SAGARA | ತಾಲ್ಲೂಕಿನ ಕಾರ್ಗಲ್‌ನ ಲಿಂಗನಮಕ್ಕಿ ಜಲಾಶಯ ಭರ್ತಿಯ ಹಂತಕ್ಕೆ ತಲುಪಿದೆ. ಗುರುವಾರ ನದಿಗೆ 10 ಸಾವಿರ ಕ್ಯುಸೆಕ್ ನೀರು ಹರಿಸಲಾಯಿತು.
ಅಬ್ಬರ ಮುಗಿಸಿದ ‘ಪುಷ್ಯ’, ಲಿಂಗನಮಕ್ಕಿ ಜಲಾಶಯ ಭರ್ತಿಗೆ 5 ಅಡಿ ನೀರು ಬಾಕಿ !
ಜಲಾಶಯದ 11 ಕ್ರಸ್ಟ್ ಗೇಟ್‌ಗಳ ಪೈಕಿ ಮೂರು ಗೇಟ್ ತೆರೆದು ನದಿಗೆ ನೀರು ಹರಿಸಲಾಯಿತು. ಅದಕ್ಕೂ ಮುನ್ನ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಶರಾವತಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಅಧಿಕಾರಿಗಳು ಶಾಸಕರಿಗೆ ಸಾಥ್ ನೀಡಿದರು.
1,819 ಅಡಿ ನೀರಿನ ಸಂಗ್ರಹ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯದಲ್ಲಿ ಗುರುವಾರ ಬೆಳಗ್ಗೆ 1,814 ಅಡಿ ನೀರಿನ ಸಂಗ್ರಹ ಇದೆ. ಜಲಾಶಯ ಭರ್ತಿ ಆಗಲು ಇನ್ನು ಐದು ಅಡಿಯಷ್ಟು ಮಾತ್ರ ಬಾಕಿ ಇದೆ.
ಜಲಾಶಯಕ್ಕೆ 53,061 ಕ್ಯುಸೆಕ್ ಒಳಹರಿವು ಇದೆ. ವಿದ್ಯುದಾಗಾರಕ್ಕೆ 5236 ಕ್ಯುಸೆಕ್ ಸೇರಿದಂತೆ ಜಲಾಶಯದಿಂದ ಸದ್ಯ 15,236 ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
ಲಿಂಗನಮಕ್ಕಿ ಜಲಾಶಯದಿಂದ ನೀರು ಹರಿಸಿರುವುದರಿಂದ ಮಧ್ಯಾಹ್ನದ ನಂತರ ಜೋಗ ಜಲಪಾತದ ವೈಭವ ಮೈದಳೆಯಲಿದೆ. ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗರು ಜೋಗದತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ.
ಕಳೆದ ವರ್ಷ ಮಳೆ ಕೊರತೆಯಿಂದ ಲಿಂಗನಮಕ್ಕಿ ಜಲಾಶಯದಿಂದ ನದಿಗೆ ಕ್ರಸ್ಟ್ ಗೇಟ್ ಮೂಲಕ ನೀರು ಹರಿಸಿರಲಿಲ್ಲ. ಸಂಗ್ರಹಗೊಂಡ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಲಾಗಿತ್ತು. ಲಿಂಗನಮಕ್ಕಿ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಯಲ್ಲಿ 1,787.9 ಅಡಿ ನೀರಿನ ಸಂಗ್ರಹ ಇತ್ತು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಕಳೆದ ವರ್ಷ ಬರಗಾಲ ಆವರಿಸಿತ್ತು. ಈ ಬಾರಿ ಸಾಕಷ್ಟು ಮಳೆಯಾಗಿದೆ. ಐದು ವರ್ಷದ ನಂತರ ಶರಾವತಿ ಭರ್ತಿಯಾಗಿದೆ. ಲಿಂಗನಮಕ್ಕಿ ಜಲಾಶಯದಿಂದ 3 ಗೇಟ್‌ಗಳ ಮೂಲಕ 10 ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದೇವೆ ಎಂದರು.
ವಿದ್ಯುತ್ ಸಮಸ್ಯೆ ನೀಗಲಿದೆ :
ಇನ್ನೂ ಸಾಗರ ತಾಲೂಕಿನಲ್ಲಿ ಅಷ್ಟೇ ಹಾನಿಯಾಗಿದೆ. ಹೊಲ-ಗದ್ದೆ ಜಲಾವೃತವಾಗಿವೆ. ಮನೆಗಳು ಹಾನಿಯಾಗಿವೆ. ಮಳೆ ಹಾನಿಯಿಂದ ಅಷ್ಟೇ ನೋವು ಇದೆ. ಮಳೆ ಬಂದಿರುವುದರಿಂದ ಜಲಾಶಯ ಭರ್ತಿ ಆಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲಿದೆ ಎಂದರು.
