ರಿಪ್ಪನ್‌ಪೇಟೆ ; ಸಾಂಸ್ಕೃತಿಕವಾಗಿ ಶ್ರೀಮಂತವಾದ ರಿಪ್ಪನ್‌ಪೇಟೆಯಲ್ಲಿ ಬಂಟರ ಯಾನೆ ನಾಡವರ ಸಂಘದ 2ನೇ ವರ್ಷದ ವಾರ್ಷಿಕೋತ್ಸವ ಭಾನುವಾರ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಗರದ ಬಂಟರ ಸಂಘದ ಅಧ್ಯಕ್ಷ ಸುಧೀರ್ ಶೆಟ್ಟಿ (ಸಾಗರ) ಮಾತನಾಡಿ, “ಇಂತಹ ಮಹತ್ವದ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ನನಗೆ ಹೆಮ್ಮೆಯ ಕ್ಷಣ. ಬಂಟರ–ನಾಡವರ ಸಮುದಾಯವು ಶ್ರಮ, ಶಿಸ್ತು, ಸಂಸ್ಕಾರ ಮತ್ತು ಸೇವೆಯನ್ನು ಜೀವನ ಮೌಲ್ಯಗಳಾಗಿ ಅಳವಡಿಸಿಕೊಂಡು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ” ಎಂದರು.
ಕೇವಲ ಎರಡು ವರ್ಷಗಳಲ್ಲಿ ರಿಪ್ಪನ್‌ಪೇಟೆ ಬಂಟರ ಯಾನೆ ನಾಡವರ ಸಂಘ ಸಾಧಿಸಿರುವ ಪ್ರಗತಿ ಶ್ಲಾಘನೀಯವಾಗಿದೆ ಎಂದು ಪ್ರಶಂಸಿಸಿದ ಅವರು, ಸಂಘಟನೆ, ಸಹಕಾರ ಮತ್ತು ಸೇವಾ ಮನೋಭಾವದ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಈ ಸಂಘ ಯಶಸ್ವಿಯಾಗಿ ಮಾಡುತ್ತಿದೆ ಎಂದರು. ಯುವಕರು ಶಿಕ್ಷಣ, ಉದ್ಯೋಗ ಹಾಗೂ ತಂತ್ರಜ್ಞಾನದಲ್ಲಿ ಮುನ್ನಡೆಯುವ ಜೊತೆಗೆ ತಮ್ಮ ಮೂಲ ಸಂಸ್ಕೃತಿಯನ್ನು ಮರೆತಬಾರದು ಎಂದು ಸಲಹೆ ನೀಡಿದರು.

“ಸಮಾಜದಲ್ಲಿ ವೇಗವಾಗಿ ಬದಲಾವಣೆ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಒಗ್ಗಟ್ಟೇ ನಮ್ಮ ಬಲ. ಸಂಘಟನೆ ಇಲ್ಲದೆ ಶಕ್ತಿ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು” ಎಂದು ಹೇಳಿದರು.
ಮಹಿಳೆಯರು ಕುಟುಂಬದ ಬೆನ್ನೆಲುಬಾಗಿರುವಂತೆ, ಸಂಘದ ಚಟುವಟಿಕೆಗಳಲ್ಲಿಯೂ ಮುನ್ನಡೆದರೆ ಸಮಾಜದ ಅಭಿವೃದ್ಧಿ ಇನ್ನಷ್ಟು ವೇಗವಾಗುತ್ತದೆ ಎಂದರು.
ಮಂಗಳೂರಿನ ಆಶಾ–ಪ್ರಕಾಶ್ ಶೆಟ್ಟಿ ದಂಪತಿಗಳಂತೆ ಸಮಾಜ ಸೇವೆಯ ಮೂಲಕ ಜನಮಾನಸದಲ್ಲಿ ಗುರುತಿಸಿಕೊಂಡು, ರಿಪ್ಪನ್‌ಪೇಟೆ ಬಂಟರ ಯಾನೆ ನಾಡವರ ಸಂಘ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ್ ಕುಮಾರ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಧೀರ್ ಶೆಟ್ಟಿ (ಸಾಗರ), ಸದಾನಂದ ಶೆಟ್ಟಿ, ಪ್ರಕಾಶ್ ಶೆಟ್ಟಿ (ಸಾಗರ), ಹೊಸನಗರ ತಾಲ್ಲೂಕು ಅಧ್ಯಕ್ಷ ಸದಾನಂದ ಶೆಟ್ಟಿ, ನಾಗರಾಜ್ ಶೆಟ್ಟಿ, ಬಟ್ಟೆ ಮಲ್ಲಪ್ಪ, ಚಂದ್ರಶೇಖರ್ ಶೆಟ್ಟಿ (ಹೊಸನಗರ) ಉಪಸ್ಥಿತರಿದ್ದರು.

ಉಪಾಧ್ಯಕ್ಷ ವಿನಯ್ ಶೆಟ್ಟಿ ವರದಿ ವಾಚಿಸಿದರು. ಕಾರ್ಯದರ್ಶಿ ಪವನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರುಶ್ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು. ಆರ್.ಇ. ಭಾಸ್ಕರ್ ಶೆಟ್ಟಿ (ರಿಪ್ಪನ್‌ಪೇಟೆ) ಸ್ವಾಗತಿಸಿದರು. ವನಜಾ ಶೆಟ್ಟಿ ನಿರೂಪಣೆ ನಡೆಸಿದರು. ಕೃತಿ ಶೆಟ್ಟಿ ವಂದಿಸಿದರು.
ಬಂಟರ ಯಾನೆ ನಾಡವರ ಸಂಘದ ಎರಡನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸತ್ಯನಾರಾಯಣ ಪೂಜೆ ಏರ್ಪಡಿಸಲಾಗಿತ್ತು. ರಿಪ್ಪನ್‌ಪೇಟೆ ಸೇರಿದಂತೆ ಸುತ್ತಮುತ್ತಲಿನ ಬಂಟರ ಯಾನೆ ನಾಡವರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





