ನಾಯಕತ್ವ ಗುಣ ಬೆಳೆಸಿಕೊಳ್ಳಲು ಎನ್ಎಸ್ಎಸ್ ಸಹಕಾರಿ

Written by malnadtimes.com

Published on:

SHIKARIPURA ; ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ ಶಿಸ್ತು, ಭಾತೃತ್ವ, ಸಂಯಮ, ಸಮಯ ಪ್ರಜ್ಞೆ ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳಲು ಎನ್ಎಸ್ಎಸ್ ಸಹಕಾರಿಯಾಗಿದೆ ಎಂದು ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು‌.

WhatsApp Group Join Now
Telegram Group Join Now
Instagram Group Join Now

ತಾಲೂಕಿನ ಈಸೂರು ಗ್ರಾಮದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ರಂಗಮಂದಿರದಲ್ಲಿ ಶ್ರೀ ಸಿಗಂದೂರೇಶ್ವರಿ ಎಜುಕೇಶನ್ ಟ್ರಸ್ಟ್ ನ ಉಳ್ಳೂರಿನ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಹಮ್ಮಿಕೊಂಡ ಪೌರತ್ವ ತರಬೇತಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಎನ್ಎಸ್ಎಸ್ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಈಸೂರಿನ ಜನ ಐಕ್ಯತೆಯಿಂದ ಮುನ್ನಡೆದಾಗ ಗ್ರಾಮದ ಅಭಿವೃದ್ಧಿ ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈಸೂರು ಗ್ರಾಮವು ರಾಷ್ಟ್ರದಲ್ಲಿಯೇ ಮಾದರಿ ಗ್ರಾಮವನ್ನಾಗಿಸುವ ನಿಟ್ಟಿನಲ್ಲಿ ಗಮನ ನೀಡಬೇಕು ಎಂದರು.

