ರಿಪ್ಪನ್‌ಪೇಟೆ : ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಮೀಸಲಾತಿಯ ಕರಡು ಪಟ್ಟಿ ಪ್ರಕಟವಾಗುತ್ತಿದ್ದಂತೆ ಸ್ಥಳೀಯ ಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ ಹಾಗೂ ಅ.14 ರಂದು ಹೊಸನಗರದಲ್ಲಿ ನಡೆಯುವ ಸೇವಾ ಸಂಕಲ್ಪ ಅಭಿಯಾನದ ಹಿನ್ನೆಲೆಯಲ್ಲಿ ಹುಂಚ ಹೋಬಳಿಯ ಅಮೃತ ಗ್ರಾಮದ ಶಿವಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ಆಡಳಿತದಲ್ಲಿ ದೇಶವು ‘ವಿಕಸಿತ ಭಾರತ’ದತ್ತ ಮುನ್ನಡೆಯುತ್ತಿದೆ. ಆರ್ಥಿಕ ಇಲಾಖೆಯ ಸಮೀಕ್ಷೆಗಳ ಪ್ರಕಾರ, ದೇಶದಲ್ಲಿ ಬರೋಬ್ಬರಿ 25 ಕೋಟಿಗೂ ಹೆಚ್ಚು ಕುಟುಂಬಗಳ ಆರ್ಥಿಕ ಮಟ್ಟ ಸುಧಾರಿಸಿದ್ದು, ಅವರು ಬಿಪಿಎಲ್‌ನಿಂದ ಎಪಿಎಲ್ ಕಾರ್ಡ್‌ಗೆ ಮೇಲ್ದರ್ಜೆಗೇರಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಮಳೆಯ ಅಭಾವದಿಂದ ಅನ್ನದಾತರು ಕಂಗಾಲಾಗಿದ್ದಾರೆ. ಕೈಗೆ ಬಂದ ಬೆಳೆ ಒಣಗುತ್ತಿದ್ದು, ಅಂತರ್ಜಲ ಮಟ್ಟ ಕುಸಿದು ಭವಿಷ್ಯದಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗುವ ಭೀತಿ ಇದೆ. ಈ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕಿದೆ. ಸರ್ಕಾರವು ವಿಳಂಬ ಮಾಡದೆ ಈ ಕೂಡಲೇ ಹೊಸನಗರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ತೀರ್ಥಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಪ್ರಮುಖರಾದ ಬೆಳ್ಳೂರು ತಿಮ್ಮಪ್ಪ, ವಿಶ್ವನಾಥ್ ಗಂದ್ರಳ್ಳಿ, ನಾಗೇಂದ್ರ, ಅಬ್ಬಿ ಕಿರಣ್, ಸುಧೀಂದ್ರ, ನಂದನ್ ಪಟೇಲ್, ರಮೇಶ್, ಗಿರೀಶ್ ಜಂಬಳ್ಳಿ, ರೇಖಾ ರವಿ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.

