ಶಿವಮೊಗ್ಗ

ಕುವೆಂಪು ವಿವಿಯಲ್ಲಿ ಅಂಕಪಟ್ಟಿ ಗೊಂದಲ, ಪರೀಕ್ಷೆ ವಿಳಂಬ ಆರೋಪ: ನವೆಂಬರ್ 30ರಂದು ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಕುವೆಂಪು ವಿಶ್ವವಿದ್ಯಾಲಯದಲ್ಲಿ ತಾತ್ಕಾಲಿಕ ಹಾಗೂ ಮೂಲ ಅಂಕಪಟ್ಟಿಗಳಲ್ಲಿ ವ್ಯತ್ಯಾಸ, ಆಂತರಿಕ ಅಂಕಗಳ ಗೊಂದಲ ಮತ್ತು ಪರೀಕ್ಷೆ ವಿಳಂಬದ ಆರೋಪಗಳು ಕೇಳಿಬಂದಿವೆ. ನವೆಂಬರ್ 30ರಂದು ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ ತಿಳಿಸಿದ್ದಾರೆ.

ಕುವೆಂಪು ವಿವಿಯಲ್ಲಿ ಅಂಕಪಟ್ಟಿ ಗೊಂದಲ, ಪರೀಕ್ಷೆ ವಿಳಂಬ ಆರೋಪ: ನವೆಂಬರ್ 30ರಂದು ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ – kukke prashanth

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂಕಪಟ್ಟಿ ವಿತರಣೆ, ಪರೀಕ್ಷೆ ವಿಳಂಬ, ಮೌಲ್ಯಮಾಪನ ಹಾಗೂ ಆಂತರಿಕ ಅಂಕಗಳ ದಾಖಲಾತಿಯಲ್ಲಿ ಹಲವು ಗೊಂದಲಗಳಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ನವೆಂಬರ್ 30ರಂದು ವಿಶ್ವವಿದ್ಯಾಲಯದ ಎದುರು ಪ್ರತಿಭಟನೆ ನಡೆಸಲು ಬಿಜೆಪಿ ಯುವ ಮೋರ್ಚಾ ನಿರ್ಧರಿಸಿದೆ.

WhatsApp Group Join Now
Telegram Group Join Now
Instagram Group Join Now

ಶುಕ್ರವಾರ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿಗಳು ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ವಿಶ್ವವಿದ್ಯಾಲಯದ ಆಡಳಿತಾತ್ಮಕ ಲೋಪಗಳಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿದರು.

ಅಂಕಪಟ್ಟಿ ವಿತರಣೆ, ಪರೀಕ್ಷೆ, ಮೌಲ್ಯಮಾಪನ ಹಾಗೂ ಪದವಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹಲವು ಬಾರಿ ಗಮನಕ್ಕೆ ತಂದರೂ ಸೂಕ್ತ ಪರಿಹಾರ ದೊರೆತಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪರವಾಗಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ಪ್ರಾವಿಷನಲ್ ಅಂಕಪಟ್ಟಿಯಲ್ಲಿ ಪಾಸ್, ಮೂಲ ಅಂಕಪಟ್ಟಿಯಲ್ಲಿ ಫೇಲ್!

ಎನ್‌ಇಪಿ ಜಾರಿಯಾದ ನಂತರ ವಿಶ್ವವಿದ್ಯಾಲಯದ ಅಂಕಪಟ್ಟಿ ವ್ಯವಸ್ಥೆಯಲ್ಲಿ ಗಂಭೀರ ಗೊಂದಲಗಳು ಎದುರಾಗಿವೆ ಎಂದು ಪ್ರಶಾಂತ್ ಕುಕ್ಕೆ ಆರೋಪಿಸಿದರು.

2023-24ನೇ ಸಾಲಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್‌ನ ಅಂಕಪಟ್ಟಿಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಪರೀಕ್ಷೆ ಮುಗಿದ ಬಳಿಕ ಆನ್‌ಲೈನ್‌ನಲ್ಲಿ ಪಡೆಯುವ ತಾತ್ಕಾಲಿಕ ಅಂಕಪಟ್ಟಿಯಲ್ಲಿ ಉತ್ತೀರ್ಣರಾಗಿರುವುದಾಗಿ ತೋರಿಸಲಾಗುತ್ತದೆ. ಆದರೆ ನಂತರ ಮೂಲ ಅಂಕಪಟ್ಟಿ ಪಡೆಯಲು ಹೋದಾಗ ಅದೇ ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದಾಗಿ ನಮೂದಾಗಿರುವ ಪ್ರಕರಣಗಳಿವೆ ಎಂದು ಹೇಳಿದರು.

