RIPPONPETE ; ಪಟ್ಟಣದ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯನ್ನು ಗ್ರಾಮಾಡಳಿತವು 15ನೇ ಹಣಕಾಸು ಅನುದಾನದಲ್ಲಿ ಅಭಿವೃದ್ಧಿಪಡಿಸಿದ ಕಾಮಗಾರಿಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕರಾದ ನಂದಿನಿ ಆರ್.ಬಿ.ರವರು ಅಭಿಯಂತರರಿಗೆ ಗುರುವಾರ ಸೂಚಿಸಿದರು.
ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2023-24ನೇ ಸಾಲಿನ ಗ್ರಾಮ ಪಂಚಾಯತಿನ ವಾರ್ಷಿಕ ಜಮಾಬಂದಿ ಕಾರ್ಯಕ್ರಮದಲ್ಲಿ ಚಿಕ್ಕಬೀರನ ಕೆರೆಯನ್ನು ಕಳೆದೊಂದು ವರ್ಷದ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನಮ್ಮೂರು-ನಮ್ಮಕೆರೆ ಯೋಜನೆ ಮತ್ತು ಗ್ರಾಮಸ್ಥರ ನೆರವಿನಿಂದ 13 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೂಳು ತೆಗೆದು ದಂಡೆ ನಿರ್ಮಿಸುವ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗಿತ್ತು. ಗ್ರಾಮಾಡಳಿತವು ಇದೇ ಕೆರೆ ಕಾಮಗಾರಿಗೆಂದು 7 ಲಕ್ಷ ರೂಪಾಯಿ ಅಂದಾಜು ಮೊತ್ತವನ್ನು ಇರಿಸಿಕೊಂಡು ಕಾಮಗಾರಿ ಮಾಡಿರುವುದಾಗಿ 4.98 ಲಕ್ಷ ರೂ. ವೆಚ್ಚ ಮಾಡಿರುವುದಾಗಿ ಜಮಾಬಂದಿಯಲ್ಲಿ ಪ್ರಸ್ತಾಪಿಸಿದಾಗ ಆಕ್ಷೇಪವೆತ್ತಿದ ಗ್ರಾಮಸ್ಥರು ಕಾಮಗಾರಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಯೋಜನಾ ನಿರ್ದೇಶಕರು ಸಭೆಯಲ್ಲಿದ್ದ ಜಿ.ಪಂ. ಅಭಿಯಂತರ ಓಂಕಾರಪ್ಪರವರಿಗೆ ಸಮಗ್ರ ವರದಿ ನೀಡಲು ಸೂಚನೆ ನೀಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಾದ ವಿವಿಧ ಕಾಮಗಾರಿಗಳ ಬಗ್ಗೆ ಗ್ರಾಮಾಡಳಿತವು ಲೆಕ್ಕಪತ್ರವನ್ನು ಮಂಡಿಸಿತು. ನಂತರ ಚಿಪ್ಪಿಗರಕೆರೆಗೆ ಭೇಟಿನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಗಣಪತಿ, ಮಲ್ಲಿಕಾರ್ಜುನ, ಮಂಜುಳಾ ಪಿಡಿಓ ನಾಗರಾಜ್, ಇನ್ನಿತರರಿದ್ದರು.
ಗಾಯನ ಸ್ಪರ್ಧೆಗೆ ಆಹ್ವಾನ
RIPPONPETE ; ಮಲೆನಾಡ ಗಾನ ಸುಧೆ ಸೀಜನ್ -1 ಇವರು ಫೆಬ್ರವರಿ 2 ರಂದು ಭಾನುವಾರ ರಾಜ್ಯಮಟ್ಟದ ಆಹ್ವಾನಿತರ ಪ್ರತಿಭಾವಂತ ಸಂಗೀತ ಕಲಾವಿದರಿಗಾಗಿ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಮಲೆನಾಡ ಗಾನ ಸುಧೆ ಸಂಸ್ಥಾಪಕಿ ಸುಧಾಗೌಡ ಪ್ರಕಟಣೆಯಲ್ಲಿ ತಿಳಿಸಿದರು.
ಪ್ರಥಮ ಬಹುಮಾನ 5 ಸಾವಿರ ರೂ, ದ್ವಿತೀಯ ಬಹುಮಾನ 3 ಸಾವಿರ ರೂ ಹಾಗೂ ತೃತೀಯ ಬಹುಮಾನ 2 ಸಾವಿರ ರೂ ಹಾಗೂ ಪಾರಿತೋಷಕವನ್ನು ನೀಡಲಾಗುವುದು.
ನಿಯಮಗಳು ಪ್ರತಿ ಸ್ಪರ್ಧಿಗೆ ಮೂರು ಸುತ್ತುಗಳಿರುತ್ತದೆ. ರಾಜ್ಯದ ಎಲ್ಲಾ ಆಸಕ್ತ ಸಂಗೀತ ಕಲಾವಿದರು ಭಾಗವಹಿಸಬಹುದು. ಗಾಯಕರು ತಮ್ಮದೇ ಅದ ಹಾಡನ್ನು ಹಾಡುವ ಅವಕಾಶವಿದೆ.
ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ. ನೀವು ಹಾಡಿರುವ ಹಾಡನ್ನು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಕೆಳಕಂಡ ನಂಬರಿಗೆ ಕಳುಹಿಸತಕ್ಕದ್ದು.
ಸುಧಾಗೌಡ 8792437920, ಅನಿತಾ 7349528506, ಸುಮಗಧ 9741637890 ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದೆಂದು ತಿಳಿಸಿದರು.