ಹೊಸನಗರ: ಮುಂಬರುವ ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಹೊಸನಗರ ತಾಲೂಕಿನ ಕೆಂಚನಾಲ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಳ್ಳುತ್ತಿದ್ದು, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ ಅವರ ಹೆಸರು ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಗಳ ಚರ್ಚೆಯಲ್ಲಿ ಮುನ್ನೆಲೆಗೆ ಬಂದಿದೆ.
ಕೆಂಚನಾಲ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಹಿನ್ನೆಲೆಯಲ್ಲಿ ಹಲವು ಹೆಸರುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದು, ಚಿದಂಬರ ಹೂವಿನಕೋಣೆ ಕೂಡ ಸ್ಪರ್ಧಿಸುವ ಆಸಕ್ತಿ ಹೊಂದಿರುವುದನ್ನು ಖಚಿತಪಡಿಸಿದ್ದಾರೆ.
ಈ ಕುರಿತು ಮಲ್ನಾಡ್ ಟೈಮ್ಸ್ ಗೆ ಮಾತನಾಡಿದ ಅವರು,
“ಪಕ್ಷ ಮತ್ತು ನಮ್ಮ ಶಾಸಕರು ನನಗೆ ಅವಕಾಶ ನೀಡಿ ಟಿಕೆಟ್ ನೀಡಿದರೆ ಕೆಂಚನಾಲ ತಾಲೂಕು ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ಹಲವು ವರ್ಷಗಳಿಂದ ಜನರ ಮಧ್ಯೆ ಕೆಲಸ ಮಾಡಿದ್ದೇನೆ. ಮುಂದೆ ಅವಕಾಶ ಸಿಕ್ಕರೆ ಕ್ಷೇತ್ರದ ಜನರೊಂದಿಗೆ ಇದ್ದು ಸೇವೆ ಮಾಡಲು ಬಯಸುತ್ತೇನೆ,” ಎಂದು ಚಿದಂಬರ ಹೂವಿನಕೋಣೆ ತಿಳಿಸಿದ್ದಾರೆ.
ಮಾರುತಿಪುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿರುವ ಚಿದಂಬರ ಹೂವಿನಕೋಣೆ ಅವರಿಗೆ ಹಲವು ವರ್ಷಗಳ ರಾಜಕೀಯ ಹಾಗೂ ಸಾರ್ವಜನಿಕ ಜೀವನದ ಅನುಭವವಿದೆ.ವಿಶೇಷವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಲ್ಕು ಬಾರಿ ನಿರಂತರವಾಗಿ ಸದಸ್ಯರಾಗಿ ಆಯ್ಕೆಯಾಗಿದ್ದು, ಒಂದೂ ಬಾರಿ ಸೋಲು ಕಾಣದೆ ಸತತವಾಗಿ ಜನರ ವಿಶ್ವಾಸ ಗಳಿಸಿರುವುದು ಅವರ ಸ್ಥಳೀಯ ರಾಜಕೀಯ ಪಯಣದ ಪ್ರಮುಖ ಅಂಶವಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿರುವ ಅವರು, ಇದೀಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಂಚನಾಲ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಅವರ ಆಸಕ್ತಿ ಈಗ ಬಹಿರಂಗವಾಗಿದ್ದು, ಪಕ್ಷ ಹಾಗೂ ಶಾಸಕ ಮಟ್ಟದಲ್ಲಿ ಟಿಕೆಟ್ ಕುರಿತು ಯಾವ ತೀರ್ಮಾನ ಹೊರಬರುತ್ತದೆ ಎಂಬುದು ಮುಂದಿನ ರಾಜಕೀಯ ಕುತೂಹಲವಾಗಿದೆ.
ಟಿಕೆಟ್ ಹಂಚಿಕೆ ಇನ್ನೂ ಅಂತಿಮವಾಗಿಲ್ಲದಿದ್ದರೂ, ಚಿದಂಬರ ಹೂವಿನಕೋಣೆ ಅವರ ಹೇಳಿಕೆಯಿಂದ ಅವಕಾಶ ಸಿಕ್ಕರೆ ಚುನಾವಣಾ ಕಣಕ್ಕಿಳಿಯಲು ಅವರು ಸಿದ್ಧರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.