ತಾತ್ಕಾಲಿಕ ಅಂಕಪಟ್ಟಿಯ ಆಧಾರದಲ್ಲಿ ಉದ್ಯೋಗಕ್ಕೆ ಸೇರಿದ ವಿದ್ಯಾರ್ಥಿಗಳು ಮೂಲ ಅಂಕಪಟ್ಟಿಯಲ್ಲಿ ಅನುತ್ತೀರ್ಣರೆಂದು ನಮೂದಾಗಿರುವುದರಿಂದ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಇಂತಹ ಗೊಂದಲಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ದೂರಿದರು.

ಎಂಬಿಎ ವಿದ್ಯಾರ್ಥಿನಿಯ ಆಂತರಿಕ ಅಂಕಗಳ ದಾಖಲಾತಿಯಲ್ಲಿ ಗೊಂದಲ

ವಿದ್ಯಾರ್ಥಿನಿಯೊಬ್ಬರ ಆಂತರಿಕ ಅಂಕಗಳ ದಾಖಲಾತಿಗೆ ಸಂಬಂಧಿಸಿದ ಸಮಸ್ಯೆಯನ್ನು ಪ್ರಸ್ತಾಪಿಸಿದ ಪ್ರಶಾಂತ್ ಕುಕ್ಕೆ, 2021-22ನೇ ಸಾಲಿನ ಎನ್‌ಇಪಿ ವಿದ್ಯಾರ್ಥಿನಿಯೊಬ್ಬರು ಪ್ರಸ್ತುತ ಎಂಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಅವರ ಐದನೇ ಮತ್ತು ಆರನೇ ಸೆಮಿಸ್ಟರ್ ಅಂಕಪಟ್ಟಿಯಲ್ಲಿ ಆಂತರಿಕ ಅಂಕಗಳು ನಮೂದಾಗಿಲ್ಲ ಎಂದು ತಿಳಿಸಿದರು.

ಈ ಕುರಿತು ಕಾಲೇಜನ್ನು ಸಂಪರ್ಕಿಸಿದಾಗ ಆಂತರಿಕ ಅಂಕಗಳು ವಿಶ್ವವಿದ್ಯಾಲಯದಲ್ಲಿ ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ. ವಿಶ್ವವಿದ್ಯಾಲಯವನ್ನು ಸಂಪರ್ಕಿಸಿದರೆ ಅಂಕಗಳು ದಾಖಲಾಗಿವೆ ಎಂಬ ಉತ್ತರ ನೀಡಲಾಗುತ್ತಿದೆ. ಕಾಲೇಜು ಮತ್ತು ವಿಶ್ವವಿದ್ಯಾಲಯದ ನಡುವಿನ ಈ ಗೊಂದಲದಿಂದ ವಿದ್ಯಾರ್ಥಿನಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದೇ ರೀತಿಯ ಹಲವು ಪ್ರಕರಣಗಳು ಯುವ ಮೋರ್ಚಾ ಗಮನಕ್ಕೆ ಬಂದಿದ್ದು, ವಿಶ್ವವಿದ್ಯಾಲಯ ಆಡಳಿತ ಕೂಡಲೇ ಇವುಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಘಟಿಕೋತ್ಸವ ಪ್ರಮಾಣಪತ್ರಕ್ಕಾಗಿ ವಿದ್ಯಾರ್ಥಿಗಳ ಕಾಯುವಿಕೆ

ಎನ್‌ಇಪಿ ಜಾರಿಯಾದ ನಂತರದ ಸಾಲಿನ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ನಡೆಸಿ ಪದವಿ ಪ್ರಮಾಣಪತ್ರ ನೀಡುವಲ್ಲಿ ವಿಳಂಬವಾಗಿದೆ ಎಂದು ಪ್ರಶಾಂತ್ ಕುಕ್ಕೆ ಆರೋಪಿಸಿದರು.

