ಹೊಸನಗರ ; ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ನಿಲ್ಲಿಸಿ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಸರ್ಕಾರ ಬಡವರ ವಿರೋಧಿಯಾಗಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೋಡೂರು ಚಂದ್ರಮೌಳಿ ಆರೋಪಿಸಿದರು.
ಇಲ್ಲಿನ ಇಲ್ಲಿನ ತಾಲೂಕು ಪಂಚಾಯಿತಿ ಕಛೇರಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದರು.
ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ವೇಳೆ ದೇಶದ ಕೂಲಿಕಾರ್ಮಿಕರ ಸಮಸ್ಯೆ ಹಾಗೂ ಜನರು ನಿರೊದ್ಯೋಗದಿಂದ ಗುಳೇ ಹೋಗುವುದನ್ನು ತಪ್ಪಿಸಲು ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಜಾರಿಗೆ ತಂದಿತ್ತು. ಇದರಿಂದ ಹಲವು ಅಭಿವೃದ್ದಿ ಕಾರ್ಯಗಳು ನಡೆದಿತ್ತು ಬಡವರಿಗೆ ಅನುಕೂಲವಾಗಿತ್ತು. ಆದರೆ ಈಗ ಏಕಾಏಕಿಯಾಗಿ ಕೇಂದ್ರ ಸರಕಾರವು ಉದ್ದೇಶಪೂರ್ವಕವಾಗಿ ನರೇಗಾ ಯೋಜನೆಯನ್ನು ನಿಲ್ಲಿಸಿದೆ. ಜಿ ರಾಮ್ ಜಿ ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿರುವುದು ಮಹಾತ್ಮ ಗಾಂಧೀಜಿಯವರಿಗೆ ತೋರಿರುವ ಅಗೌರವವಷ್ಟೇ ಅಲ್ಲ, ದೇಶದ ಕೊಟ್ಯಾಂತರ ಬಡ ಗ್ರಾಮೀಣ ಜನರ ಹಿತಾಸಕ್ತಿಗೆ ಧಕ್ಕೆ ತರುವಂತಹ ಕಾರ್ಯವಾಗಿದೆ. ಗ್ರಾಮ ಪಂಚಾಯಿತಿ ಹಂತದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ನರೇಗಾ ಸಹಕಾರಿಯಾಗಿತ್ತು. ಉದ್ಯೋಗವಿಲ್ಲದ ಬಡಜನರು ಗುಳೇ ಹೋಗುವುದನ್ನು ತಪ್ಪಿಸಿದ ಯೋಜನೆಗೆ ಕೇಂದ್ರ ಬಿಜೆಪಿ ಇತಿಶ್ರೀ ಹಾಡಿರುವುದು ದೇಶದ ಜನರ ದೌರ್ಭಾಗ್ಯವಾಗಿದೆ ಎಂದು ಅವರು ಆಪಾದಿಸಿದರು.

15ನೇ ಹಣಕಾಸು ಯೋಜನೆ ಅನುದಾನವನ್ನು ಸಹಾ ಕೇಂದ್ರ ಕಾಲಮಿತಿಯಲ್ಲಿ ಬಿಡುಗಡೆ ಮಾಡುತ್ತಿಲ್ಲ. ಜಲಜೀವನ್ ಮಿಶನ್ ಯೋಜನೆ ಹಳ್ಳ ಹಿಡಿದಿದೆ. ಸ್ವಚ್ಛ ಭಾರತ ಯೋಜನೆಯಡಿ ಪ್ರಚಾರ ಪಡೆಯುತ್ತಿರುವ ಕೇಂದ್ರ ಸ್ಥಳೀಯ ಸಂಸ್ಥೆಗಳಿಗೆ ಬಿಡಿಗಾಸಿನ ಅನುದಾನ ನೀಡಿಲ್ಲ. ಬಿಜೆಪಿ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ನಿರಂತರ ಪ್ರತಿಭಟನೆ ನಡೆಸಲಾಗುವುದು. ಬಡ ಹಾಗೂ ಮಧ್ಯಮವರ್ಗದ ಜನರ ಜೀವನಕ್ಕೆ ಧಕ್ಕೆ ತರುವ ಯೋಜನೆಗಳನ್ನು ಪಕ್ಷ ಖಂಡಿಸುತ್ತದೆ ಎಂದರು.
ಬಳಿಕ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನರೇಂದ್ರಕುಮಾರ್‌ರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಅಂತ್ಯಗೊಳಿಸಿದರು.
ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಬಿ.ಚಿದಂಬರ, ಪಕ್ಷದ ಪ್ರಮುಖರಾದ, ಸದಾಶಿವ ಶ್ರೇಷ್ಠಿ, ಬಿ.ಆರ್.ಪ್ರಭಾಕರ, ಎಂ.ಪಿ.ಸುರೇಶ, ಬೃಂದಾವನ ಪ್ರವೀಣ್, ಜಯನಗರ ಗುರು, ಸಿದ್ದಪ್ಪ, ದೀಪಿಕಾ, ಇಂದ್ರೇಶ್, ನಾಸೀರ್, ಈಶ್ವರಪ್ಪಗೌಡ, ಸಾಕಮ್ಮ ಮನೋಹರ, ಜಯಮ್ಮ, ಸುರೇಶ್, ಮಂಜುನಾಥ್ ಶ್ರೇಷ್ಠಿ, ಬೇಹಳ್ಳಿ ಗಣೇಶ್, ಉಬೇದುಲ್ಲ, ಮತ್ತಿತರರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





