Chikkamagaluru

ಚಿಕ್ಕಮಗಳೂರು ; ಕೋಟೆಹೊಂಡ ರವೀಂದ್ರ ಜಿಲ್ಲಾಡಳಿತದೆದುರು ಶರಣಾಗತಿ

ಚಿಕ್ಕಮಗಳೂರು ; ನಕ್ಸಲ್‌ ಚಳವಳಿಯಲ್ಲಿ ಸಕ್ರಿಯವಾಗಿದ್ದ ಕೋಟೆಹೊಂಡ ರವೀಂದ್ರ (44) ಇಂದು ಜಿಲ್ಲಾಡಳಿತ ಎದುರು ಶರಣಾದರು.

WhatsApp Group Join Now
Telegram Group Join Now
Instagram Group Join Now

ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪದ ಹುಲಗಾರುಬೈಲಿನ ಕೋಟೆಹೊಂಡ ರವೀಂದ್ರ ಕಾಡಿನಲ್ಲೇ ಉಳಿದಿದ್ದರು. ಶೃಂಗೇರಿಯಿಂದ ಬಂದ ಅವರು ಮೊದಲಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಅವರ ಬಳಿ ಶರಣಾದರು. ಬಳಿಕ ಅವರನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ಬಳಿಗೆ ಕರೆತಂದು ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೋಟೆಹೊಂಡ ರವೀಂದ್ರ, ನಮ್ಮೂರಿನಲ್ಲಿ ರಸ್ತೆ ಅಭಿವೃದ್ಧಿಯಾಗಬೇಕು, ಭೂಮಿ ಇಲ್ಲದವರಿಗೆ ಜಮೀನಿನ ಹಕ್ಕುಪತ್ರ ನೀಡಬೇಕು. ಕಾಡಿನ ಉತ್ಪನ್ನಗಳನ್ನು ತರಲು ಅಡ್ಡಿ ಇರಬಾರದು ಎಂಬ ಬೇಡಿಕೆಗಳನ್ನು ಸರ್ಕಾರಕ್ಕೆ ನೀಡಿದ್ದೇನೆ. ಅಲ್ಲದೇ ನಾನು ಯಾರದೇ ಬಲವಂತಕ್ಕೆ ಶರಣಾಗಿಲ್ಲ, ಸ್ವಇಚ್ಛೆಯಿಂದ ಶರಣಾಗಿದ್ದೇನೆ ಎಂದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಶರಣಾಗಿರುವ ರವೀಂದ್ರ ಅವರು ‘ಎ’ ಕೆಟಗರಿಯ ನಕ್ಸಲ್ ಆಗಿದ್ದಾರೆ. ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಅವರಿಗೆ 7.50 ಲಕ್ಷ ರೂ. ಸರ್ಕಾರದಿಂದ ಬರಲಿದೆ. ಸರ್ಕಾರದ ಅನುಮತಿ ಪಡೆದು ಮೊದಲ ಹಂತದಲ್ಲಿ 3 ಲಕ್ಷ ರೂ. ನೀಡಲಾಗುವುದು. ಬಾಕಿ ಮೊತ್ತವನ್ನು ಹಂತ-ಹಂತವಾಗಿ ಬಿಡುಗಡೆ ಮಾಡಲಾಗುವುದು. ಅವರು ಬಯಸಿದರೆ ಕೌಶಲ ತರಬೇತಿ ನೀಡಲಾಗುವುದು. ಇವರ ಮೇಲೆ ದಾಖಲಾಗಿರುವ ಮೊಕದ್ದಮೆಗಳ ಸಂಬಂಧ ಕಾನೂನು ಪ್ರಕ್ರಿಯೆ ನಡೆಯಲಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಮಾತನಾಡಿ, ರವೀಂದ್ರ ಅವರು ಶರಣಾಗಿದ್ದು, ಅವರ ವಿರುದ್ಧ ಒಟ್ಟು 27 ಪ್ರಕರಣ ದಾಖಲಾಗಿವೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು. ಕರ್ನಾಟಕ ಈಗ ನಕ್ಸಲ್ ಮುಕ್ತವಾಗಿದೆ ಎಂದು ಹೇಳಿದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ, ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯ ಕೆ.ಪಿ.ಶ್ರೀಪಾಲ್, ಶಾಂತಿಗಾಗಿ ನಾಗರಿಕರ ವೇದಿಕೆಯ ಕೆ.ಎಲ್.ಅಶೋಕ್, ವಿ.ಎ. ಶ್ರೀಧರ್, ನಗರಗೆರೆ ರಮೇಶ್, ಗೌಸ್ ಮೊಹಿಯುದ್ದೀನ್ ಇದ್ದರು.

ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ, ಕೆ.ವಸಂತ(ತಮಿಳುನಾಡು), ಟಿ.ಎನ್.ಜಿಷಾ(ಕೇರಳ) ಒಳಗೊಂಡ ತಂಡ ಜ.8ರಂದು ಮುಖ್ಯವಾಹಿನಿಗೆ ಬಂದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಎಲ್ಲರನ್ನು ಸ್ವಾಗತಿಸಲಾಗಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ತಂಡದಿಂದ ಬೇರ್ಪಟ್ಟಿದ್ದ ಕೋಟೆಹೊಂಡ ರವೀಂದ್ರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಅವರನ್ನು ಸಂಪರ್ಕಿಸುವ ಪ್ರಯತ್ನವನ್ನು ಶಾಂತಿಗಾಗಿ ನಾಗರಿಕ ವೇದಿಕೆ ಮತ್ತು ನಕ್ಸಲ್ ಶರಣಾಗತಿ ಸಮಿತಿ ಮಾಡಿತ್ತು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]

error: Content is protected !!