ಶಿವಮೊಗ್ಗ

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗಾಗಿ ಬೃಹತ್ ಜಾಥಾ ಪ್ರತಿಭಟನೆ

ಶಿವಮೊಗ್ಗ : ಕರ್ನಾಟಕದ ಮಧ್ಯ ಭಾಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಅಗತ್ಯವಿರುವುದಾಗಿ ಆಗ್ರಹಿಸಿ, ಜಿಲ್ಲಾ ವಕೀಲರ ಸಂಘ ಮತ್ತು ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಶಿವಮೊಗ್ಗ ನಗರದ ಪ್ರಮುಖ ರಸ್ತೆಗಳ ಮೂಲಕ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಈ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ.

WhatsApp Group Join Now
Telegram Group Join Now
Instagram Group Join Now

ಕಳೆದ 13 ದಿನಗಳಿಂದ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಧರಣಿ ಮತ್ತು ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರರು ಇಂದು ಜಿಲ್ಲಾಧಿಕಾರಿ ಆವರಣದಿಂದ ಆರಂಭಿಸಿ ಮಹಾವೀರ ವೃತ್ತ, ಸರ್ ಎಂ. ವಿಶ್ವೇಶ್ವರಯ್ಯ ರಸ್ತೆ, ಬಿ.ಹೆಚ್. ರಸ್ತೆ, ಶಿವಪ್ಪನಾಯಕ ವೃತ್ತ, ನೆಹರೂ ರಸ್ತೆ, ಸೀನಪ್ಪಶೆಟ್ಟಿ ವೃತ್ತ (ಗೋಪಿಸರ್ಕಲ್), ಬಾಲರಾಜ್ ಅರಸ್ ರಸ್ತೆ, ಪುನಃ ಮಹಾವೀರ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಎದುರು ಸಭೆಗೆ ಆಗಮಿಸಿದ್ದರು.

ಸಭೆಯಲ್ಲಿ ಭಾಗವಹಿಸಿದ ಬೆಕ್ಕಿನಕಲ್ಮಠ, ಬಸವ ಕೇಂದ್ರ, ಜಡೆಮಠದ ಶ್ರೀಗಳು ಸೇರಿದಂತೆ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಗೌರವಾಧ್ಯಕ್ಷ ಕೆ. ಬಸಪ್ಪಗೌಡ, ಅಶೋಕ್ ಜಿ. ಭಟ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರಸ್ವಾಮಿ, ರಾಷ್ಟ್ರಭಕ್ತ ಬಳಗದ ಕೆ.ಎಸ್. ಈಶ್ವರಪ್ಪ, ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ. ವಸಂತ್ ಕುಮಾರ್, ಡಾ. ಸತೀಶ್ ಕುಮಾರ್ ಶೆಟ್ಟಿ ಮುಂತಾದವರು ಮಾತನಾಡಿ, ಈಗಾಗಲೇ ಮಂಗಳೂರಿಗೆ ಸಂಚಾರಿ ನ್ಯಾಯಪೀಠ ಮಂಜೂರಾಗಿರುವುದನ್ನು ಉದ್ಧರಿಸಿ, ಮಧ್ಯ ಕರ್ನಾಟಕದ ಜನತೆ ಇದನ್ನು ನ್ಯಾಯವಿರೋಧ ಎಂದು ಬೋಧಿಸಿದರು.

ಮಂಗಳೂರಿನ ಹೈಕೋರ್ಟ್ ಪೀಠ ಮತ್ತು ಶಿವಮೊಗ್ಗದ ಭೌಗೋಳಿಕ, ದಾರಿ ಸಂಪರ್ಕ ಹಾಗೂ ನ್ಯಾಯಸೇವೆ ಅಗತ್ಯಗಳ ಹೋಲಿಕೆ ಮಾಡಿದಾಗ, ಶಿವಮೊಗ್ಗವೇ ಈ ಪೀಠದ ಸ್ಥಾಪನೆಗೆ ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ಅವರು ತೋರಿಸಿದರು. ಹೈಕೋರ್ಟ್ ಪೀಠ ಮಂಜೂರಾಗದಿದ್ದರೆ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದರು.

