ರಿಪ್ಪನ್‌ಪೇಟೆ: ಜನ್ಮ ನೀಡಿದ ತಂದೆ-ತಾಯಿ ಹಾಗೂ ವಿದ್ಯೆ ಕಲಿಸುವ ಗುರುಗಳನ್ನು ಗೌರವಿಸುವ ಗುಣವನ್ನು ಮಕ್ಕಳು ಬೆಳೆಸಿಕೊಳ್ಳಬೇಕು. ಜೀವ ಕೊಟ್ಟ ಹೆತ್ತವರು ಹಣದಿಂದ ಕೊಳ್ಳಲಾಗದ ಅಮೂಲ್ಯ ರತ್ನಗಳಾಗಿದ್ದು, ‘ಅಮ್ಮ’ ಎಂಬ ಎರಡಕ್ಷರವೇ ಭಾರತೀಯ ಸಂಸ್ಕೃತಿಯ ಶ್ರೇಷ್ಠತೆಯಾಗಿದೆ ಎಂದು ಬಾರ್ಕೂರಿನ ‘ಶ್ರೀನವಾಕ್ಷರೀ’ ಖ್ಯಾತ ವಾಗ್ಮಿ ಎನ್.ಆರ್. ದಾಮೋದರ ಶರ್ಮ ಅಭಿಪ್ರಾಯಪಟ್ಟರು.
ಸ್ಥಳೀಯ ಕಲಾಕೌಸ್ತುಭ ಕನ್ನಡ ಸಂಘದ 33ನೇ ವಾರ್ಷಿಕೋತ್ಸವ ಹಾಗೂ 71ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ‘ಕರುನಾಡ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಮುಂದುವರಿದು ಮಾತನಾಡಿದ ಅವರು, “ಮತ್ತೊಂದು ಜನ್ಮವೆಂಬುದಿದ್ದರೆ ಈ ಪುಣ್ಯಭೂಮಿಯಲ್ಲಿಯೇ ಹುಟ್ಟಿಸು; ಮನುಷ್ಯನಾಗಿ ಅಲ್ಲದಿದ್ದರೂ ಪ್ರಾಣಿ, ಪಕ್ಷಿ ಅಥವಾ ಕಲ್ಲಿನ ಬಂಡೆಯಾಗಿಯಾದರೂ ಭಾರತದಲ್ಲೇ ಜನ್ಮ ನೀಡು ಎಂದು ಪ್ರಾರ್ಥಿಸುವ ಉದಾತ್ತ ಸಂಸ್ಕೃತಿ ನಮ್ಮದು. ಮಂದಿರ, ಮಸೀದಿ, ಚರ್ಚ್‌ಗಳಲ್ಲಿ ಧರ್ಮದ ಭಿನ್ನತೆ ಕಂಡುಬಂದರೂ, ಶಾಲೆಗಳಲ್ಲಿ ಸರ್ವಜನಾಂಗದವರೂ ಒಂದೇ ಎಂಬ ಭಾವೈಕ್ಯತೆ ಕಾಣಸಿಗುತ್ತದೆ. ಇದೇ ನಮ್ಮ ನೆಲ, ಜಲ ಮತ್ತು ಭಾಷೆಯ ನಿಜವಾದ ಸೊಗಡು” ಎಂದು ಬಣ್ಣಿಸಿದರು.

ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಎಂ.ಬಿ. ಮಂಜುನಾಥ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮಾಜಿ ಅಧ್ಯಕ್ಷ ಬೇಕರಿ ನಾರಾಯಣ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ಹೆಚ್.ವಿ. ಈಶ್ವರಪ್ಪಗೌಡ, ಶ್ರೀ ಸಿದ್ಧಿವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಿ.ಈ. ಮಧುಸೂದನ್, ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್, ಕಾರ್ಯದರ್ಶಿ ರಮೇಶ್ ಹೆಬ್ಬಾರ್, ಕಲಾಕೌಸ್ತುಭ ಕನ್ನಡ ಸಂಘದ ಕಾರ್ಯದರ್ಶಿ ರಾಮಚಂದ್ರ ಹಾಗೂ ಜಿ.ಆರ್.ಕೆ. ಮೂರ್ತಿ ಟ್ರಸ್ಟ್‌ನ ಟ್ರಸ್ಟಿ ಜಿ.ಆರ್. ಗೋಪಾಲಕೃಷ್ಣ ಪಾಲ್ಗೊಂಡು ಮಾತನಾಡಿದರು.
ತಾಯಿ ಭುವನೇಶ್ವರಿಯ ವೈಭವದ ಮೆರವಣಿಗೆ: ಸಮಾರಂಭಕ್ಕೂ ಮುನ್ನ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಿಂದ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಭವ್ಯ ರಾಜಬೀದಿ ಮೆರವಣಿಗೆ ನಡೆಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಡಿನ ಹೆಸರಾಂತ ಜಾನಪದ ಕಲಾ ತಂಡಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.

ಸ್ಥಳೀಯ ಪೊಲೀಸ್ ಠಾಣೆಯ ಪಿಎಸ್‌ಐ ರಾಜುರೆಡ್ಡಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, “ಕನ್ನಡ ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಅಸ್ಮಿತೆಯ ಪ್ರತೀಕ. ಇಂದಿಗೂ ಕನ್ನಡ ಭಾಷೆ ಜೀವಂತವಾಗಿ ಉಳಿದಿರುವುದು ಗ್ರಾಮೀಣ ಭಾಗಗಳಲ್ಲಿ. ನಾಡು-ನುಡಿಯ ಹಿರಿಮೆಯನ್ನು ಉಳಿಸಿ ಬೆಳೆಸಲು ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ, ನಿತ್ಯೋತ್ಸವವಾಗಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಂದ್ರಕುಮಾರ್ ಸ್ವಾಗತಿಸಿದರು. ಎಂ. ಸುರೇಶ್‌ಸಿಂಗ್ ಕಾರ್ಯಕ್ರಮ ನಿರೂಪಿಸಿದರು. ಮುರುಳೀಧರ ವಂದಿಸಿದರು.
