RIPPONPETE ; ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಬೃಹನ್ಮಠದಲ್ಲಿ ಜನವರಿ 14 ರಂದು ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ ಮತ್ತು ಶ್ರೀಪತಿ ಪಂಡಿತಾರಾಧ್ಯ ಶಿವಚಾರ್ಯ ಮಹಾಸ್ವಾಮೀಜಿಯವರ ಧನುರ್ಮಾಸ ಶಿವಪೂಜಾನುಷ್ಟಾನ ಮುಕ್ತಾಯ ಹಾಗೂ ಶ್ರೀಶಿವಲಿಂಗಶ್ರೀ ಪ್ರಶಸ್ತಿ ಪ್ರದಾನ ಹಾಗೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನವರಿ 14 ರಂದು ಮಕರ ಸಂಕ್ರಾಂತಿಯ ಅಂಗವಾಗಿ ಕೋಣಂದೂರು ಶ್ರೀಶಿವಲಿಂಗೇಶ್ವರ ಸಮುದಾಯ ಭವನದಲ್ಲಿ ಬೆಳಗ್ಗೆ 10 ಕ್ಕೆ ಧರ್ಮಸಭೆ ಈ ಸಭೆಯ ದಿವ್ಯಸಾನಿಧ್ಯವನ್ನು ಆನಂದಪುರ ಮುರುಘಾರಾಜೇಂದ್ರ ಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ.
ಧರ್ಮಸಭೆಯ ಅಧ್ಯಕ್ಷತೆಯನ್ನು ವೀರಪುರ ಹಿರೇಮಠದ ಡಾ.ಮರುಳಸಿದ್ದ ಪಂಡಿತಾರಾಧ್ಯಶಿವಾಚಾರ್ಯರು ವಹಿಸುವರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿ.ವೈ.ರಾಘವೇಂದ್ರ ನೇರವೇರಿಸುವರು. ಶ್ರೀಶಿವಲಿಂಗೇಶ್ವರ ಪಂಚಾಂಗವನ್ನು ಶಾಸಕ ಆರಗ ಜ್ಞಾನೇಂದ್ರ ಬಿಡುಗಡೆ ಮಾಡುವರು.
ಹೊನ್ನಾಳ್ಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ರೆಟ್ಟೆಹಳ್ಳಿ ಕಬ್ಬಿನಕಂತಿ ಮಠದ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ ನೇತೃತ್ವ ವಹಿಸುವರು.
ಮುಖ್ಯ ಅತಿಥಿಗಳಾಗಿ ಎಂ.ಎಲ್.ಸಿ. ಡಾ.ಧನಂಜಯ ಸರ್ಜಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಂ.ಎ.ಡಿ.ಬಿ. ಅಧ್ಯಕ್ಷ ಮಂಜುನಾಥಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಉದ್ಯಮಿ ಕೆ.ಆರ್.ಪ್ರಕಾಶ್, ಅಕ್ಷಯ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ದಿನೇಶ್‌ತಟ್ಟೆಕೊಪ್ಪ ಹಾಗೂ ನಾಡಿನ ಹರಗುರು ಚರಮೂರ್ತಿಗಳು ಪಾಲ್ಗೊಳ್ಳಲ್ಲಿದ್ದಾರೆ.
ಇದೇ ಸಂದರ್ಭದಲ್ಲಿ ಕೋಣಂದೂರು ಬೃಹನ್ಮಠದಿಂದ ಕೊಡ ಮಾಡುವ ಶ್ರೀಶಿವಲಿಂಗೇಶ್ವರ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಶ್ರೀಗಳು ವಿವರಿಸಿದರು.