RIPPONPETE ; ನವೆಂಬರ್ ತಿಂಗಳ ಅನ್ನ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರದಾರರಿಗೆ ಇಲ್ಲಿನ ಮೂರು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಇಲ್ಲದೆ ಅಲೆದಾಡುವಂತಾಗಿದೆ ಎಂದು ಫಲಾನುಭವಿಗಳಾದ ನಿರ್ಮಲ, ರಂಜಿನಿ, ಇಂದಿರಾ, ಪ್ರತಾಪ, ಈಶ್ವರಶೆಟ್ಟಿ, ರಾಘವೇಂದ, ಜಯಮ್ಮ, ಶಿವಪ್ಪ ಕೊಳವಳ್ಳಿ, ಮೋಹನ ಆರೋಪಿಸಿದರು.
ಕೊರೊನಾ ಸಂದರ್ಭದಲ್ಲಿ ಕೇಂದ್ರ-ರಾಜ್ಯ ಸರ್ಕಾರ ಪಡಿತರದಾರರು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡ್ ನೀಡಿದರೆ ಪಡಿತರ ವಿತರಣೆ ಮಾಡಬೇಕು ಎಂಬ ನಿಯಮವನ್ನು ಜಾರಿಗೊಳಿಸಲಾಗಿದ್ದರೂ ಇಲ್ಲಿಯವರೆಗೆ ಸರ್ಕಾರದ ನಿಯಮದಂತೆ ನ್ಯಾಯಬೆಲೆ ಅಂಗಡಿಯವರು ಹೆಚ್ಚುವರಿ ಅಕ್ಕಿಯನ್ನು ಫಲಾನುಭವಿಗಳಿಗೆ ವಿತರಿಸುತ್ತಿದ್ದರು. ಆದರೆ ಈ ಬಾರಿ ಇಲ್ಲಿ ಮೂರು ನ್ಯಾಯಬೆಲೆ ಅಂಗಡಿಗಳಿದ್ದರು ಕೂಡಾ ಅಕ್ಕಿ ಇಲ್ಲದೆ ಫಲಾನುಭವಿಗಳು ಪರದಾಡುವಂತಾಗಿದೆ ಎಂದು ಮಾಧ್ಯಮವದರಲ್ಲಿ ತಮ್ಮ ನೋವಿನ ಕಥೆಯನ್ನು ಹಂಚಿಕೊಂಡರು.
ಬರುವೆ ವಿವಿಧೋದ್ದೇಶ ಮಹಿಳಾ ಸಂಘದಲ್ಲಿ ಹೋದರೆ ಅಕ್ಕಿ ಇಲ್ಲ ಎನ್ನುತ್ತಾರೆ. ಅಲ್ಲಿಂದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಹೋದರೆ ಅಲ್ಲಿಯೂ ಅದೇ ಕಥೆ, ಇನ್ನೂ ಜಂಬಳ್ಳಿ ನ್ಯಾಯಬೆಲೆ ಅಂಗಡಿಗೆ ಹೋಗಿ ಕೇಳಿದರೆ ನಮ್ಮ ಪಡಿತರ ಕಾರ್ಡ್‌ದಾರಿಗೆ ಕೊಡಲು ಅಕ್ಕಿ ಇಲ್ಲ ಎಲ್ಲಿಂದ ತಂದು ಕೊಡುವುದು ಎಂದು ಅಂಗಡಿಯವರು ಗೊಣಗುತ್ತಿದ್ದರು.
ಆಹಾರ ಇಲಾಖೆಯ ಅಧಿಕಾರಿಗಳನ್ನು ದೂವಾಣಿ ಮೂಲಕ ಸಂಪರ್ಕಿಸಿದರೆ ಸರಿಯಾದ ಮಾಹಿತಿಯನ್ನು ನೀಡದೆ ಜಾಣತನದ ಉತ್ತರ ನೀಡಿ ಹೆಚ್ಚುವರಿ ಅಕ್ಕಿ ನೀಡದಂತೆ ಜಿಲ್ಲಾ ಆಹಾರ ಇಲಾಖೆಯ ಉಪನಿರ್ದೇಶಕರು ಅದೇಶವಿದೆ ಎಂದು ಹೇಳಿ ಜಾರಿಕೊಳ್ಳುತ್ತಾರೆ. ಇನ್ನಾದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಪಡಿತರದಾರ ಸಮಸ್ಯೆಗೆ ಪರಿಹಾರ ಕಲ್ಪಿಸುವರೇ ಕಾದುನೋಡಬೇಕಾಗಿದೆ.