ನಾಗರಿಕ ಹಿತರಕ್ಷಣಾ ವೇದಿಕೆಯ ಕೆ.ವಿ. ವಸಂತ್ ಕುಮಾರ್ ತಿಳಿಸಿದ್ದಾರೆ, ಸಂಸ್ಥೆ ಆರಂಭದಿಂದಲೇ ಈ ಹೋರಾಟಕ್ಕೆ ಬೆಂಬಲ ನೀಡುತ್ತಿದೆ ಮತ್ತು ಮಂಗಳೂರಿನ ಪೀಠವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದರು.

ರೈತನಾಯಕ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಈ ಹೋರಾಟ ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲರ ಸಹಕಾರದಿಂದ ನಡೆಯುತ್ತಿದೆ. ಶಿವಮೊಗ್ಗ ಈ ಹೋರಾಟದ ಕೇಂದ್ರವಾಗಿದೆ ಮತ್ತು ಹೈಕೋರ್ಟ್ ಪೀಠದ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಹಿರಿಯ ವಕೀಲರಾದ ಅಶೋಕ್ ಜಿ. ಭಟ್ ಮಾತನಾಡಿ, ಶಿವಮೊಗ್ಗದ ಜನರು ಒಗ್ಗಟ್ಟಿನಿಂದ ಹೋರಾಟ ನಡೆಸಿ ಸರ್ಕಾರಕ್ಕೆ ವಾಸ್ತವಾಂಶ ತೋರಿಸಿರುವುದಾಗಿ ಹೇಳಿದರು. ಮಂಗಳೂರಿಗೆ ಸರಿಯಾದ ಸಂಪರ್ಕ ವ್ಯವಸ್ಥೆಯಿಲ್ಲದಿರುವುದರಿಂದ, ಐದು ಜಿಲ್ಲೆಗಳಿಗೂ ಉತ್ತಮ ಸಂಪರ್ಕ ಹೊಂದಿರುವ ಶಿವಮೊಗ್ಗದಲ್ಲಿ ಪೀಠ ಸ್ಥಾಪನೆ ಅಗತ್ಯವಾಗಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಜಿ.ಆರ್. ರಾಘವೇಂದ್ರಸ್ವಾಮಿ ಮಾತನಾಡಿ, ಈ ಹೋರಾಟಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕು ವಕೀಲರು ಮತ್ತು ಸಂಘ-ಸಂಸ್ಥೆಗಳು ಬೆಂಬಲ ನೀಡಿರುವುದಾಗಿ ತಿಳಿಸಿದ್ದಾರೆ. ದಿನನಿತ್ಯದ ವ್ಯವಹಾರಗಳ ನಡುವೆ ಅವರು ಹೋರಾಟಕ್ಕೆ ಕೈಜೋಡಿಸಿರುವುದು ಫಲಿತಾಂಶ ನೀಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದರು.

ಈ ಸಂದರ್ಭದಲ್ಲಿ, ಹೋರಾಟದ ಸಂಪೂರ್ಣ ವಿವರವನ್ನು ತಿಳಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಸ್ಥಳ ಗುರುತಿಸಿ ಸರ್ಕಾರಕ್ಕೆ ಶಿಫಾರಸು ನೀಡಬೇಕೆಂದು ಆಗ್ರಹಿಸಲಾಯಿತು. ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿ, ಸರ್ಕಾರಕ್ಕೆ ಸೂಕ್ತ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು.

ಈ ಜಾಥಾ ಹಾಗೂ ಸಭೆಯಲ್ಲಿ ವಕೀಲರು, ಮಾಜಿ ಶಾಸಕರು, ಕಾಂಗ್ರೆಸ್ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವ್ಯಾಪಾರಸ್ಥರು, ಪತ್ರಕರ್ತ ಸಂಘಗಳು ಸೇರಿದಂತೆ 35ಕ್ಕೂ ಹೆಚ್ಚು ಸಂಘಟನೆಗಳು ಭಾಗವಹಿಸಿ ಹೈಕೋರ್ಟ್ ಪೀಠ ಸ್ಥಾಪನೆಯ ಮಹತ್ವವನ್ನು ಹೋರಾಟದ ಮೂಲಕ ಸಾರಿದರು.

