದೂರು, ಡಾ. ಶಶಿಕಾಂತ್ ಹುಗುಡಿ ಹಾಗೂ ಡಾ. ಸುಧೀನ ಪಾಟೀಲ್ ಕಗ್ಗಲಿ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ವಿಶೇಷ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಹರಗುರು ಚರಮೂರ್ತಿಗಳು, ಕವಲೇದುರ್ಗ ಭುವನಗಿರಿ ಸಂಸ್ಥಾನ ಮಠದ ಮರುಳಸಿದ್ಧ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು.

ಸಮಾರಂಭದಲ್ಲಿ ಬಂಕಾಪುರ ರೇವಣಸಿದ್ದೇಶ್ವರ ಸ್ವಾಮಿಗಳು, ತೊಗರ್ಸಿ ಚನ್ನವೀರ ಸ್ವಾಮಿಗಳು, ಶಾಂತಪುರ ಶಿವಾನಂದ ಸ್ವಾಮಿಗಳು, ಬಿಳಿಕಿ ರಾಚೋಟೇಶ್ವರ ಸ್ವಾಮಿಗಳು, ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಸ್ವಾಮಿಗಳು, ಸಂಗೊಳ್ಳಿ ಗುರುಲಿಂಗ ಸ್ವಾಮಿಗಳು, ಹಾರನಹಳ್ಳಿ ಶಿವಯೋಗಿ ಸ್ವಾಮಿಗಳು, ಅನುಮಾಪುರ ಸೋಮಶೇಖರ ಸ್ವಾಮಿಗಳು, ತಾವರಕೆರೆ ಅಭಿನವ ಸಿದ್ಧಲಿಂಗ ಸ್ವಾಮಿಗಳು, ಕಡೆನಂದಿಹಳ್ಳಿ ರೇವಣಸಿದ್ದೇಶ್ವರ ಸ್ವಾಮಿಗಳು, ಸಿಂದಗಿ ವೀರರಾಜೇಂದ್ರ ಸ್ವಾಮಿಗಳು ದಿವ್ಯ ಉಪಸ್ಥಿತರಿದ್ದರು.

ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥಗೌಡ, ಹೆಚ್.ಎಸ್. ಜಗದೀಶ, ಕೆ.ಆರ್. ಪ್ರಕಾಶ್, ಚನ್ನಬಸಪ್ಪಗೌಡರು, ಬಿ. ಯುವರಾಜ, ಉಮೇಶ್ ಮಸರೂರು, ಹೆಚ್.ವಿ. ಈಶ್ವರಪ್ಪಗೌಡ, ಎನ್.ಎನ್. ವರ್ತೇಶ ಸೇರಿದಂತೆ ಹಲವು ರಾಜಕೀಯ ಧುರೀಣರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ವಿಶೇಷತೆಗಳು:

ಪ್ರಾತಃಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಳಮೂರ್ತಿ ಹಾಗೂ ಕರ್ತೃ ಶ್ರೀ ನಾಗಾರ್ಜುನಸ್ವಾಮಿ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಹೋಮ-ಹವನಗಳು ನೆರವೇರಿದವು.

ಜಂಬಲದಿನ್ನಿ ಬಿ.ಎಂ. ಸುರೇಶ್ ಗವಾಯಿಗಳು ಮತ್ತು ಶಿವಮೊಗ್ಗ ನಾಗರತ್ನ ಚಂದ್ರಶೇಖರಯ್ಯ ಭಕ್ತಿಗೀತೆ ಪ್ರಾರ್ಥನೆ ಸಲ್ಲಿಸಿದರು. ರಾಜಕೀಯ ಯುವ ಧುರೀಣ ವೀರೇಶ್ ಆಲವಳ್ಳಿ ಸರ್ವರನ್ನು ಸ್ವಾಗತಿಸಿದರು.

ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿನಿಯರಿಂದ ಭರತನಾಟ್ಯ ಜರುಗಿತು. ಶಿವಮೊಗ್ಗದ ಶಾಂತಾ ಆನಂದ್ ನಿರೂಪಿಸಿದರು. ಕಗ್ಗಲಿ ಶಿವಪ್ರಕಾಶ್ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.

ಪ್ರಾತಃಕಾಲದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಳ ಮೂರ್ತಿಗೆ ಮತ್ತು ಕರ್ತೃ ಶ್ರೀ ನಾಗಾರ್ಜುನಸ್ವಾಮಿ ಗದ್ದುಗೆಗೆ ವಿಶೇಷ ಪೂಜೆ ಹೋಮಹವನಾದಿ ಪೂಜಾ ಕಾರ್ಯಗಳು ಜರುಗಿದವು. ಸಮಾರಂಭದ ನಂತರ ಸಾರ್ವತ್ರಿಕವಾಗಿ ಮಠದ ಪರಿಸರದಲ್ಲಿ ಸಕಲ ಸದ್ಭಕ್ತರು ದೀಪ ಹಚ್ಚಿ ಸಂಭ್ರಮಿಸಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]