ಹೊಸನಗರ ; ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತ ದೇಶದ ಪ್ರಜೆಗಳಾದ ನಮಗೆ ಮತದಾನ ಮಾಡುವ ಅತಿ ಮುಖ್ಯ ಹಕ್ಕು ಸಿಕಿದ್ದು, ತಮ್ಮಿಂದ ಮತದಾನ ಮಾಡುವ ಮೂಲಭೂತ ಹಕ್ಕನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ ಎಂದು ಹೊಸನಗರ ತಹಸೀಲ್ದಾರ್ ಭರತ್ರಾಜ್ ಹೇಳಿದರು.
ತಾಲ್ಲೂಕು ಆಡಳಿತ, ಸರ್ಕಾರಿ ಪದವಿಪೂರ್ವ ಕಾಲೇಜು, ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜ್ ಹಾಗೂ ವಿವಿಧ ಸರ್ಕಾರಿ ಕಛೇರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು 2026ರ ರಾಷ್ಟ್ರೀಯ ಮತದಾನ ದಿನಾಚರಣೆಯನ್ನು ನನ್ನ ಭಾರತ ನನ್ನ ಮತ ಎಂಬ ಧ್ಯೇಯದೊಂದಿಗೆ ಹೊಸನಗರದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದರಿಂದ ಈ ದೇಶದ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಹಕ್ಕನ್ನು ನೀವು ಹೊಂದಿದ್ದೀರಿ. 18 ವರ್ಷ ಮೇಲ್ಪಟ್ಟವರು ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನದ ಹಕ್ಕನ್ನು ಹೊಂದಿದ್ದು ಪ್ರತಿಯೊಬ್ಬರು ಮತದಾನದ ಗುರುತಿನ ಚೀಟಿ ಪಡೆದು ಒಳ್ಳೆಯ ಸರ್ಕಾರ ಮತ್ತು ಪ್ರಮುಖ ಯೋಜನೆಗಳನ್ನು ರೂಪಿಸಲು ನೀವು ಉತ್ತಮ ನಾಯಕನನ್ನು ಆಯ್ಕೆ ಮಾಡಿದಾಗ ಮಾತ್ರ ಸಾಧ್ಯ. ನೀವು ನೀಡುವ ಮತದಾನದಿಂದ ಈ ದೇಶ ಸುಭದ್ರವಾಗಿರಲು ಸಾಧ್ಯ. ಆದ್ದರಿಂದ ಕಡ್ಡಾಯವಾಗಿ ಮತದಾನದ ಹಕ್ಕನ್ನು ಪಡೆದವರು ಮತದಾನ ಮಾಡಿ ಈ ದೇಶ ಸುಭದ್ರವಾಗಿರಲು ಸಹಕರಿಸಿ ಎಂದರು.
ರಾಷ್ಟ್ರೀಯ ಮತದಾನದ ದಿನಾಚರಣೆಯ ಅಂಗವಾಗಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜ್ ಪ್ರಾಂಶುಪಾಲ ಶ್ರೀನಿವಾಸ್ ನಾಯ್ಕ್, ಉಪನ್ಯಾಸಕ ಸ್ವಾಮಿರಾವ್ ಹಾಗೂ ಕಾಲೇಜಿನ ಎಲ್ಲ ಉಪನ್ಯಾಸಕರು, ಕೊಡಚಾದಿ ಪ್ರಥಮ ದರ್ಜೆ ಕಾಲೇಜ್ ಉಪನ್ಯಾಸಕ ಅಂಜನ್ಕುಮಾರ್, ಗ್ರಂಥಾಪಾಲಕ ಡಾ|| ಲೋಕೇಶ್ ಉಪನ್ಯಾಸಕ ವಿದ್ಯಾರ್ಥಿಗಳ ವೃಂದ, ಚುನಾವಣೆ ಶಿರಾಸ್ಥೆದಾರ್ ಬಿ.ಜಿ ಸತೀಶ್, ಶಿರಾಸ್ಥೆದಾರ್ ಚಿರಾಗ್, ಗ್ರಾಮ ಆಡಳಿತಾಧಿಕಾರಿ ಲೋಹಿತ್, ಸಿದ್ಧಪ್ಪ, ಮಹಮದ್ ರೈಸ್, ದಾಮೋದರ್ ಶೆಣೈ, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಎಲ್ಲ ಕಾಲೇಜ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