ಶಾಂತಿಗೆ ಹೆಸರಾದ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಹೋರಾಟದ ಕಿಚ್ಚು ಹೆಚ್ಚಾಗಿ ಶಾಂತಿ ಕದಡಬಾರದು. ನಾವು ಶಾಂತಿಗೂ ಸಿದ್ಧ. ಸಮರಕ್ಕೂ ಬದ್ಧ. ಶಿವಮೊಗ್ಗ ಮಧ್ಯ ಕರ್ನಾಟಕದ ಪ್ರಮುಖ ಸ್ಥಳವಾಗಿದ್ದರಿಂದ ಪ್ರಥಮ ಪ್ರಾಶಸ್ತ್ಯ ನೀಡಿ. ಶಿವಮೊಗ್ಗಕ್ಕೆ ತಕ್ಷಣ ಹೈಕೋರ್ಟ್ ಸಂಚಾರಿಪೀಠ ಮಂಜೂರು ಮಾಡಲು ಸರ್ಕಾರ ಮುಂದಾಗಬೇಕು.
– ಕೆ.ಈ. ಕಾಂತೇಶ್, ರಾಷ್ಟ್ರಭಕ್ತರ ಬಳಗ

ಎಂಚಿನ ಬೊಕ್ಕದಾಲ ಇಜ್ಜಿ ಬೇಡ. ಮಂಗಳೂರು ಪೀಠಕ್ಕೆ ನಮ್ಮನ್ನು ಸೇರಿಸುವುದು ಬೇಡ. ಈಗಾಗಲೇ ಆಸ್ಪತ್ರೆಗೆ ಉಡುಪಿ, ಮಂಗಳೂರಿಗೆ ಕರೆದುಕೊಂಡು ಹೋದಾಗ ಪ್ರಾಣಬಿಟ್ಟ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಮುಂದಿನ ದಿನಗಳಲ್ಲಿ ಅಲ್ಲಿನ ಹೈಕೋರ್ಟ್ ಪೀಠಕ್ಕೆ ಶಿವಮೊಗ್ಗ ಸೇರಿದರೆ ಅಲ್ಲಿ ಹೋಗುವ ಜನರು ಮತ್ತು ವಕೀಲರು ಅನಿವಾರ‍್ಯವಾಗಿ ತುಳು ಕಲಿಯಬೇಕಾಗುತ್ತದೆ. ಸರಿಯಾದ ಆಹಾರ ವ್ಯವಸ್ಥೆ ಇರುವುದಿಲ್ಲ. ಆರ್ಥಿಕವಾಗಿ ದುಬಾರಿ. ಲಾಡ್ಜ್‌ಗಳಲ್ಲಿ ದಿನಕ್ಕೆ ೩೦೦೦ ರೂ. ತೆರೆಬೇಕಾಗುತ್ತದೆ. ಉಪ್ಪುನೀರು ಕುಡಿಯಬೇಕಾಗುತ್ತದೆ. ಮಂಗಳೂರಿನ ಸಹವಾಸವೇ ಬೇಡ. ಬಿಸಿಲಿನ ತಾಪಮಾನಕ್ಕೆ ಬಳಲಬೇಕಾಗುತ್ತದೆ. ಹೈಕೋರ್ಟ್ ಪೀಠ ಇಲ್ಲಿಗೇ ಬರಲಿ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಎಲ್ಲಾ ರೀತಿಯ ನೆರವು ನೀಡಲು ಕೋರಲಾಗುವುದು.
– ಹೆಚ್.ಸಿ.ಯೋಗೀಶ್

