ತೀರ್ಥಹಳ್ಳಿ : ಮಲೆನಾಡು ಭಾಗದ ಜನರ ಬದುಕು ಹಾಗೂ ಕೃಷಿಗೆ ಕಂಟಕವಾಗಿರುವ ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿಗೊಳಿಸಲು ಬಿಡುವುದಿಲ್ಲ. ಮಲೆನಾಡಿನ ಪ್ರತಿಯೊಂದು ಮನೆಯ ಹಿತರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ವರದಿ ಜಾರಿಯನ್ನು ವಿರೋಧಿಸಿ ಸೋಮವಾರ ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬೃಹತ್ ಪಾದಯಾತ್ರೆ:
ಬಿಂತ್ಲಾದಿಂದ ಶುರುವಾದ ಈ ಕಾಲ್ನಡಿಗೆ ಜಾಥಾ, ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದವರೆಗೆ ಸಾಗಿತು. ಈ ವೇಳೆ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನ ಸ್ಪಷ್ಟ ನಿಲುವು:
2013ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವಿದ್ದಾಗಲೇ ಸಂಪುಟ ಉಪಸಮಿತಿ ರಚಿಸಿ ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿತ್ತು. ಅಂದಿನಿಂದಲೂ ಕಾಂಗ್ರೆಸ್ ಇದನ್ನು ವಿರೋಧಿಸುತ್ತಲೇ ಬಂದಿದೆ ಎಂದು ಸಚಿವರು ನೆನಪಿಸಿದರು.
ವಿಶೇಷ ಅಧಿವೇಶನ:
ಈ ವಿಚಾರವಾಗಿ ರಾಜ್ಯದ ಕಟ್ಟುನಿಟ್ಟಿನ ನಿಲುವನ್ನು ಕೇಂದ್ರಕ್ಕೆ ಮುಟ್ಟಿಸಲು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲೇ ವಿಶೇಷ ಅಧಿವೇಶನವೊಂದನ್ನು ಕರೆಯಲಿದ್ದಾರೆ ಎಂಬ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.
ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ :
ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಬಿಜೆಪಿ ನಾಯಕರು ಕೇವಲ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಮಧು ಬಂಗಾರಪ್ಪ ಟೀಕಿಸಿದರು. 2016ರ ಆಗಸ್ಟ್ 11ರಂದು ಕೇಂದ್ರ ಸರ್ಕಾರ ಕರೆದಿದ್ದ ಅತ್ಯಂತ ಮಹತ್ವದ ಸಭೆಗೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಅಂದಿನ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಗೈರಾಗಿದ್ದರು ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಈ ವರದಿಯನ್ನು ಹಲವು ಬಾರಿ ತಿರಸ್ಕರಿಸಿ ನಿರ್ಣಯ ಕಳುಹಿಸಿದ್ದರೂ, ಕೇಂದ್ರವು ಸತತವಾಗಿ ಅಧಿಸೂಚನೆ ಹೊರಡಿಸುತ್ತಿದೆ. ಮೊದಲ ಆರು ಕರಡುಗಳಲ್ಲಿ ತೀರ್ಥಹಳ್ಳಿ ತಾಲೂಕಿನ 139 ಗ್ರಾಮಗಳಿದ್ದವು, ಇದೀಗ 7ನೇ ಕರಡಿನಲ್ಲಿ ಅದನ್ನು 154ಕ್ಕೆ ಹೆಚ್ಚಿಸಲಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಮೌನ ವಹಿಸಿರುವುದು ಏಕೆ? ಎಂದು ಪ್ರಶ್ನಿಸಿದರು.
ಬಂಗಾರಪ್ಪನವರ ಜನಪರ ಕಾಳಜಿಯ ಸ್ಮರಣೆ :
ತಮ್ಮ ತಂದೆ ದಿ. ಎಸ್. ಬಂಗಾರಪ್ಪನವರ ರೈತಪರ ಕಾಳಜಿಯನ್ನು ಸ್ಮರಿಸಿದ ಸಚಿವರು, “ದೇವರಾಜ ಅರಸು ಅವರು ಭೂಮಿ ಕೊಟ್ಟರೆ, ಬಂಗಾರಪ್ಪನವರು ಉಚಿತ ಪಂಪ್‌ಸೆಟ್ ನೀಡಿ ಅದನ್ನು ಹಸಿರಾಗಿಸಿದರು. ಸಿದ್ದರಾಮಯ್ಯನವರು ಜನರಿಗೆ ಅನ್ನ ನೀಡಿದ್ದಾರೆ. ನನ್ನ ತಂದೆಯವರ ಹಾದಿಯಲ್ಲೇ ನಡೆದು ಮಲೆನಾಡಿನ ರೈತರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ,” ಎಂದರು.
ದೆಹಲಿಯಲ್ಲಿ ರಾಹುಲ್ ಗಾಂಧಿ ಅವರೊಂದಿಗಿನ ಸಭೆ ರದ್ದಾದ ಹಿನ್ನೆಲೆಯಲ್ಲಿ, ಮಲೆನಾಡಿನ ಜನರ ಮೇಲಿನ ಕಾಳಜಿಯಿಂದಾಗಿ ತಾವು ಬೆಳಗಿನಜಾವ 3 ಗಂಟೆಗೆ ಹೊರಟು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಶ್ವೇತಾ ಬಂಡಿ, ರಮೇಶ್ ಶೆಟ್ಟಿ, ಚೇತನ್ ಗೌಡ, ರಮೇಶ್ ಹೆಗಡೆ, ಕೆಸ್ತೂರು ಮಂಜುನಾಥ್, ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೂಡುಬ ರಾಘವೇಂದ್ರ, ಶ್ರೀನಿವಾಸ ಕರಿಯಣ್ಣ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

