ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವವು ಭಕ್ತರ ಅಪಾರ ಸಡಗರ ಮತ್ತು ವಿಜೃಂಭಣೆಯ ನಡುವೆ ಯಶಸ್ವಿಯಾಗಿ ಸಂಪನ್ನಗೊಂಡಿತು.
ಪಿತೃಪಕ್ಷದ ಅವಧಿಯಲ್ಲಿ, ವಿಶೇಷವಾಗಿ ಮಂಗಳವಾರ ಹಾಗೂ ಶುಕ್ರವಾರದಂದು ನಡೆಯುವ ಈ ಜಾತ್ರೆಗೆ ತನ್ನದೇ ಆದ ವಿಶಿಷ್ಟ ಆಚರಣೆಗಳಿವೆ. ರೈತರು ತಾವು ಬೆಳೆದ ಅಡಿಕೆ, ಕಾಳುಮೆಣಸು, ಭತ್ತ ಮತ್ತು ಶುಂಠಿ ಬೆಳೆಗಳಿಗೆ ಯಾವುದೇ ರೋಗಬಾಧೆ ತಗುಲದಿರಲಿ ಎಂದು ಬೇಡಿಕೊಂಡು, ದೇವಿಗೆ ಬೆಳೆಯ ಫಸಲನ್ನು ಸಮರ್ಪಿಸಿ ಪ್ರಾರ್ಥಿಸುವುದು ಇಲ್ಲಿನ ವಾಡಿಕೆ. ಹಾಗೆಯೇ, ಮೊಸರನ್ನದ ಬುತ್ತಿಯನ್ನು ನೈವೇದ್ಯ ಮಾಡಿ, ದೇವಿಯ ಮೀಸಲು ಬೆಣ್ಣೆಯನ್ನು ಕಲ್ಲಿನ ಬಂಡೆಗೆ ಎಸೆಯುವ ಹಿಂದಿನಿಂದ ನಡೆದುಬಂದಿರುವ ಸಾಂಪ್ರದಾಯಿಕ ಪದ್ಧತಿಯನ್ನು ಭಕ್ತರು ಶ್ರದ್ಧಾಭಕ್ತಿಗಳಿಂದ ಆಚರಿಸಿದರು.
ಜಾತ್ರೆಯ ದಿನ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಭಾಸ್ಕರ್ ಜೋಯ್ಸ್ ಅವರ ಉಸ್ತುವಾರಿಯಲ್ಲಿ ದೇವಿಗೆ ಪುಣ್ಯಾಭಿಷೇಕ, ಆಕರ್ಷಕ ಹೂವಿನ ಅಲಂಕಾರ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ಜರುಗಿತು. ಬಳಿಕ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಇದೇ ವೇಳೆ ಮುತ್ತೈದೆಯರಿಗೆ ಅರಿಶಿನ-ಕುಂಕುಮ, ಬಳೆ ಹಾಗೂ ರವಿಕೆ ಕಣ ನೀಡಿ ಉಡಿ ತುಂಬುವ ಸಂಪ್ರದಾಯವೂ ನೆರವೇರಿತು.
ಕ್ಷೇತ್ರದ ಮಹಿಮೆ ಕುರಿತು ವಿವರಿಸಿದ ಪ್ರಧಾನ ಅರ್ಚಕ ಭಾಸ್ಕರ್ ಜೋಯ್ಸ್, “ಶ್ರೀ ಜೇನುಕಲ್ಲಮ್ಮ ದೇವಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುವ ಕರುಣಾಮಯಿ. ಸಂತಾನ ಭಾಗ್ಯಕ್ಕಾಗಿ ನವದಂಪತಿಗಳು, ಚರ್ಮವ್ಯಾಧಿ ಸೇರಿದಂತೆ ನಾನಾ ಕಾಯಿಲೆಗಳಿಂದ ಬಳಲುತ್ತಿರುವವರು ಇಲ್ಲಿಗೆ ಆಗಮಿಸಿ ಹರಕೆ ಹೊತ್ತು, ಮುಡುಪು ಸಲ್ಲಿಸಿದರೆ ಶೀಘ್ರವೇ ಇಷ್ಟಾರ್ಥ ಸಿದ್ಧಿಯಾಗುತ್ತದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಕಾರ್ಯಾಧ್ಯಕ್ಷರು ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ್, ಎಂ.ಪಿ. ಸುರೇಶ್, ಗುರುರಾಜ ಭಟ್ ಸೇರಿದಂತೆ ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

