ಹೊಸನಗರ

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ: ದೆಹಲಿಯಲ್ಲಿ ವಿರೋಧ, ಇಲ್ಲಿ ಬೆಂಬಲವೇ? ಕಾಂಗ್ರೆಸ್ ವಿರುದ್ಧ ವಾಟಗೋಡು ಸುರೇಶ್ ವಾಗ್ದಾಳಿ

ಹೊಸನಗರ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಪಾದಯಾತ್ರೆ ನಡೆಸಿದ್ದ ಕಾಂಗ್ರೆಸ್ ಮುಖಂಡರು ಇದೀಗ ತಮ್ಮದೇ ಪಕ್ಷದ ಕೇಂದ್ರ ನಾಯಕರು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಮೌನವಾಗಿರುವುದೇಕೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಟಗೋಡು ಸುರೇಶ್ ಪ್ರಶ್ನಿಸಿದ್ದಾರೆ.

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆ: ದೆಹಲಿಯಲ್ಲಿ ವಿರೋಧ, ಇಲ್ಲಿ ಬೆಂಬಲವೇ? ಕಾಂಗ್ರೆಸ್ ವಿರುದ್ಧ ವಾಟಗೋಡು ಸುರೇಶ್ ವಾಗ್ದಾಳಿ – vatagodu su…

ಹೊಸನಗರ: ಹೊಸನಗರ ಪ್ರತ್ಯೇಕ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಏಪ್ರಿಲ್ ತಿಂಗಳಲ್ಲಿ ಬೃಹತ್ ಪಾದಯಾತ್ರೆ ಹಾಗೂ ಹಕ್ಕೊತ್ತಾಯ ಮಂಡನೆ ಸಭೆ ನಡೆಸಿದ್ದ ಕಾಂಗ್ರೆಸ್ ಮುಖಂಡರು, ಇದೀಗ ತಮ್ಮದೇ ಪಕ್ಷದ ಕೇಂದ್ರ ನಾಯಕರು ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಯಾವ ನಿಲುವು ಹೊಂದಿದ್ದಾರೆ ಎಂದು ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಟಗೋಡು ಸುರೇಶ್ ಪ್ರಶ್ನಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುವರ್ಷಗಳ ಬೇಡಿಕೆಯಾಗಿರುವ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಕೇಂದ್ರ ಸರ್ಕಾರದ ಹೊಸ ಕ್ಷೇತ್ರ ಪುನರ್‌ವಿಂಗಡಣೆ ಪ್ರಸ್ತಾವ ಅವಕಾಶ ಕಲ್ಪಿಸಬಹುದಾಗಿದೆ. ಆದರೆ ಕಾಂಗ್ರೆಸ್ ಪಕ್ಷದ ನಾಯಕರು ಕೇಂದ್ರದಲ್ಲಿ ಈ ಪ್ರಸ್ತಾವವನ್ನು ವಿರೋಧಿಸುತ್ತಿರುವುದು ಸ್ಥಳೀಯ ಕಾಂಗ್ರೆಸ್ ಮುಖಂಡರ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಆರೋಪಿಸಿದರು.

ಹೊಸನಗರಕ್ಕೆ ಮತ್ತೆ ವಿಧಾನಸಭಾ ಕ್ಷೇತ್ರ ಸಿಗುವ ಅವಕಾಶ

2011ರ ಜನಗಣತಿ ಆಧಾರಿತ ರಾಜ್ಯವಾರು ಪ್ರಾತಿನಿಧ್ಯದ ಪ್ರಮಾಣವನ್ನು ಉಳಿಸಿಕೊಂಡು ಲೋಕಸಭೆ ಮತ್ತು ವಿಧಾನಸಭೆಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಮುಂದಿಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಸುರೇಶ್ ಅಭಿಪ್ರಾಯಪಟ್ಟರು.

ಈ ಪ್ರಸ್ತಾವದಂತೆ ಕರ್ನಾಟಕ ವಿಧಾನಸಭೆಯ ಸದಸ್ಯರ ಸಂಖ್ಯೆ 224ರಿಂದ 336ಕ್ಕೆ ಏರುವ ಸಾಧ್ಯತೆಯಿದ್ದು, ಹೆಚ್ಚುವರಿಯಾಗಿ 112 ಕ್ಷೇತ್ರಗಳು ರೂಪುಗೊಳ್ಳಬಹುದು. ಇದರಿಂದ ಹಿಂದೆ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದ ಹೊಸನಗರವನ್ನು ಮತ್ತೆ ಮರುಸ್ಥಾಪಿಸಲು ಅವಕಾಶ ದೊರೆಯಬಹುದು ಎಂದು ಅವರು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಹೊಸನಗರದ ಜನತೆ ಹಲವು ವರ್ಷಗಳಿಂದ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕಾಗಿ ಬೇಡಿಕೆ ಮುಂದಿಡುತ್ತಿದ್ದಾರೆ. ಕ್ಷೇತ್ರ ಮರುಸ್ಥಾಪನೆಯಿಂದ ಸ್ಥಳೀಯ ಜನರ ಸಮಸ್ಯೆಗಳಿಗೆ ಪ್ರತ್ಯೇಕ ರಾಜಕೀಯ ಪ್ರಾತಿನಿಧ್ಯ ದೊರೆಯುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಪ್ರಸ್ತಾವ ಹೊಸನಗರದ ಪಾಲಿಗೆ ಸುವರ್ಣಾವಕಾಶವಾಗಬಹುದು ಎಂದು ತಿಳಿಸಿದರು.

