ಶಿವಮೊಗ್ಗ : ಶಾಲಾ ಶಿಕ್ಷಣ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಶುಕ್ರವಾರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ನೂತನ ಹೃದ್ರೋಗ ವಿಭಾಗ ಹಾಗೂ ಆಯನೂರಿನ ಸರ್ಕಾರಿ ಶಾಲೆಗೆ ಮುನ್ಸೂಚನೆ ನೀಡದೆ ದಿಢೀರ್ ಭೇಟಿ ನೀಡಿ ಸೌಲಭ್ಯಗಳ ಪರಿಶೀಲನೆ ನಡೆಸಿದರು.

ಮೆಗ್ಗಾನ್ ಹೃದ್ರೋಗ ಆಸ್ಪತ್ರೆಯ ಪರಿಶೀಲನೆ :
ಶಿಕಾರಿಪುರದಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಆಯೋಜಿಸಿದ್ದ ಪಾದಯಾತ್ರೆಗೆ ತೆರಳುವ ಮುನ್ನ ಸಚಿವರು ಈ ಭೇಟಿ ನೀಡಿದರು.

ಅತ್ಯಾಧುನಿಕ ಸೌಲಭ್ಯಗಳ ವೀಕ್ಷಣೆ:
ಆಸ್ಪತ್ರೆಯ 4 ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳು (Modular OT) ಮತ್ತು ಕ್ಯಾಥ್‌ಲ್ಯಾಬ್ (Cath Lab) ಕಾರ್ಯವೈಖರಿ ಹಾಗೂ ಅಲ್ಲಿನ ಉಪಕರಣಗಳ ಗುಣಮಟ್ಟವನ್ನು ಸಚಿವರು ಖುದ್ದಾಗಿ ಪರಿಶೀಲಿಸಿದರು.

₹6 ಕೋಟಿ ಅನುದಾನದ ಭರವಸೆ:
ಆಸ್ಪತ್ರೆಯಲ್ಲಿನ ಸಿಬ್ಬಂದಿ ಕೊರತೆ ಹಾಗೂ ಯಂತ್ರೋಪಕರಣಗಳ ಅಳವಡಿಕೆಗೆ ಬಾಕಿ ಇರುವ ₹6 ಕೋಟಿ ಅನುದಾನದ ಅಗತ್ಯತೆಯ ಬಗ್ಗೆ ಮೆಡಿಕಲ್ ಡೀನ್ ಡಾ. ರಮೇಶ್ ಬಾಬು ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವರು, ಲಿಖಿತ ಮನವಿ ಸಲ್ಲಿಸುವಂತೆ ಸೂಚಿಸಿ, ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಶೀಘ್ರ ಅನುದಾನ ಒದಗಿಸುವ ಭರವಸೆ ನೀಡಿದರು.

ರೋಗಿಗಳಿಗೆ ಆದ್ಯತೆ:
ಹೊರರೋಗಿಗಳು ಸರತಿ ಸಾಲಿನಲ್ಲಿ ಕಾಯದಂತೆ ತ್ವರಿತವಾಗಿ ಚಿಕಿತ್ಸೆ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೆ, ವಾರ್ಡ್‌ನಲ್ಲಿದ್ದ ರೋಗಿಗಳೊಂದಿಗೆ ಮಾತನಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಡಾ. ಪರಮೇಶ್ವರ, ಡಾ. ಮಹೇಶ್ ಮೂರ್ತಿ, ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ಹಾಗೂ ಜಿಲ್ಲಾ ಸರ್ಜನ್ ಡಾ. ನಾಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸರ್ಕಾರಿ ಶಾಲೆಯಲ್ಲಿ ಶೂ-ಸಾಕ್ಸ್ ಗುಣಮಟ್ಟ ಪರಿಶೀಲನೆ :
ಈಸೂರಿಗೆ ತೆರಳುವ ಮಾರ್ಗಮಧ್ಯೆ, ಆಯನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೂ ಸಚಿವರು ದಿಢೀರ್ ಭೇಟಿ ನೀಡಿದರು.


ವಿದ್ಯಾರ್ಥಿಗಳೊಂದಿಗೆ ಸಂವಾದ:
ಇತ್ತೀಚೆಗೆ ಶಾಲಾ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ದೂರುಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಸಚಿವರು ನೇರವಾಗಿ ವಿದ್ಯಾರ್ಥಿಗಳನ್ನೇ ಈ ಬಗ್ಗೆ ಪ್ರಶ್ನಿಸಿದರು. ಸರ್ಕಾರದಿಂದ ನೀಡಲಾದ ಪರಿಕರಗಳ ಗುಣಮಟ್ಟ ಉತ್ತಮವಾಗಿದೆ ಎಂದು ಮಕ್ಕಳು ಸಚಿವರಿಗೆ ಮಾಹಿತಿ ನೀಡಿದರು.

ಮೂಲಸೌಕರ್ಯಕ್ಕೆ ಒತ್ತು:
ಭೇಟಿಯ ವೇಳೆ ವಿದ್ಯಾರ್ಥಿನಿಯೊಬ್ಬಳು ಶೌಚಾಲಯದ ಸಮಸ್ಯೆ ಬಗ್ಗೆ ಅಹವಾಲು ತೋಡಿಕೊಂಡಳು. ತಕ್ಷಣವೇ ಕಾರ್ಯಪ್ರವೃತ್ತರಾದ ಸಚಿವರು, ಶಾಲೆಯ ಶೌಚಾಲಯ, ಸ್ವಚ್ಛತೆ, ಮತ್ತು ಬಿಸಿಯೂಟದ ಗುಣಮಟ್ಟ ಕಾಪಾಡಲು ಹಾಗೂ ಶಾಲೆಯ ಮೇಲ್ಚಾವಣಿ ದುರಸ್ತಿ ಕಾರ್ಯವನ್ನು ತ್ವರಿತವಾಗಿ ಮುಗಿಸಲು ಅಧಿಕಾರಿಗಳಿಗೆ ಆದೇಶಿಸಿದರು.



