ರಾಮಕೃಷ್ಣ ವಿದ್ಯಾಲಯ ಆಡಳಿತ ಅವ್ಯವಸ್ಥೆಗೆ ಪೋಷಕರ ಆಕ್ರೋಶ ; ಬಿಇಒ ಕಛೇರಿ ಮುಂದೆ ಪ್ರತಿಭಟನೆ

Written by Mahesha Hindlemane

Published on:

ಹೊಸನಗರ ; ತಾಲೂಕಿನ ರಿಪ್ಪನ್‌ಪೇಟೆ ಹಾಗೂ ಹೊಸನಗರ ಪಟ್ಟಣದ ರಾಮಕೃಷ್ಣ ವಿದ್ಯಾಲಯ ಶಾಲೆಯ ಆಡಳಿತ ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಯಿತು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಇಲ್ಲಿನ ಬಿಇಒ ಕಚೇರಿ ಆವರಣದಲ್ಲಿ ಶುಕ್ರವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದ ಶಾಲಾ ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯ ಮುಖಂಡರು ಶಾಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್ ಮಾತನಾಡಿ, ಶಾಲಾಡಳಿತವು ತನ್ನ ಲೋಪಗಳನ್ನು ಮುಚ್ಚಿ ಹಾಕಿ ಮಕ್ಕಳಿಗೆ ಅನ್ಯಾಯ ಮಾಡಿದೆ. ಒಂದೇ ಶಾಲೆಗೆ ಸಿಬಿಎಸ್‌ಇ ಹಾಗೂ ರಾಜ್ಯ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆಯಲು ಮುಂದಾಗಿದೆ. ಇದು ತಾಂತ್ರಿಕವಾಗಿ ಸಾಧ್ಯವಿಲ್ಲದ ಈ ವ್ಯವಸ್ಥೆಗೆ ಶಾಲೆಯ ಸಂಸ್ಥಾಪಕ ದೇವರಾಜ್ ಮುಂದಾಗಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕುಂದು ತಂದಿದೆ. ಕಳೆದ ಮಾರ್ಚ್‌ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಈವರೆಗೂ ಮೂಲ ಅಂಕಪಟ್ಟಿ ಲಭ್ಯವಾಗಿಲ್ಲ. ಯಾವುದೇ ಕಾಲೇಜಿನಲ್ಲಿ ಪ್ರವೇಶ ದೊರಕುತ್ತಿಲ್ಲ. ರಾಮಕೃಷ್ಣ ವಿದ್ಯಾಲಯದ ಮಾನ್ಯತೆ ರದ್ದಾಗಿರುವ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಬೇರೆ ಶಾಲೆಯ ದಾಖಲಾತಿ ಸಂಖ್ಯೆ ಲಭ್ಯವಾಗಿದೆ. ಓದಿರುವ ಶಾಲೆಯೇ ಒಂದು, ಪರೀಕ್ಷಾ ದಾಖಲೆಗಳಲ್ಲಿಯೇ ಬೇರೆ ಬೇರೆ ಶಾಲೆಗಳ ಹೆಸರು ಇರುವ ಕಾರಣಕ್ಕೆ ಸಿಇಟಿ, ನೀಟ್ ಪರೀಕ್ಷೆ ಎದುರಿಸಲು ಮಕ್ಕಳಿಗೆ ಅವಕಾಶವಿಲ್ಲದಂತಾಗಿದೆ ಎಂದು ಆಪಾದಿಸಿದರು.

2016 ರಿಂದಲೂ ಸಿಬಿಎಸ್‌ಇ ಹಾಗೂ ಕೆಎಸ್‌ಇಇಬಿ ಬೋರ್ಡ್‌ಗಳನ್ನು ಒಂದೇ ಶಾಲಾ ಕಟ್ಟಡಕ್ಕೆ ಪಡೆದು ನಿಯಮಬಾಹಿರವಾಗಿ ಪರೀಕ್ಷೆ ಬರೆಸಿದ್ದಾರೆ. ಪೋಷಕರಿಂದ ಅಧಿಕ ಶುಲ್ಕ ವಸೂಲಿ ಮಾಡಿ ಮೋಸ ಮಾಡಿದ್ದಾರೆ. ಶಾಲಾಡಳಿತ ಈಗ ವಿದ್ಯಾರ್ಥಿಗಳಿಗೆ ಎದುರಾಗಿರುವ ಸಮಸ್ಯೆ ಬಗೆಹರಿಸುವಲ್ಲಿ ವಿಫಲಗೊಂಡಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಡಿಡಿಪಿಐ ಬರಲಿ ;

ಸ್ಥಳಕ್ಕೆ ಡಿಡಿಪಿಐ ಆಗಮಿಸಬೇಕು. ಮಕ್ಕಳ ಮೂಲ ಅಂಕಪಟ್ಟಿ ನೀಡಬೇಕು. ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಡಬೇಕು. ಅಲ್ಲಿಯವರೆಗೂ ಪ್ರತಿಭಟನೆ ನಿರಂತರವಾಗಿ ನಡೆಸುವುದಾಗಿ ತಿಳಿಸಿದರು.

ಬಿಇಒ ಹಾಗೂ ಶಿಕ್ಷಣ ಸಚಿವರು ನೇರ ಹೊಣೆ ;

ರಾಮಕೃಷ್ಣ ವಿದ್ಯಾ ಸಂಸ್ಥೆಗೆ ಮಾನ್ಯತೆಯಿಲ್ಲ ಎಂದು ತಿಳಿದಿದ್ದರೂ ಶಿಕ್ಷಣ ಇಲಾಖೆ ಪೋಷಕರಿಗೆ ಯಾವುದೇ ಮಾಹಿತಿ ನೀಡಿಲ್ಲ. ಅದು ಅಲ್ಲದೇ ಶಾಲೆಯ ಮುಂಭಾಗ ಮಾನ್ಯತೆಯಿಲ್ಲ ಎಂದು ನೋಟಿಸ್ ಹಾಕಿಲ್ಲ. ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪ ಅಧಿಕಾರ ವಹಿಸಿಕೊಂಡು 30 ತಿಂಗಳಾದರೂ ಇವರಿಗೆ ಗೊತ್ತಿದ್ದು ಸುಮ್ಮನಿರುವುದು ಏಕೆ? ಎಂದು ಪೋಷಕರು ಪ್ರಶ್ನಿಸಿದ್ದು, ಶಿಕ್ಷಣ ಇಲಾಖೆಯ ಈ ಹಿಂದಿನ ಬಿಇಒ ಮತ್ತು ಅಧಿಕಾರಿಗಳ ವಿರುದ್ಧ ಶಿಕ್ಷಣ ಸಚಿವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಶಾಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಪ್ರಮುಖರಾದ ಜ್ಯೋತಿ ಪೂರ್ಣೇಶ್, ಎ.ವಿ.ಮಲ್ಲಿಕಾರ್ಜುನ, ಸುರೇಶ್ ಸ್ವಾಮಿರಾವ್, ವೀರೇಶ್ ಆಲವಳ್ಳಿ, ಗುಬ್ಬಿಗ ರವಿ ಸೇರಿದಂತೆ ನೂರಾರು ಪೋಷಕರು ಇದ್ದರು.

Leave a Comment