ದೆಹಲಿಯಲ್ಲಿ ವಿರೋಧ, ಹೊಸನಗರದಲ್ಲಿ ಬೆಂಬಲವೇ?

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ಹೋರಾಟ ನಡೆಸಿದ್ದ ಕಾಂಗ್ರೆಸ್ ಮುಖಂಡರ ನಿಲುವನ್ನು ಪ್ರಶ್ನಿಸಿದ ಸುರೇಶ್, ಏಪ್ರಿಲ್ ತಿಂಗಳಲ್ಲಿ ಕಾಂಗ್ರೆಸ್‌ನ ಜಿಲ್ಲಾ ಮಟ್ಟದ ನಾಯಕರು ರಿಪ್ಪನ್‌ಪೇಟೆಯಲ್ಲಿ ಸೇರಿ ಕ್ಷೇತ್ರ ಮರುಸ್ಥಾಪನೆಗಾಗಿ ನಿರಂತರ ಹೋರಾಟ ನಡೆಸುವುದಾಗಿ ಘೋಷಿಸಿದ್ದರು ಎಂದು ನೆನಪಿಸಿದರು.

ಆದರೆ ಇದೀಗ ಕೇಂದ್ರದಲ್ಲಿ ಅವರದೇ ಪಕ್ಷದ ನಾಯಕರು ಕ್ಷೇತ್ರ ಪುನರ್‌ವಿಂಗಡಣೆ ಪ್ರಸ್ತಾವವನ್ನು ವಿರೋಧಿಸುತ್ತಿದ್ದಾರೆ. ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಕಾಂಗ್ರೆಸ್ ಪಕ್ಷದ ನಿಲುವು ದ್ವಂದ್ವದಿಂದ ಕೂಡಿದೆ ಎಂದು ಆರೋಪಿಸಿದರು.

ಒಂದೆಡೆ ಹೊಸನಗರದಲ್ಲಿ ಪ್ರತ್ಯೇಕ ಕ್ಷೇತ್ರ ರಚನೆಗೆ ಬೆಂಬಲ ವ್ಯಕ್ತಪಡಿಸುವುದು, ಮತ್ತೊಂದೆಡೆ ದೆಹಲಿಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆಗೆ ವಿರೋಧ ವ್ಯಕ್ತಪಡಿಸುವುದು ಹೇಗೆ ಎಂಬುದನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಬದ್ಧತೆ ಇದ್ದರೆ ಈಗ ಪ್ರತಿಭಟನೆ ನಡೆಸಲಿ

ಹೊಸನಗರ ಕ್ಷೇತ್ರ ಮರುಸ್ಥಾಪನೆಗೆ ಕಾಂಗ್ರೆಸ್ ಮುಖಂಡರಿಗೆ ನಿಜವಾದ ಬದ್ಧತೆ ಮತ್ತು ಜನಪರ ಕಾಳಜಿ ಇದ್ದರೆ, ತಮ್ಮದೇ ಪಕ್ಷದ ಕೇಂದ್ರ ನಾಯಕರನ್ನು ಪ್ರಶ್ನಿಸಬೇಕು ಎಂದು ವಾಟಗೋಡು ಸುರೇಶ್ ಸವಾಲು ಹಾಕಿದರು.

ಈ ಹಿಂದೆ ರಿಪ್ಪನ್‌ಪೇಟೆಯಲ್ಲಿ ಪಾದಯಾತ್ರೆ ನಡೆಸಿ ಕ್ಷೇತ್ರ ರಚನೆಗಾಗಿ ಹೋರಾಟ ಮಾಡುವುದಾಗಿ ಹೇಳಿದ್ದ ನಾಯಕರು, ಈಗ ದೆಹಲಿಯಲ್ಲಿ ತಮ್ಮ ಪಕ್ಷದ ಮುಖಂಡರ ನಿಲುವಿನ ವಿರುದ್ಧ ಪ್ರತಿಭಟನೆ ನಡೆಸಲಿ. ಕ್ಷೇತ್ರ ಮರುಸ್ಥಾಪನೆಗೆ ಅನುಕೂಲವಾಗುವಂತಹ ಕಾನೂನು ತಿದ್ದುಪಡಿಗೆ ಬೆಂಬಲ ನೀಡುವಂತೆ ಒತ್ತಡ ಹೇರಲಿ ಎಂದು ಒತ್ತಾಯಿಸಿದರು.

