ಬೆಂಗಳೂರು/ಶಿವಮೊಗ್ಗ: ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸುವಾಗ ಮಲೆನಾಡಿನ ರೈತರು ಮತ್ತು ಸ್ಥಳೀಯ ನಿವಾಸಿಗಳ ಬದುಕಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ವರದಿಯ ಜನವಿರೋಧಿ ಅಂಶಗಳನ್ನು ಕೈಬಿಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೇರಿದಂತೆ ಸಂಬಂಧಪಟ್ಟ ವೇದಿಕೆಗಳ ಮುಂದೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಬೇಕು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಅರಣ್ಯ ಇಲಾಖೆಯ ಅನಗತ್ಯ ಹಸ್ತಕ್ಷೇಪ ಮತ್ತು ಕಠಿಣ ಕಾನೂನು ನಿಯಮಗಳಿಂದ ಮಲೆನಾಡಿನ ಜನರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಾರ್ವಜನಿಕ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೂ ಅರಣ್ಯ ಇಲಾಖೆ ತಡೆಯೊಡ್ಡುತ್ತಿರುವ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ರೆಸಾರ್ಟ್‌ಗಳಿಗೆ ಅನುಮತಿ, ಬಡವರ ಮನೆಗೆ ತಡೆ: ಆರೋಪ
ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ದೊಡ್ಡ ರೆಸಾರ್ಟ್‌ಗಳು, ಹೋಟೆಲ್‌ಗಳು ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತಿದೆ. ಆದರೆ ತಲೆತಲಾಂತರಗಳಿಂದ ಅದೇ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರು ತಮ್ಮ ಜಾಗದಲ್ಲಿ ಸಣ್ಣ ಮನೆ ನಿರ್ಮಿಸಿಕೊಳ್ಳಲು ಮುಂದಾದರೆ ವಿವಿಧ ಕಾನೂನುಗಳನ್ನು ಮುಂದಿಟ್ಟು ತಡೆಯಲಾಗುತ್ತಿದೆ ಎಂದು ಚನ್ನಬಸಪ್ಪ ಆರೋಪಿಸಿದರು.
ಅರಣ್ಯ ಇಲಾಖೆಯ ಇಂತಹ ತಾರತಮ್ಯದ ಧೋರಣೆಗೆ ಕಡಿವಾಣ ಹಾಕಬೇಕು. ಅರಣ್ಯ ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯ ನಿವಾಸಿಗಳ ಮೂಲಭೂತ ಹಕ್ಕುಗಳಿಗೆ ತೊಂದರೆಯಾಗದಂತೆ ಸರ್ಕಾರ ಸ್ಪಷ್ಟವಾದ ಮಾರ್ಗಸೂಚಿ ರೂಪಿಸಬೇಕು ಎಂದು ಒತ್ತಾಯಿಸಿದರು.
ಮಲೆನಾಡಿನ ಜನರ ಬದುಕು ಸಂಕಷ್ಟಕ್ಕೆ ಸಿಲುಕಬಾರದು
ಪಶ್ಚಿಮ ಘಟ್ಟ ಮತ್ತು ಮಲೆನಾಡಿನ ಪರಿಸರವನ್ನು ಸಂರಕ್ಷಿಸಬೇಕೆಂಬುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಕಸ್ತೂರಿರಂಗನ್ ವರದಿಯನ್ನು ಅವೈಜ್ಞಾನಿಕವಾಗಿ ಜಾರಿಗೊಳಿಸಿದರೆ ರೈತರು, ಆದಿವಾಸಿಗಳು ಹಾಗೂ ಸ್ಥಳೀಯ ನಿವಾಸಿಗಳ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.
