ರಿಪ್ಪನ್‌ಪೇಟೆ ; ಏಪ್ರಿಲ್ 5 ಮತ್ತು 6 ರಂದು ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ ತಾಲ್ಲೂಕಿನ ನಗರದಿಂದ ಸುಮಾರು 45 ಕಿ.ಮೀ. ದೂರದ ರಿಪ್ಪನ್‌ಪೇಟೆಯವರೆಗೆ ಮಾಜಿ ಶಾಸಕ ಬಿ.ಸ್ವಾಮಿರಾವ್ ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ನಡೆಸಲಾಗುತ್ತಿರುವ ಪಾದಯಾತ್ರೆಗೆ ತಾಲ್ಲೂಕಿನ ವಿವಿಧ ಸಂಘಟನೆಗಳ ಸಾರ್ವಜನಿಕರ ಅಭೂತಪೂರ್ವ ಬೆಂಬಲವನ್ನು ನೀಡುವುದರೊಂದಿಗೆ ಹೋರಾಟಕ್ಕೆ ಶಕ್ತಿಯಾಗಬೇಕು ಎಂದು ಜಿಲ್ಲಾ ಪಂಚಾಯಿತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮತ್ತು ತಾಲ್ಲೂಕು ಪಂಚಾಯಿತ್ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಸಾರ್ವಜನಿಕರಿಗೆ ಕರೆ ನೀಡಿದರು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕಳೆದ ಒಂದು ತಿಂಗಳಿಂದ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸು ಬಗ್ಗೆ ಸಾರ್ವಜನಿಕವಾಗಿ ಕೂಗು ಕೇಳಿಬರುವುದರೊಂದಿಗೆ ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತ್‌ಗಳಲ್ಲಿ ಸಭೆನಡೆಸಿ ಸಂಘಟನೆಯನ್ನು ಮಾಡುವುದರೊಂದಿಗೆ 2008 ರಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ವಿಗಂಡಿಸಿ ಸಾಗರ-ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಎರಡು ಹೋಬಳಿಗಳನ್ನು ಹರಿದು ಹಂಚಲಾಗಿ ಕ್ಷೇತ್ರವನ್ನು ಜನಸೇವಕರಿಲ್ಲದೆ ಅನಾಥವನ್ನಾಗಿ ಮಾಡುವುದರೊಂದಿಗೆ ಅಭಿವೃದ್ದಿಯಲ್ಲಿ ಸಹ ಕುಂಠಿತಗೊಳ್ಳು ಕಾರಣವಾಗಿದೆ. ಆ ಕಾರಣದಿಂದಾಗಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪನೆ ಮಾಡುವ ಮೂಲಕ ಕ್ಷೇತ್ರದ ಸರ್ವಾಂಗೀಣಾಭಿವೃದ್ದಿಗೆ ಸಹಕಾರವಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಸೆಳೆಯಲು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಏಪ್ರಿಲ್ 5 ರಿಂದ ನಗರದಿಂದ ಮಾಜಿ ಶಾಸಕ ಬಿ.ಸ್ವಾಮಿರಾವ್ ಮತ್ತು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ಜಾತಿ ಬೇಧ ಭಾವನೆಯಿಲ್ಲದೆ ವಿವಿಧ ಸಮಾಜದ ಸಂಘಟನೆಯವರು ಪಾದಯಾತ್ರೆ ಹೊರಟು ಹೊಸನಗರ ಕೋಡೂರು ಮಾರ್ಗವಾಗಿ ಏಪ್ರಿಲ್ 6 ರಂದು ಸಂಜೆ ಸೋಮವಾರ 4.00 ಗಂಟೆಗೆ ತಲುಪಿ ಬೃಹತ್ ಸಮಾವೇಶ ನಡೆಸುವುದರೊಂದಿಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಸದರಿಗೆ ಶಾಸಕರಿಗೆ ಕ್ಷೇತ್ರ ಮರುಸ್ಥಾಪನೆಗೆ ಒತ್ತಡ ತರಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸುವಂತೆ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಆರ್.ಎ.ಚಾಬುಸಾಬ್, ಎನ್.ವರ್ತೇಶ, ಜಿ.ಡಿ.ಮಲ್ಲಿಕಾರ್ಜುನ, ಡಿ.ಈ.ಮಧುಸೂದನ್, ಜೆ.ಎಸ್.ಚಂದ್ರಪ್ಪ, ಮುರುಳೀಧರ ಕೆರೆಹಳ್ಳಿ, ಅಸಿಫ್‌ಭಾಷಾ, ಗಣಪತಿ ಗವಟೂರು, ನೇಮಪ್ಪ ಬಂಡಿ, ಶ್ರೀಧರ, ನವೀನ ಕೆರೆಹಳ್ಳಿ ಜಾಕೀರ್ ಇನ್ನಿತರರು ಹಾಜರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