ಅಂದೇ ಹೇಳಿದ್ದೆ, ಪಾದಯಾತ್ರೆಯಿಂದ ಕ್ಷೇತ್ರ ರಚನೆಯಾಗುವುದಿಲ್ಲ

ಏಪ್ರಿಲ್ ತಿಂಗಳಲ್ಲಿ ನಡೆದ ಪಾದಯಾತ್ರೆಯ ಸಂದರ್ಭದಲ್ಲಿಯೇ ಕೇವಲ ಪಾದಯಾತ್ರೆಯಿಂದ ಹೊಸ ವಿಧಾನಸಭಾ ಕ್ಷೇತ್ರ ರಚನೆಯಾಗುವುದಿಲ್ಲ ಎಂದು ತಾವು ಸ್ಪಷ್ಟಪಡಿಸಿದ್ದಾಗಿ ಸುರೇಶ್ ನೆನಪಿಸಿದರು.

ಕ್ಷೇತ್ರ ಮರುಸ್ಥಾಪನೆಯಾಗಬೇಕಾದರೆ ರಾಜಕೀಯ ನಾಯಕರು ಒಗ್ಗಟ್ಟಾಗಿ ಸಂಸತ್ತಿನಲ್ಲಿ ಚರ್ಚೆ ನಡೆಸಬೇಕು. ಅಗತ್ಯ ಕಾನೂನು ತಿದ್ದುಪಡಿ ಆಗಬೇಕು ಎಂದು ಅಂದೇ ತಿಳಿಸಿದ್ದೆ.

ಆದರೆ ಪಾದಯಾತ್ರೆಯಲ್ಲಿ ಭಾಗವಹಿಸಿಲ್ಲ ಎಂಬ ಕಾರಣಕ್ಕೆ ತಾವು ಕ್ಷೇತ್ರ ಮರುಸ್ಥಾಪನೆಯನ್ನು ವಿರೋಧಿಸುತ್ತಿರುವುದಾಗಿ ಅಪಪ್ರಚಾರ ಮಾಡಲಾಗಿತ್ತು ಎಂದು ಆರೋಪಿಸಿದರು.

ಇದೀಗ ಕ್ಷೇತ್ರ ಪುನರ್‌ವಿಂಗಡಣೆ ಕುರಿತ ಕಾನೂನು ತಿದ್ದುಪಡಿಯ ವಿಚಾರವೇ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲಿ ಅಂದು ಪಾದಯಾತ್ರೆ ನಡೆಸಿದ ಮುಖಂಡರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮುಖಂಡರ ನಡೆಯನ್ನೂ ಪ್ರಶ್ನಿಸಿದ ಸುರೇಶ್

ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗಾಗಿ ನಡೆದ ಪಾದಯಾತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರೂ ಭಾಗವಹಿಸಿದ್ದ ವಿಚಾರವನ್ನು ಸುರೇಶ್ ಪ್ರಸ್ತಾಪಿಸಿದರು.

ಅವರದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಅಂದು ಸ್ಥಳೀಯವಾಗಿ ಪ್ರತಿಭಟನೆ ನಡೆಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಕ್ಷೇತ್ರ ಮರುಸ್ಥಾಪನೆಗೆ ನಿಜವಾದ ಕಾಳಜಿ ಇದ್ದಿದ್ದರೆ ರಾಜಕೀಯ ಪಕ್ಷಗಳ ಮುಖಂಡರು ಕೇಂದ್ರ ಸರ್ಕಾರದ ಮಟ್ಟದಲ್ಲಿಯೇ ಒಗ್ಗಟ್ಟಾಗಿ ಪ್ರಯತ್ನಿಸಬೇಕಾಗಿತ್ತು. ಆದರೆ ಸ್ಥಳೀಯವಾಗಿ ಹೋರಾಟದ ಹೆಸರಿನಲ್ಲಿ ಪ್ರಚಾರ ಪಡೆಯುವುದೇ ಕೆಲವು ಮುಖಂಡರ ಉದ್ದೇಶವಾಗಿತ್ತು ಎಂದು ಟೀಕಿಸಿದರು.

ಹೊಸನಗರದ ಜನತೆ ರಾಜಕೀಯ ನಾಯಕರ ಹೇಳಿಕೆಗಳು ಹಾಗೂ ಅವರ ನೈಜ ನಿಲುವುಗಳ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳಬೇಕು. ಕ್ಷೇತ್ರ ಮರುಸ್ಥಾಪನೆಯಂತಹ ಮಹತ್ವದ ವಿಚಾರವನ್ನು ರಾಜಕೀಯ ಪ್ರಚಾರಕ್ಕೆ ಸೀಮಿತಗೊಳಿಸಬಾರದು ಎಂದು ವಾಟಗೋಡು ಸುರೇಶ್ ಹೇಳಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Koushik Kaapi

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.

Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650

ವೆಬ್‌ಸೈಟ್