ಹೊಸನಗರ

ಹೆದ್ದಾರಿ ಕಾಮಗಾರಿಗಾಗಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಬದಲಿ ನಿವೇಶನ ನೀಡಲು ಆಗ್ರಹಿಸಿ ಹೊಸನಗರ ತಹಶೀಲ್ದಾರ್‌ಗೆ ಮನವಿ

ಮಾವಿನಕೊಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ 766ಸಿ ಕಾಮಗಾರಿಗೆ ತಮ್ಮ ವಾಸದ ಮನೆಯನ್ನು ಕಳೆದುಕೊಳ್ಳುತ್ತಿರುವ ಬಡ ಕುಟುಂಬಗಳು, ತಮಗೆ ಬದಲಿ ನಿವೇಶನ ಒದಗಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಭರತ್‌ರಾಜ್ ಅವರಿಗೆ ಮನವಿ ಸಲ್ಲಿಸಿದರು.

ನಿವೇಶನ ನೀಡಲು ಆಗ್ರಹಿಸಿ ಹೊಸನಗರ ತಹಶೀಲ್ದಾರ್‌ಗೆ ಮನವಿ Hosanagara

ಹೊಸನಗರ: ಪಟ್ಟಣದ ಶಿವಮೊಗ್ಗ ರಸ್ತೆಯ ಮಾವಿನಕೊಪ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ 766ಸಿ (ರಾಣೆಬೆನ್ನೂರು – ಬೈಂದೂರು) ಕಾಮಗಾರಿಗೆ ತಮ್ಮ ವಾಸದ ಮನೆಯನ್ನು ಕಳೆದುಕೊಳ್ಳುತ್ತಿರುವ ಬಡ ಕುಟುಂಬಗಳು, ತಮಗೆ ಬದಲಿ ನಿವೇಶನ ಒದಗಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಭರತ್‌ರಾಜ್ ಅವರಿಗೆ ಮನವಿ ಸಲ್ಲಿಸಿದರು.

WhatsApp Group Join Now
Telegram Group Join Now
Instagram Group Join Now

ಹೊಸನಗರದ ಮಾವಿನಕೊಪ್ಪ ನಿವಾಸಿಗಳಾದ ಕೂಲಿ ಕಾರ್ಮಿಕರಾದ ಹೆಚ್.ಎಸ್. ನಾಗಪ್ಪ ಹಾಗೂ ವಿ. ನಾಗರಾಜ ಅವರು ಮನವಿ ಸಲ್ಲಿಸಿದ ಸಂತ್ರಸ್ತರು. ತಾವು ಹುಟ್ಟಿನಿಂದಲೂ ಇದೇ ಜಾಗದಲ್ಲಿ ವಾಸಿಸುತ್ತಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಈ ಆಸ್ತಿಗೆ ನಿಯಮಾನುಸಾರ ಕಂದಾಯವನ್ನೂ ಪಾವತಿಸುತ್ತಿದ್ದಾರೆ. ಪ್ರಸ್ತುತ ಈ ಜಾಗವನ್ನು ರಸ್ತೆ ಪ್ರಾಧಿಕಾರವು ಹೆದ್ದಾರಿ ನಿರ್ಮಾಣಕ್ಕಾಗಿ ವಶಪಡಿಸಿಕೊಳ್ಳುತ್ತಿದೆ. ಇದನ್ನು ಹೊರತುಪಡಿಸಿ ತಮಗೆ ಬೇರೆ ಯಾವುದೇ ಮನೆ ಅಥವಾ ನಿವೇಶನವಿಲ್ಲ. ಈ ಮನೆ ಕಳೆದುಕೊಂಡರೆ ತಾವು ಸಂಪೂರ್ಣ ನಿರಾಶ್ರಿತರಾಗುತ್ತೇವೆ ಎಂದು ಅವರು ತಮ್ಮ ಅಳಲು ತೋಡಿಕೊಂಡರು.

ಸಂತ್ರಸ್ತರ ಪರ್ಯಾಯ ಬೇಡಿಕೆ:

ತಾವು ಪ್ರಸ್ತುತ ವಾಸವಿರುವ ಮನೆಯ ಪಕ್ಕದಲ್ಲಿಯೇ ಕಸಬಾ ಹೋಬಳಿಯ ಗಂಗನಕೊಪ್ಪ ಗ್ರಾಮದ ಸರ್ವೆ ನಂಬರ್ 13ರಲ್ಲಿ ಖಾಲಿ ಸರ್ಕಾರಿ ಕಂದಾಯ ಭೂಮಿ ಇದೆ. ಇಲ್ಲಿ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಬಾವಿ ಹಾಗೂ ರಸ್ತೆ ಸಂಪರ್ಕವಿದ್ದು, ವಾಸಕ್ಕೆ ಯೋಗ್ಯವಾಗಿದೆ. ಹೀಗಾಗಿ ಇದೇ ಕಂದಾಯ ಜಾಗದಲ್ಲಿ ತಮಗೆ ಬದಲಿ ನಿವೇಶನ ಮಂಜೂರು ಮಾಡಿ, ಮನೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಕುರಿತು ಕಳೆದ ಜೂನ್ 02 ರಂದು ಸಾಗರ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಕಚೇರಿಗೂ ಅರ್ಜಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.

ಸ್ಥಳ ಪರಿಶೀಲನೆಯ ಭರವಸೆ:

ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಭರತ್‌ರಾಜ್, “ನಿಮ್ಮ ಕಷ್ಟದ ಅರಿವು ನಮಗಿದೆ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ರೆವಿನ್ಯೂ ಇನ್ಸ್‌ಪೆಕ್ಟರ್ ಅವರೊಂದಿಗೆ ಸೇರಿ ನೀವು ಕೇಳಿರುವ ಜಾಗವನ್ನು ಖುದ್ದಾಗಿ ಪರಿಶೀಲಿಸಲಾಗುವುದು. ಬಳಿಕ ನಿಯಮಾನುಸಾರ ಸರ್ಕಾರದಿಂದ ಜಾಗದ ಸೌಲಭ್ಯ ಕಲ್ಪಿಸಲು ಅಗತ್ಯ ಸಹಕಾರ ನೀಡಲಾಗುವುದು” ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಗುರುರಾಜ್ ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!