ವಿದ್ಯಾರ್ಥಿಗಳು ಘಟಿಕೋತ್ಸವಕ್ಕಾಗಿ ನಿಗದಿತ ಶುಲ್ಕ ಪಾವತಿಸಿದ್ದರೂ ಪ್ರಮಾಣಪತ್ರ ದೊರೆತಿಲ್ಲ. 2021-22ನೇ ಸಾಲಿನಲ್ಲಿ ಎನ್‌ಇಪಿ ಜಾರಿಯಾಗಿದ್ದು, 2026ರ ಅಂತ್ಯ ಸಮೀಪಿಸುತ್ತಿದ್ದರೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯಾಭ್ಯಾಸ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಉದ್ಯೋಗ ಹಾಗೂ ಮುಂದಿನ ಶಿಕ್ಷಣಕ್ಕಾಗಿ ಅಗತ್ಯವಿರುವ ಪ್ರಮಾಣಪತ್ರ ಪಡೆಯಲು ಕಾಯುವಂತಾಗಿದೆ ಎಂದು ಹೇಳಿದರು.

ಬಿಎಡ್ ಪರೀಕ್ಷೆ ವಿಳಂಬದ ವಿರುದ್ಧ ಅಸಮಾಧಾನ

ಕುವೆಂಪು ವಿಶ್ವವಿದ್ಯಾಲಯವು ಬಿಎಡ್ ಪರೀಕ್ಷೆಗಳನ್ನು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ ಪ್ರಶಾಂತ್ ಕುಕ್ಕೆ, ಡಿಸೆಂಬರ್‌ನಲ್ಲಿ ಪರೀಕ್ಷೆ ನಡೆಸಲು ಮುಂದಾಗಿರುವುದರಿಂದ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದರು.

ಪರೀಕ್ಷೆಗಳನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಿ, ಫಲಿತಾಂಶ ಹಾಗೂ ಅಂಕಪಟ್ಟಿಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು ಎಂದು ಒತ್ತಾಯಿಸಿದರು.

ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಲ್ಲೂ ಲೋಪದ ಆರೋಪ

ವಿಶ್ವವಿದ್ಯಾಲಯದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯ ಕುರಿತು ಮಾತನಾಡಿದ ಅವರು, ಉಪನ್ಯಾಸಕರು ಆನ್‌ಲೈನ್‌ನಲ್ಲಿ ದಾಖಲಿಸುವ ಅಂಕಗಳು ಯುಯುಸಿಎಂಎಸ್ (UUCMS) ವ್ಯವಸ್ಥೆಯಲ್ಲಿ ಸ್ವಯಂಚಾಲಿತವಾಗಿ ದಾಖಲಾಗುತ್ತಿಲ್ಲ ಎಂಬ ದೂರುಗಳಿವೆ ಎಂದು ಹೇಳಿದರು.

ಕೆಲವು ಸಂದರ್ಭಗಳಲ್ಲಿ ಅಂಕಗಳನ್ನು ಹಸ್ತಚಾಲಿತವಾಗಿ ದಾಖಲಿಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಅಂಕಗಳ ದಾಖಲಾತಿಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯಿದ್ದು, ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೇ ಹೊರತು ಅವರ ಭವಿಷ್ಯಕ್ಕೆ ತೊಂದರೆಯಾಗಬಾರದು. ಈ ಕುರಿತು ಹಿಂದೆ ನಡೆದ ವಿದ್ಯಾರ್ಥಿ ಹೋರಾಟಗಳನ್ನೂ ವಿಶ್ವವಿದ್ಯಾಲಯ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಹಿಂದಿನ ಮತ್ತು ಪ್ರಸ್ತುತ ಆಡಳಿತದ ಅವಧಿಯ ಆರೋಪಗಳ ತನಿಖೆಗೆ ಆಗ್ರಹ

