Soraba ; ಪಟ್ಟಣ ಸೇರಿ ಸುತ್ತಲಿನ ಪ್ರದೇಶದಲ್ಲಿ ಮಲಯಾಳಿ ಭಾಷಿಕರು ತಿರು ಓಣಂ (Onam) ಹಬ್ಬವನ್ನು ಭಾನುವಾರ ಸಂಭ್ರಮದಿಂದ ಆಚರಿಸಿದರು.
ಮಳೆಗಾಲ ಮುಗಿಯುವ ಹೊತ್ತಿನಲ್ಲಿ ಆರಂಭವಾಗುವ ಓಣಂ ಸಂದರ್ಭದಲ್ಲಿ ಕೃಷಿಕರ ಮೊದಲ ಬೆಳೆ ಕೊಯ್ಲಿಗೆ ಸಿದ್ಧವಾಗುತ್ತಿದೆ. ಕೃಷಿಗೆ ಸಂಬಂಧಿಸಿದಂತೆ ಮೊದಲ ಬೆಳೆಯ ಸಂಭ್ರಮದ ಹಬ್ಬವೂ ಆಗಿದೆ.
ಮಹಾದಾನಿ ಮಹಾಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಸಿಂಹಮಾಸದ ಶ್ರಾವಣ ನಕ್ಷತ್ರದಂದು ಭೂಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ ಕೇರಳಿಗರಲ್ಲಿ ಇದೆ. ಈ ಕಾರಣದಿಂದಲೂ ಹಬ್ಬ ಪ್ರಾಮುಖ್ಯತೆ ಪಡೆದಿದೆ.
ಹೊಸ ಉಡುಗೆ, ತೊಡುಗೆ ತೊಟ್ಟ ಮಹಿಳೆಯರು, ಮಕ್ಕಳು ಒಟ್ಟಿಗೆ ಸೇರಿ ತಮ್ಮ ಮನೆಯಂಗಳದಲ್ಲಿ ಓಣಂ ಹಬ್ಬದ ವೈಶಿಷ್ಟ್ಯ ಎನಿಸಿದ ಹೂವಿನ ರಂಗೋಲಿ (ಪೊಳಕಂ) ಬಿಡಿಸಿದ್ದು ಗಮನ ಸೆಳೆಯಿತು.
ಮನೆಯಂಗಳವನ್ನು ಸಿಂಗರಿಸಿದ ಮಹಿಳೆಯರು ಕೇರಳದ ಸಂಸ್ಕೃತಿ ಪ್ರತಿಬಿಂಬಿಸುವ ಸಾಂಪ್ರದಾಯಿಕ ಸೀರೆ ಧರಿಸಿ ಹೂವಿನ ರಂಗೋಲಿಗೆ ದೀಪವನ್ನು ಬೆಳಗಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬಕ್ಕಾಗಿ ತಯಾರಿಸಿದ್ದ ವಿಶೇಷ ಭೋಜನವನ್ನು ಎಲ್ಲರೂ ಸೇರಿ ಸವಿದರು.