ರೈತ ಹೋರಾಟ ಮತ್ತು ರೈತ ಚಳುವಳಿ ಕುರಿತು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಜಿಲ್ಲೆಯು ಹಲವು ಹೋರಾಟಗಳಿಗೆ ಮುನ್ನುಡಿ ಬರೆದಿದೆ. ರೈತ ಸಮುದಾಯ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ. ರೈತರು ಅತಿವೃಷ್ಟಿ ಅನಾವೃಷ್ಟಿಯಿಂದ ಬಳಲುತ್ತಿದ್ದಾರೆ. ಬೆಳೆಗಳಿಗೆ ಸಮರ್ಪಕವಾದ ಬೆಂಬಲ ಬೆಲೆ ದೊರೆಯದೆ ರೈತರು ನಲುಗಿ ಹೋಗಿದ್ದಾರೆ. ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಹಿತಕಾಯಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸೊರಬ ತಾಲೂಕು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಹೋರಾಟಗಾರ ಜೆ.ಎಸ್. ಚಿದಾನಂದಗೌಡ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ದೇಶದಲ್ಲಿ ಹಚ್ಚುವ ಕಾರ್ಯವನ್ನು ಈಸೂರು ಸ್ವಾತಂತ್ರ್ಯ ಹೋರಾಟಗಾರರು ಮಾಡಿ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದಾರೆ. ವಿನಃ ಯಾವುದೇ ಸರ್ಕಾರಗಳು ಈ ಬಗ್ಗೆ ಹೆಚ್ಚಿನ ಗಮನ ನೀಡಿಲ್ಲ. ದೆಹಲಿಯ ಸಂಸತ್ ಭವನದ ಮುಂಭಾಗ ಈಸೂರಿನ ಹೋರಾಟಗಾರರ ಪುತ್ಥಳಿ ನಿರ್ಮಾಣ ಮಾಡಬೇಕು. ಮೊದಲು ತ್ರಿವರ್ಣ ಧ್ವಜ ಹಾರಿದ ಗ್ರಾಮದ ವೀರಭದ್ರ ದೇವಸ್ಥಾನದ ಮುಂಭಾಗದಲ್ಲಿ ದೇಶದಲ್ಲೇ ಎತ್ತರದ ಧ್ವಜ ಸ್ಥಂಭ ನಿರ್ಮಾಣವಾಗಬೇಕು. ದೇಶದ ಮೊದಲ ಸ್ವಾತಂತ್ರ್ಯ ಗ್ರಾಮಕ್ಕೆ ಈವರೆಗೂ ಯಾವುದೇ ಪ್ರಧಾನಿ ಭೇಟಿ ನೀಡಿಲ್ಲ, ಆದ್ದರಿಂದ ನರೇಂದ್ರ ಮೋದಿಯವರು ಭೇಟಿ ನೀಡಬೇಕು. ಹುತಾತ್ಮ ಹೋರಾಟಗಾರರಿಗೆ ನಮನ ಸಲ್ಲಿಸಬೇಕು. ಈ ಬಗ್ಗೆ ಸರ್ಕಾರಗಳ ಗಮನ ಸೆಳೆಯುವ ಯತ್ನ ನಡೆಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ. ವಿಜಯಕುಮಾರ್ ಮಾತನಾಡಿ, ಈಸೂರು ಗ್ರಾಮದಲ್ಲಿ ಎನ್ಎಸ್ಎಸ್ ಶಿಬಿರ ಆಯೋಜನೆ ಮಾಡಿದ ಸಂದರ್ಭದಿಂದಲೂ ಗ್ರಾಮಸ್ಥರು ಉತ್ತಮವಾದ ಸಹಕಾರ ನೀಡುತ್ತಿದ್ದಾರೆ. ಕಿತ್ತೂರಿನ ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್ ಮಾದರಿಯಲ್ಲಿ ಈಸೂರಿನಲ್ಲಿ ಹೋರಾಟಗಾರರ ಪಾರ್ಕ್ ನಿರ್ಮಾಣ ಮಾಡಬೇಕು. ಈಸೂರು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಶಿಕಾರಿಪುರದ ಸಾಂಸ್ಕೃತಿಕ ಭವನಕ್ಕೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ರಂಗಮಂದಿರ ಎಂದು ಹೆಸರಿಡುವ ಜೊತೆಗೆ ಅವರ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣವಾಗಬೇಕು. ತಾಲೂಕು ಕಚೇರಿ ಮುಂಭಾಗದಲ್ಲಿ ಈಸೂರಿನ ಹುಲಿ ಖ್ಯಾತಿಯ ಸಾಹುಕಾರ್ ಬಸವಣ್ಯಪ್ಪ ಸ್ಮಾರಕ ಭವನ ಪಾಳುಬಿದ್ದಿರುವುದು ದುರ್ಧೈವದ ಸಂಗತಿಯಾಗಿದೆ. ಸ್ಮಾರಕ ಭವನ ಅಭಿವೃದ್ಧಿಯ ಜೊತೆಗೆ ಬಸವಣ್ಯಪ್ಪ ಅವರ ಅಶ್ವಾರೂಢ ಪ್ರತಿಮೆ ಸ್ಥಾಪಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು, ಸಂಸದರು ಹಾಗೂ ಸರ್ಕಾರಗಳು ಗಮನ ನೀಡಬೇಕು ಎಂದು ಒತ್ತಾಯಿಸಿದರು.

ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ಎ.ಕೆ. ಕಾಳೇಶಪ್ಪ ಅವರು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಬದುಕು ಮತ್ತು ಬರಹದ ಕುರಿತು ಉಪನ್ಯಾಸ ನೀಡಿದರು.

ಶಿವ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ. ಗಂಗಾಧರಪ್ಪ, ಜಾನಪದ ಕಲಾವಿದ ಬಿ. ಶಿವಪ್ಪ, ಗ್ರಾಪಂ ಸದಸ್ಯ ಮಂಜಪ್ಪ, ಮಾಜಿ ಸದಸ್ಯ ಡಿ. ನಾಗರಾಜಪ್ಪ ಬಡಗಿ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಕೆ. ಪುಷ್ಪಾ ಸೇರಿದಂತೆ ಗ್ರಾಮಸ್ಥರು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

ಪ್ರಶಿಕ್ಷಣಾರ್ಥಿಗಳಾದ ಅಶ್ವಿನಿ ಪ್ರಾರ್ಥಿಸಿ, ಎಚ್.ಎಸ್. ಮಂಜುನಾಥ್ ಸ್ವಾಗತಿಸಿ, ಚಲುವರಾಜ್ ವಂದಿಸಿ, ಪ್ರಜ್ವಲ್ ನಿರೂಪಿಸಿದರು.

Leave a Comment