ತಲೆತಲಾಂತರಗಳಿಂದ ಮಲೆನಾಡಿನಲ್ಲಿ ವಾಸಿಸುತ್ತಿರುವ ಜನರೇ ಅಲ್ಲಿನ ಕಾಡು, ಜಲಮೂಲ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಪರಿಸರ ಸಂರಕ್ಷಣೆಯ ಯಾವುದೇ ನಿರ್ಧಾರದಲ್ಲಿ ಸ್ಥಳೀಯರ ಅನುಭವ ಮತ್ತು ಅಭಿಪ್ರಾಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
‘ಪಶ್ಚಿಮ ಘಟ್ಟ ಉಳಿಸಿ’ ಆಂದೋಲನದಲ್ಲಿ ತಾವು ಸಕ್ರಿಯವಾಗಿ ಭಾಗವಹಿಸಿದ್ದನ್ನು ಉಲ್ಲೇಖಿಸಿದ ಅವರು, ಪರಿಸರ ಸಂರಕ್ಷಣೆ ಮತ್ತು ಜನಜೀವನ ಪರಸ್ಪರ ವಿರೋಧಿ ವಿಷಯಗಳಲ್ಲ. ಎರಡನ್ನೂ ಸಮತೋಲನದಿಂದ ಕಾಪಾಡುವ ನೀತಿಯನ್ನು ಸರ್ಕಾರ ರೂಪಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗದ ಕುಡಿಯುವ ನೀರಿನ ಯೋಜನೆಗೆ ಅಡ್ಡಿ ಆರೋಪ
ಶಿವಮೊಗ್ಗ ನಗರಕ್ಕೆ ಸಮರ್ಪಕ ಕುಡಿಯುವ ನೀರು ಒದಗಿಸಲು ನೂತನ ಜಲಶುದ್ಧೀಕರಣ ಘಟಕ ಸ್ಥಾಪಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಯೋಜನೆಗೆ ಗುರುತಿಸಿರುವ ಜಮೀನು ಕಂದಾಯ ಇಲಾಖೆಗೆ ಸೇರಿದ್ದರೂ, ಅದನ್ನು ‘ಪರಿಭಾವಿತ ಅರಣ್ಯ’ ಎಂದು ಪರಿಗಣಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ತಡೆಯೊಡ್ಡುತ್ತಿದ್ದಾರೆ ಎಂದು ಚನ್ನಬಸಪ್ಪ ಆರೋಪಿಸಿದರು.
ಕುಡಿಯುವ ನೀರಿನಂತಹ ಅತ್ಯಗತ್ಯ ಮೂಲಸೌಕರ್ಯ ಯೋಜನೆಗಳು ಅನಗತ್ಯ ಆಡಳಿತಾತ್ಮಕ ಗೊಂದಲಗಳಿಂದ ವಿಳಂಬವಾಗಬಾರದು. ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಯೋಜನೆಯ ಅನುಷ್ಠಾನಕ್ಕೆ ಎದುರಾಗಿರುವ ಅಡೆತಡೆಗಳನ್ನು ಸರ್ಕಾರ ಕೂಡಲೇ ನಿವಾರಿಸಬೇಕು ಎಂದು ಆಗ್ರಹಿಸಿದರು.
‘ಕಾಡು ಉಳಿದರೆ ಮಾತ್ರ ಮಲೆನಾಡು ಉಳಿಯುತ್ತದೆ’
ಅರಣ್ಯ ನಾಶದಿಂದ ಮಳೆಯ ಪ್ರಮಾಣದಲ್ಲಿ ಏರುಪೇರು, ಅಂತರ್ಜಲ ಮಟ್ಟ ಕುಸಿತ ಹಾಗೂ ಅನಾವೃಷ್ಟಿ–ಅತಿವೃಷ್ಟಿಯಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಕಾಡು ಮತ್ತು ಜಲಮೂಲಗಳನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶಾಸಕರು ಹೇಳಿದರು.
ಕಾಡನ್ನು ಉಳಿಸುವುದರ ಜೊತೆಗೆ ಅದರೊಂದಿಗೆ ಬದುಕು ಕಟ್ಟಿಕೊಂಡಿರುವ ರೈತರು ಮತ್ತು ಸ್ಥಳೀಯರ ಹಕ್ಕುಗಳನ್ನೂ ರಕ್ಷಿಸಬೇಕು. ಪರಿಸರ ಸಂರಕ್ಷಣೆ ಮತ್ತು ಜನಜೀವನವನ್ನು ಒಂದೇ ನಾಣ್ಯದ ಎರಡು ಮುಖಗಳಂತೆ ಪರಿಗಣಿಸಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

