ಹೊಸನಗರ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರವು ಸಿಬಿಐ, ಐಟಿ ಹಾಗೂ ಇ.ಡಿಯಂತಹ ಸ್ವಾಯತ್ತ ಮತ್ತು ಸಾಂವಿಧಾನಿಕ ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ), ಅಕ್ಟೋಬರ್ 12ರ ಸೋಮವಾರದಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಧರಣಿ ಹಮ್ಮಿಕೊಂಡಿದೆ. ಈ ಕುರಿತು ಸಮಿತಿಯ ಜಿಲ್ಲಾ ಸಂಚಾಲಕ ಅರಳಸುರಳಿ ನಾಗರಾಜ್ ಮಾಹಿತಿ ನೀಡಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಳೆದ 12 ವರ್ಷಗಳಿಂದ ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ಈ ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿ-ಯೇತರ ನಾಯಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ನಿಟ್ಟಿನಲ್ಲಿ ಶೇ. 96ರಷ್ಟು ದಾಳಿಗಳು ಕೇವಲ ವಿಪಕ್ಷ ನಾಯಕರ ಮೇಲೆಯೇ ನಡೆದಿವೆ ಎಂಬ ಸತ್ಯವನ್ನು ಮಾಧ್ಯಮಗಳ ವರದಿಗಳು ಬಯಲು ಮಾಡಿವೆ. ವಾಮಮಾರ್ಗದ ಮೂಲಕ ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಿ ಅಧಿಕಾರ ಕಸಿದುಕೊಳ್ಳುವುದು ಈ ದಾಳಿಗಳ ಹಿಂದಿನ ಅಸಲಿ ಉದ್ದೇಶವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಇತ್ತೀಚೆಗೆ ರಾಜ್ಯದ ದಲಿತ ಸಮುದಾಯದ ಸಚಿವರೊಬ್ಬರ ಮೇಲೆ ನಡೆದ ಇ.ಡಿ ದಾಳಿಯು ಕೇಂದ್ರದ ಈ ರಾಜಕೀಯ ಷಡ್ಯಂತ್ರಕ್ಕೆ ತಾಜಾ ನಿದರ್ಶನವಾಗಿದೆ. ಇಂತಹ ದ್ವೇಷದ ರಾಜಕಾರಣವನ್ನು ತೀವ್ರವಾಗಿ ಖಂಡಿಸಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕರೆಯ ಮೇರೆಗೆ ಸೋಮವಾರ ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿಗಳ ಎದುರು ಪ್ರತಿಭಟನೆ ನಡೆಯಲಿದೆ. ಅದೇ ರೀತಿ ಶಿವಮೊಗ್ಗ ಡಿಸಿ ಕಚೇರಿ ಮುಂದೆಯೂ ಧರಣಿ ಆಯೋಜಿಸಲಾಗಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳ ಡಿಎಸ್‌ಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು” ಎಂದು ಅವರು ಮನವಿ ಮಾಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂದೇಶ್ ಮತ್ತಿಮನೆ, ನಾರಾಯಣ್, ಸುಬ್ರಹ್ಮಣ್ಯ, ಚಂದ್ರಣ್ಣ, ಮಾಲತೇಶ್, ಸುನಿಲ್, ಗಣೇಶ್ ಹಾಗೂ ವಿಠಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