ಸುದ್ದಿಗೋಷ್ಠಿಯಲ್ಲಿ ವಿಶ್ವವಿದ್ಯಾಲಯದ ಹಿಂದಿನ ಆಡಳಿತದ ಅವಧಿಯಲ್ಲಿ ಸಿಸಿ ಕ್ಯಾಮೆರಾ ಖರೀದಿ ಸೇರಿದಂತೆ ವಿವಿಧ ಅವ್ಯವಹಾರಗಳ ಆರೋಪಗಳ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಶಾಂತ್ ಕುಕ್ಕೆ, ವಿಶ್ವವಿದ್ಯಾಲಯದಲ್ಲಿನ ಸಮಸ್ಯೆಗಳು ಪ್ರಸ್ತುತ ಆಡಳಿತದಿಂದ ಮಾತ್ರ ಆರಂಭವಾಗಿಲ್ಲ. ಹಿಂದಿನ ಅವಧಿಯಲ್ಲಿಯೂ ವಿವಿಧ ಆರೋಪಗಳು ಕೇಳಿಬಂದಿದ್ದವು. ತಪ್ಪು ಯಾರೇ ಮಾಡಿದ್ದರೂ ತಪ್ಪೇ ಆಗಿದ್ದು, ಹಿಂದಿನ ಹಾಗೂ ಪ್ರಸ್ತುತ ಆಡಳಿತದ ಅವಧಿಯ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದರು.

ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಮಸ್ಯೆ ಬಗೆಹರಿಯದಿದ್ದರೆ ರಾಜ್ಯಪಾಲರ ಗಮನಕ್ಕೆ

ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ವಿಶ್ವವಿದ್ಯಾಲಯದ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸುವುದಿಲ್ಲ. ಪರಿಹಾರ ದೊರೆಯದಿದ್ದರೆ ರಾಜ್ಯಪಾಲರ ಗಮನಕ್ಕೂ ತರಲಾಗುವುದು ಎಂದು ಪ್ರಶಾಂತ್ ಕುಕ್ಕೆ ಎಚ್ಚರಿಸಿದರು.

ಯುಯುಸಿಎಂಎಸ್ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ರಾಜ್ಯದ ಇತರೆ ವಿಶ್ವವಿದ್ಯಾಲಯಗಳಲ್ಲಿಯೂ ಇವೆ ಎಂಬ ವಿಷಯವನ್ನು ರಾಜ್ಯಮಟ್ಟದ ಬಿಜೆಪಿ ನಾಯಕರ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು ಎಂದರು.

ಕುವೆಂಪು ಅವರ ಹೆಸರಿನಲ್ಲಿರುವ ವಿಶ್ವವಿದ್ಯಾಲಯದ ಘನತೆ ಕಾಪಾಡುವ ಜವಾಬ್ದಾರಿ ಆಡಳಿತ ಮಂಡಳಿಯ ಮೇಲಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಹೇಳಿದರು.

ವಿದ್ಯಾರ್ಥಿಗಳ ಸಮಸ್ಯೆ ಸಂಗ್ರಹಿಸಲು ಗೂಗಲ್ ಫಾರ್ಮ್

ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸಂಗ್ರಹಿಸಲು ಬಿಜೆಪಿ ಯುವ ಮೋರ್ಚಾ ವತಿಯಿಂದ ಗೂಗಲ್ ಫಾರ್ಮ್ ಸಿದ್ಧಪಡಿಸಲಾಗಿದೆ ಎಂದು ಪ್ರಶಾಂತ್ ಕುಕ್ಕೆ ತಿಳಿಸಿದರು.

ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಹೆಸರು ಹಾಗೂ ಸಮಸ್ಯೆಗಳನ್ನು ದಾಖಲಿಸಬಹುದು. ಈ ಮಾಹಿತಿಯನ್ನು ಆಧರಿಸಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದರು.

ನವೆಂಬರ್ 30ರಂದು ಕುವೆಂಪು ವಿಶ್ವವಿದ್ಯಾಲಯದ ಮುಖ್ಯದ್ವಾರದ ಎದುರು ನಡೆಯಲಿರುವ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಗ್ವೆ, ದರ್ಶನ್, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖರಾದ ಚಂದ್ರಶೇಖರ್ ಎಸ್., ಮಂಜುನಾಥ್ ಎನ್., ಸಂಜಯ್, ಯಶಸ್ವಿ ಕಡ್ತೂರು, ಪ್ರವೀಣ್, ಯುವರಾಜ್, ವಿವೇಕ್ ಮತ್ತು ಅಜಯ್ ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್