ಸುಮ್ಮನೆ ಬೊಗಳೆ ಬಿಟ್ಟರು :
ಸಾಗರ ಕ್ಷೇತ್ರದಲ್ಲಿ 100 ಮನೆಗಳು ಕುಸಿದು ಬಿದ್ದಿವೆ. ಸದ್ಯ 10 ಸಾವಿರ ಪರಿಹಾರ ಕೊಟ್ಟಿದ್ದೇವೆ. ಜೋಗ ಜಲಪಾತ ಅಭಿವೃದ್ಧಿಗೆ 183 ಕೋಟಿ ರೂ. ಬಿಡುಗಡೆ ಆಗಿತ್ತು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ರೂಪಾಯಿ ಹಣ ಬಿಡುಗಡೆ ಮಾಡಲಿಲ್ಲ. ಸಂಸದ ರಾಘವೇಂದ್ರ ಸುಮ್ಮನೆ ಬೊಗಳೆ ಬಿಟ್ಟರು. ನಮ್ಮ ಸರ್ಕಾರ ಬಂದ ಮೇಲೆ 95 ಕೋಟಿ ಹಣ ಬಿಡುಗಡೆ ಮಾಡಿದೆ ಎಂದರು.
ಶಕ್ತಿ ಪ್ರದರ್ಶನಕ್ಕಾಗಿ ಪಾದಯಾತ್ರೆ :
ಇನ್ನೂ ಬಿಜೆಪಿ ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಪಾದಯಾತ್ರೆಯಲ್ಲಿ ಗೊಂದಲ ಕಾರಣವಾಗಿದೆ. ಪಾದಯಾತ್ರೆ ಮಾಡುವ ಅವಶ್ಯಕತೆ ಇಲ್ಲ. ಯತ್ನಾಳ್ ನಾನೊಂದು ಕಡೆ ಪಾದಯಾತ್ರೆ ಮಾಡ್ತೀನಿ ಅಂತಾರೆ. ಜಾರಕಿಹೊಳಿ ನಾನೊಂದು ಕಡೆ ಪಾದಯಾತ್ರೆ ಮಾಡ್ತೀನಿ ಅಂತಾರೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಬಲ ಆಗ್ತದೆ ಅನ್ನುವ ಕಾರಣಕ್ಕೆ ಕುಮಾರಸ್ವಾಮಿ ನಾನು ಬೆಂಬಲ ಕೊಡಲ್ಲ ಅಂತಾರೆ. ಪಾದಯಾತ್ರೆ ಬಿಜೆಪಿ ಶಕ್ತಿ ಪ್ರದರ್ಶನಕ್ಕಾಗಿ ಮಾಡುತ್ತಿದೆ ಅಷ್ಟೇ ಎಂದರು.
ಏನಪ್ಪ ಅದರ ಬಗ್ಗೆ ನನಗೆ ಗೊತ್ತಿಲ್ಲ !
ಸಚಿವ ಸಂಪುಟ ಬದಲಾವಣೆ ವಿಚಾರವಾಗಿ ಮಾತನಾಡಿ, ಏನಪ್ಪ ಅದರ ಬಗ್ಗೆ ನನಗೆ ಗೊತ್ತಿಲ್ಲ. ಎಲ್ಲಾ ಹಾಗೆ ಮಾತನಾಡ್ತಿದ್ದಾರೆ. ನಿಮ್ಮ ಮಾಧ್ಯಮಗಳಲ್ಲಿ ಹಾಗೆ ಬರುತ್ತಿದೆ ನೋಡಿದ್ದೇನೆ ಅಷ್ಟೇ ಎಂದರು.
ವಿರೋಧವಿಲ್ಲ !
ಶರಾವತಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ವಿಚಾರ ಮಾತನಾಡಿ, ಕುಡಿಯುವ ನೀರಿಗೆ ಕೊಡಲು ಯಾರ ವಿರೋಧ ಇಲ್ಲ. ಶರಾವತಿ ಮುಳುಗಡೆ ಪ್ರದೇಶದವರಿಗೆ 24 ಗಂಟೆ ವಿದ್ಯುತ್ ಕೊಟ್ಟರೆ ನೀರು ತೆಗೆದುಕೊಂಡು ಹೋಗಿ. ನಿರಂತರ ವಿದ್ಯುತ್ ಕೊಟ್ಟರೆ ನಮ್ಮ ವಿರೋಧ ಇಲ್ಲ ಎಂದರು.