ಒಂದು ಕಡೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದರೆ ಇನ್ನೊಂದೆಡೆ ಹೈಕೋರ್ಟ್ ಪೀಠದ ಹೋರಾಟದ ಕಾವು ನಮ್ಮನ್ನು ಸುಡುತ್ತಿದೆ. ಜನಪ್ರತಿನಿಧಿಗಳಾಗಿ ಇಂತಹ ಹೋರಾಟಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ಹೋರಾಟಕ್ಕೆ ಅವಕಾಶ ಕೊಡದೆ ಆದಷ್ಟು ಬೇಗ ಪೀಠ ಸ್ಥಾಪನೆಯ ಪ್ರಸ್ತಾವನೆಯನ್ನು ಪುನರ್ ಪರಿಶೀಲಿಸಬೇಕು. ಹೋರಾಟ ಮಾರಕವಾಗುವುದಕ್ಕೂ ಮೊದಲು ಬಹುಬೇಗ ಸಮಸ್ಯೆಗೆ ಸರ್ಕಾರ ಪರಿಹಾರ ನೀಡಬೇಕು. ನೂತನ ಸರ್ಕಾರದ ಹೊಸ ಮುಖ್ಯಮಂತ್ರಿಗಳಿಗೆ ನಾವು ಈ ಮೂಲಕವೇ ಪೀಠ ಸ್ಥಾಪನೆಯ ಪ್ರಸ್ತಾವನೆಯನ್ನು ಸಲ್ಲಿಸುತ್ತಿದ್ದೇವೆ. ಅವರು ಪ್ರಥಮ ಪ್ರಾಶಸ್ತ್ಯದ ಮೇಲೆ ನಮಗೆ ಹೈಕೋರ್ಟ್ ಪೀಠ ಮಂಜೂರು ಮಾಡಲಿ.
– ಬೆಕ್ಕಿನ ಕಲ್ಮಠ ಶ್ರೀಗಳು

ಎಲ್ಲಾ ಭಿನ್ನಾಭಿಪ್ರಾಯ, ಪಕ್ಷಬೇಧಗಳನ್ನು ಮರೆತು ಈ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ. ಉತ್ತರ ಕನಾಟಕಕ್ಕೆ, ಕಲ್ಯಾಣ ಕರ್ನಾಟಕಕ್ಕೆ ಪೀಠ ಸ್ಥಾಪನೆಮಾಡಿ ಅವರ ಬೇಡಿಕೆ ಈಡೇರಿಸಿದ್ದೀರಿ. ಮಂಗಳೂರಿಗೆ ಪೀಠ ಮಂಜೂರು ಮಾಡಿದ್ದು ಅವೈಜ್ಞಾನಿಕ ಸರ್ಕಾರ ಇನ್ನೊಮ್ಮೆ ಇದನ್ನು ಪರಿಶೀಲಿಸಿ ಶಿವಮೊಗ್ಗಕ್ಕೆ ಸಂಚಾರಿಪೀಠ ಮಂಜೂರು ಮಾಡಬೇಕು. ಈ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತೇವೆ. ಇದರ ಮಧ್ಯದಲ್ಲಿ ನೂತನ ಮುಖ್ಯಮಂತ್ರಿಗಳನ್ನು ಹಾಗೂ ಮುಖ್ಯ ನ್ಯಾಯಾಧೀಶರನ್ನು, ಕೇಂದ್ರದ ಕಾನೂನು ಮಂತ್ರಿಗಳನ್ನು ಭೇಟಿಯಾಗುತ್ತೇವೆ. ಆದರೆ ಪೀಠಕ್ಕಾಗಿ ಹೋರಾಟ ನಿರಸನ ಮುಂದುವರಿಯುತ್ತದೆ. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲುವುದಿಲ್ಲ.
– ಕೆ.ಬಸಪ್ಪಗೌಡ, ಗೌರವಾಧ್ಯಕ್ಷರು, ಹೈಕೋರ್ಟ್ ಸಂಚಾರಿಪೀಠ ಹೋರಾಟ ಸಮಿತಿ

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]