ಹೊಸನಗರ: ಕಳೆದ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದ ಹೊಸನಗರ ಸರ್ಕಾರಿ ಪದವಿ ಪೂರ್ವ ಕಾಲೇಜು, ಈ ಬಾರಿ ಪ್ರಥಮ ಸ್ಥಾನ ಅಲಂಕರಿಸುವಂತೆ ಉಪನ್ಯಾಸಕರು ಶ್ರಮಿಸಬೇಕು ಎಂದು ಶಿವಮೊಗ್ಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ ತಿಳಿಸಿದರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಹಾಗೂ ತಾಲ್ಲೂಕು ಮಟ್ಟದ ಉಪನ್ಯಾಸಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯ ಮಟ್ಟದ ಪಿಯುಸಿ ಫಲಿತಾಂಶದಲ್ಲಿ ಸದ್ಯ 14ನೇ ಸ್ಥಾನದಲ್ಲಿರುವ ಶಿವಮೊಗ್ಗ ಜಿಲ್ಲೆಯನ್ನು 2026-27ನೇ ಸಾಲಿನಲ್ಲಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದರು.
ವಿದ್ಯಾರ್ಥಿಗಳ ಗಮನ ಸೆಳೆಯುವ ಕಲೆ ಮುಖ್ಯ:
ಇಂದಿನ ವಿದ್ಯಾರ್ಥಿಗಳು ಮೊಬೈಲ್ ವ್ಯಾಮೋಹಕ್ಕೆ ಒಳಗಾಗಿದ್ದು, ತರಗತಿಗಳಲ್ಲಿ ಪಾಠದ ಕಡೆಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈ ಸವಾಲನ್ನು ಮೆಟ್ಟಿ ನಿಲ್ಲಲು ಉಪನ್ಯಾಸಕರು ಪಾಠ ಆರಂಭಿಸುವ ಮುನ್ನವೇ ಸೂಕ್ತ ಪೀಠಿಕೆಯ ಮೂಲಕ ವಿದ್ಯಾರ್ಥಿಗಳ ಗಮನವನ್ನು ತಮ್ಮತ್ತ ಸೆಳೆಯುವ ತಂತ್ರಗಾರಿಕೆಯನ್ನು ಮೈಗೂಡಿಸಿಕೊಳ್ಳಬೇಕು. ಎಲ್ಲರೂ ಈ ವಿಧಾನವನ್ನು ಅನುಸರಿಸಿದರೆ ಹೊಸನಗರ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಾಮಾಜಿಕ ಸಮಾನತೆಯ ಹರಿಕಾರ ಕನಕದಾಸರು:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸ್ವಾಮಿರಾವ್ ಮಾತನಾಡಿ, ಕನಕದಾಸರು ಕೇವಲ ದಾಸಶ್ರೇಷ್ಠರಲ್ಲ, ಸಮಾಜದಲ್ಲಿದ್ದ ಜಾತಿ ತಾರತಮ್ಯ, ಅಸಮಾನತೆ, ಮೂಢನಂಬಿಕೆ ಹಾಗೂ ಬಾಹ್ಯ ಆಡಂಬರಗಳನ್ನು ವಿರೋಧಿಸಿದ ಮಹಾನ್ ವೈಚಾರಿಕ ಚಿಂತಕರು ಎಂದು ಬಣ್ಣಿಸಿದರು.
ಅಧಿಕಾರ, ಸಂಪತ್ತು, ಅಂತಸ್ತು ಹಾಗೂ ಸೌಂದರ್ಯ ಶಾಶ್ವತವಲ್ಲ, ಬದಲಾಗಿ ಮನುಷ್ಯನ ಜ್ಞಾನ, ಪ್ರಾಮಾಣಿಕತೆ, ಪರೋಪಕಾರ ಮತ್ತು ಸನ್ನಡತೆಯೇ ಶ್ರೇಷ್ಠ ಎಂಬ ಸಂದೇಶವನ್ನು ಅವರು ತಮ್ಮ ಕೀರ್ತನೆಗಳ ಮೂಲಕ ಸಾರಿದ್ದಾರೆ. ಜನ್ಮಕ್ಕಿಂತ ಗುಣಕ್ಕೆ ಬೆಲೆ ನೀಡಿದ ಕನಕದಾಸರು, ಪರಿಶುದ್ಧ ಮನಸ್ಸು ಮತ್ತು ನಿಷ್ಕಲ್ಮಶ ಭಕ್ತಿಯಿಂದ ಮಾತ್ರ ದೇವರನ್ನು ಕಾಣಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ (ಸಿಡಿಸಿ) ಉಪಾಧ್ಯಕ್ಷ ಎಂ.ಪಿ. ಸುರೇಶ್, ಜಿಲ್ಲಾ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಸಂಕೂರು ಹಾಲಪ್ಪ, ಗೌರವಾಧ್ಯಕ್ಷ ದಾಮೋದರ ಶಣೈ, ಉಪಾಧ್ಯಕ್ಷೆ ಅಂಬಿಕಾ, ಉಪನ್ಯಾಸಕರಾದ ರಾಜೇಶ್, ಫ್ರಾನ್ಸಿಸ್, ಕೆ.ಎನ್. ಸುಬ್ರಹ್ಮಣ್ಯ, ಜಿ.ಎಸ್. ನಾಗೇಶ್, ಸಂತೋಷ್ ಕುಮಾರ್, ಎಂ. ಗಣಪತಿ, ಸುಮನ, ಶೇಷಾದ್ರಿ, ಗುರುರಾಜ್, ಶ್ರೀನಿವಾಸ್ ನಾಯ್ಕ್, ಕೆ.ವೈ. ಪ್ರವೀನ್, ಸಿಸ್ಟರ್ ಐರೀನ್ ಡಿಸಿಲ್ವಾ, ಪ್ರವೀಣ್ ಸೇರಿದಂತೆ ತಾಲ್ಲೂಕಿನ ಎಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.
