ರಿಪ್ಪನ್‌ಪೇಟೆ: ಶಿಕ್ಷಣವು ಕೇವಲ ಅಕ್ಷರ ಜ್ಞಾನವನ್ನಷ್ಟೇ ನೀಡದೆ, ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಹಾಗೂ ಪ್ರಶ್ನಿಸುವ ಮನೋಭಾವವನ್ನು ಬೆಳೆಸುತ್ತದೆ. ಇದರ ಮೂಲಕವೇ ಸಮಾಜದಲ್ಲಿ ಅತ್ಯುನ್ನತ ಗೌರವ ಮತ್ತು ಸ್ಥಾನಮಾನ ಗಳಿಸಲು ಸಾಧ್ಯ ಎಂದು ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 2026-27ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ಯುವ ರೆಡ್‌ಕ್ರಾಸ್, ರೆಡ್‌ರಿಬ್ಬನ್ ಹಾಗೂ ರೋವರ್ಸ್-ರೇಂಜರ್ಸ್ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಮತ್ತೆಂದೂ ಮರಳಿ ಬರುವುದಿಲ್ಲ. ಪ್ರಸ್ತುತ ತಂತ್ರಜ್ಞಾನ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮದಿಂದ ವ್ಯಾಸಂಗ ಮಾಡಿ ಪೋಷಕರಿಗೆ ಹಾಗೂ ಕಲಿತ ಸಂಸ್ಥೆಗೆ ಕೀರ್ತಿ ತರಬೇಕು. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಅರ್ಧಕ್ಕೆ ಕೈಬಿಡಬಾರದು ಎಂದು ಕಿವಿಮಾತು ಹೇಳಿದರು. ತಮ್ಮ ಶಾಲಾ ದಿನಗಳನ್ನು ಸ್ಮರಿಸಿಕೊಂಡ ಶಾಸಕರು, ಹಿಂದಿನ ಕಾಲದಲ್ಲಿ ಶಿಕ್ಷಕರು ಹೊಡೆದು ಬುದ್ಧಿ ಕಲಿಸುತ್ತಿದ್ದರೂ, ಪೋಷಕರು ಮಕ್ಕಳ ಒಳಿತಿಗಾಗಿ ಅದಕ್ಕೆ ಸಹಮತ ಸೂಚಿಸುತ್ತಿದ್ದರು ಎಂದರು.
ಇದೇ ವೇಳೆ ಮಹತ್ವದ ಘೋಷಣೆಯೊಂದನ್ನು ಮಾಡಿದ ಶಾಸಕರು, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವವರಿಗೆ ವೈಯಕ್ತಿಕವಾಗಿ 10 ಸಾವಿರ ರೂ. ಬಹುಮಾನ ನೀಡುವುದಾಗಿ ತಿಳಿಸಿದರು. ಜೊತೆಗೆ, ಹೆಣ್ಣುಮಕ್ಕಳು ದೇಶದ ಆಸ್ತಿಯಾಗಿದ್ದು, ಅವರನ್ನು ಅತ್ಯಂತ ಗೌರವಯುತವಾಗಿ ಕಾಣಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಬಿ.ಎಲ್. ರಾಜು ವಹಿಸಿದ್ದರು. ತೀರ್ಥಹಳ್ಳಿ ತುಂಗಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಬಿ. ಗಣಪತಿ ಉತ್ತುಂಗ ಅವರು ವಿಶೇಷ ಉಪನ್ಯಾಸ ನೀಡಿದರು. ಇದೇ ವೇದಿಕೆಯಲ್ಲಿ ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ಸಮಟಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಸ್. ರತ್ನಾಕುಮಾರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಿಡಿಸಿ ಉಪಾಧ್ಯಕ್ಷ ಆರ್.ಹೆಚ್. ಶ್ರೀನಿವಾಸ ಆಚಾರ್, ಗ್ಯಾರಂಟಿ ಯೋಜನಾ ಸಮಿತಿ ಸದಸ್ಯ ರವೀಂದ್ರ ಕೆರೆಹಳ್ಳಿ, ಬಗರ್‌ಹುಕುಂ ಸಮಿತಿ ಸದಸ್ಯೆ ಸಾಕಮ್ಮ ಹರತಾಳು, ಸಿಡಿಸಿ ಸದಸ್ಯರುಗಳಾದ ಪಿಯೂಸ್ ರೋಡ್ರಿಗಸ್, ಮಂಜುನಾಥ ಕಾಮತ್, ಹರ್ಷ, ರಮೇಶ್ ಫ್ಯಾನ್ಸಿ, ವಿಜೇಂದ್ರ ಪಿ. ಹಿರಗ್ಗಿ, ರಾಘವೇಂದ್ರ ಕೆ.ಸಿ., ಯೋಗೀಶ್ ಬೆಳ್ಳೂರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಎಂ. ಕಾವ್ಯ, ಎಸ್.ಎನ್. ಜೀವನ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪವಿತ್ರ ಮತ್ತು ತಂಡದವರ ಪ್ರಾರ್ಥನೆ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಕುಮಾರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಕಾವ್ಯ ನಿರೂಪಣೆ ಮಾಡಿದರು ಮತ್ತು ಅಂಜನಕುಮಾರ್ ವಂದಿಸಿದರು.

