ಹೊಸನಗರ: ಪಶ್ಚಿಮ ಘಟ್ಟಗಳ ರಕ್ಷಣೆ ಹಾಗೂ ಭವಿಷ್ಯದ ಜೀವರಾಶಿಯ ಉಳಿವಿಗಾಗಿ ಡಾ. ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾಲಹರಣ ಮಾಡದೇ ತಕ್ಷಣವೇ ಅಂತಿಮ ಅಧಿಸೂಚನೆಯಾಗಿ ಹೊರಡಿಸಬೇಕು ಎಂದು ಹೊಸನಗರ ತಾಲೂಕು ಜನ ಸಂಗ್ರಾಮ ಪರಿಷತ್ ಮತ್ತು ಪರಿಸರ ಆಸಕ್ತರ ಪರವಾಗಿ ಗಿರೀಶ್ ಆಚಾರ್ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ (MoEFCC) ಪತ್ರದ ಮೂಲಕ ಗಂಭೀರ ಒತ್ತಾಯ ಮಾಡಿದ್ದಾರೆ.
ಗುಜರಾತ್‌ನಿಂದ ಕನ್ಯಾಕುಮಾರಿವರೆಗೆ ಸುಮಾರು 1,60,000 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ಕಸ್ತೂರಿ ರಂಗನ್ ಕಾರ್ಯನಿರತ ತಂಡವು 2013 ರಲ್ಲೇ ಶಿಫಾರಸ್ಸು ಮಾಡಿತ್ತು. ಈ ವರದಿಯ ಅನ್ವಯ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಗಣಿಗಾರಿಕೆ, ಉಷ್ಣ ವಿದ್ಯುತ್ ಯೋಜನೆಗಳು ಮತ್ತು ಮಾಲಿನ್ಯಕಾರಕ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಸೂಚಿಸಲಾಗಿದೆ. ಅಲ್ಲದೆ, 2012 ರಲ್ಲೇ ಯುನೆಸ್ಕೋ ಪಶ್ಚಿಮ ಘಟ್ಟದ ವ್ಯಾಪ್ತಿಯನ್ನು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ ಎಂದು ಪತ್ರದಲ್ಲಿ ನೆನಪಿಸಲಾಗಿದೆ.
ರಾಜಕಾರಣಿಗಳ ವೈಯಕ್ತಿಕ ಲಾಭಕ್ಕೆ ವಿರೋಧ:
ದೇಶದ ಆಮ್ಲಜನಕದ ಕಣಜ ಹಾಗೂ ಕಾವೇರಿ, ಕೃಷ್ಣಾ, ತುಂಗಾ, ಭದ್ರಾ, ಶರಾವತಿಯಂತಹ ಪ್ರಮುಖ ನದಿಗಳ ಉಗಮ ಸ್ಥಾನವಾಗಿರುವ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಬದಲು, ಕೆಲವು ಜನಪ್ರತಿನಿಧಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಡ ಹಾಗೂ ಅವಿದ್ಯಾವಂತ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸಾವಿರಾರು ಎಕರೆ ಬೇನಾಮಿ ಆಸ್ತಿ ರಕ್ಷಣೆ, ಗಣಿಗಾರಿಕೆಯ ಒಳ ಒಪ್ಪಂದಗಳು, ಮತ್ತು ಅವೈಜ್ಞಾನಿಕ ಅಭಿವೃದ್ಧಿಯ ಮೂಲಕ ಕಮಿಷನ್ ಪಡೆಯುವ ಉದ್ದೇಶದಿಂದಲೇ ರಾಜಕಾರಣಿಗಳು ಈ ವರದಿಯ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.
ವಿಳಂಬವಾದರೆ ಪರಿಸರ ವಿಕೋಪದ ಆತಂಕ:
ವರದಿ ಸಲ್ಲಿಕೆಯಾಗಿ 12 ವರ್ಷಗಳೇ ಕಳೆದಿದ್ದರೂ ಅಂತಿಮ ಅಧಿಸೂಚನೆ ಹೊರಡಿಸದ ಕಾರಣ, ಈಗಾಗಲೇ ಲಕ್ಷಾಂತರ ಹೆಕ್ಟೇರ್ ನೈಸರ್ಗಿಕ ಭೂಮಿ ಒತ್ತುವರಿಯಾಗಿದೆ. ನಮ್ಮ ದೇಶದ ಮಾನ್ಸೂನ್ ಮಳೆಯನ್ನು ನಿಯಂತ್ರಿಸುವ ಈ ಘಟ್ಟಗಳನ್ನು ಸಂರಕ್ಷಿಸದೇ ಹೋದರೆ ಮುಂದಿನ ದಿನಗಳಲ್ಲಿ ತೀವ್ರ ಪರಿಸರ ವಿಕೋಪ ಹಾಗೂ ಹವಾಮಾನ ವೈಪರಿತ್ಯ ಎದುರಿಸಬೇಕಾಗುತ್ತದೆ. ಆದ್ದರಿಂದ, ದೇಶದ 150 ಕೋಟಿ ಜನರ ಹಿತದೃಷ್ಟಿಯಿಂದ, ಮೂಕ ಪ್ರಾಣಿಗಳ ಹಾಗೂ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಕೇಂದ್ರ ಸರ್ಕಾರ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿ ಅಂತಿಮ ಆದೇಶ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

