ವ್ಯಕ್ತಿತ್ವ ಆಸ್ತಿ ಅಂತಸ್ತಿನಲ್ಲಿ ಇಲ್ಲ ಆಲೋಚನೆ ಆಚರಣೆಯಲ್ಲಿದೆ ; ರಂಭಾಪುರಿ ಶ್ರೀಗಳು

Written by malnadtimes.com

Published on:

ಬಾಳೆಹೊನ್ನೂರು ; ಹಣ ಕಳೆದರೆ ಮತ್ತೆ ಗಳಿಸಬಹುದು. ಆದರೆ ಮಾತಿನಿಂದ ಕಳೆದುಕೊಂಡ ಸಂಬಂಧ ತಿರುಗಿ ಪಡೆಯಲಾಗದು. ವ್ಯಕ್ತಿತ್ವ ಅನ್ನುವುದು ಆಸ್ತಿ ಅಂತಸ್ತಿನಲ್ಲಿ ಇರುವುದಿಲ್ಲ. ಅದು ಆಲೋಚನೆ ಮತ್ತು ಆಚರಣೆಗಳಲ್ಲಿ ಇರುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಸೋಮವಾರ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಜರುಗಿದ ಹುಣ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಹುಟ್ಟಿದ್ದು ಸಾಯುವುದಕ್ಕಲ್ಲ ಸಾಧಿಸುವುದಕ್ಕೆ. ಬದುಕಿದ್ದು ದ್ವೇಷ ಬೆಳೆಸುವುದಕ್ಕಲ್ಲ ಪ್ರೀತಿ ವಿಶ್ವಾಸ ಗಳಿಸಲಿಕ್ಕೆ ಎಂಬುದನ್ನು ಮರೆಯಬಾರದು. ಪ್ರಭಾವ ನೋಡಿ ಹತ್ತಿರ ಬರುವ ಜನರಿಗಿಂತ ಸ್ವಭಾವ ನೋಡಿ ಹತ್ತಿರ ಬರುವವರೇ ನಿಜವಾದ ಹಿತೈಷಿಗಳು. ಹಣದ ಹಿಂದೆ ಓಡಿದರೆ ಕುಳಿತುಕೊಳ್ಳುವಷ್ಟು ಸಮಯ ಸಿಗುವುದಿಲ್ಲ. ಸಂಬಂಧಗಳ ಜೊತೆ ಸಾಗಿದರೆ ಗೌರವದ ಜೊತೆ ಕಷ್ಟಗಳಿಗೆ ಸ್ಪಂದಿಸುವ ಹೃದಯಗಳು ಸಿಗುತ್ತವೆ. ನಗುವಿನಲ್ಲಿ ಜೊತೆಯಾಗಿರುವ ನೂರು ಜನರಿಗಿಂತ ನೋವಿನಲ್ಲಿ ಜೊತೆಯಾಗಿರುವ ಒಬ್ಬರಿದ್ದರೆ ಸಾಕು. ಪರಿಸ್ಥಿತಿಯನ್ನು ಬದಲಿಸುವುದು ಕಷ್ಟವಾದಾಗ ಮನಸ್ಥಿತಿಯನ್ನು ಬದಲಿಸಿಕೊಳ್ಳುವುದು ಉತ್ತಮವೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದರು.

ಪೌರ್ಣಿಮೆ ನಿಮಿತ್ಯ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ 13 ಜನ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಸಂಸ್ಕಾರ ನೀಡಲಾಯಿತು.

ಈ ಪವಿತ್ರ ಸಮಾರಂಭದಲ್ಲಿ ಕಲಕೇರಿ ಗುರು ಸಿದ್ಧರಾಮ ಶಿವಾಚಾರ್ಯರು, ಜಳಕೋಟಿನ ಮಠಾಧ್ಯಕ್ಷರು, ದೋರನಹಳ್ಳಿ ಅಭಿನವ ಮಹಾಂತೇಶ್ವರ ಶಿವಾಚಾರ್ಯರು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಟಿ.ಡಿ.ರಾಜೇಗೌಡರು, ಗ್ರಾಮ ಪಂಚಾಯತಿ ಅಧ್ಯಕ್ಷ ರವಿ, ಮಹೇಶ ಆಚಾರಿ, ಪ್ರಕಾಶಗೌಡರು ಪಾಲ್ಗೊಂಡು ಶ್ರೀ ಜಗದ್ಗುರುಗಳಿಂದ ಗುರುರಕ್ಷೆ ಪಡೆದರು.

ಈ ಪವಿತ್ರ ಸಮಾರಂಭದಲ್ಲಿ ಬೆಳಗಾಲಪೇಟೆ ಸಿದ್ಧಲಿಂಗಯ್ಯ ಶಾಸ್ತ್ರಿಗಳು, ಘನಲಿಂಗ ದೇವರು, ವಿಶ್ವನಾಥ ದೇವರು, ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಹರಪನಹಳ್ಳಿ ಎಂ.ಕೊಟ್ರೇಶಪ್ಪ, ಗುತ್ತೂರಿನ ವಿರೂಪಾಕ್ಷಪ್ಪ ಮಲ್ಲಜ್ಜರ, ಹರಿಹರದ ಕೊಂಡಜ್ಜಿ ಪಂಚಾಕ್ಷರಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಶ್ರೀ ರಂಭಾಪುರಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಪೌರ್ಣಿಮೆ ಸಂದರ್ಭದಲ್ಲಿ ಹರಿಹರ ತಾಲೂಕಿನ ನಿಟ್ಟೂರು ಗ್ರಾಮದಿಂದ ಆಗಮಿಸಿದ ಆಂಜನೇಯ ಸ್ವಾಮಿ ಪಲ್ಲಕ್ಕಿ ಉತ್ಸವ ಜರುಗಿತು.

ಇದೇ ಸಂದರ್ಭದಲ್ಲಿ 13 ಜನ ವೀರಮಾಹೇಶ್ವರ ವಟುಗಳಿಗೆ ಶಿವದೀಕ್ಷಾ ಸಂಸ್ಕಾರ ನೀಡಲಾಯಿತು.

ಬೆಳಿಗ್ಗೆ ಶ್ರೀ ಪೀಠದ ಎಲ್ಲ ದೈವಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಂದ ಎಲ್ಲ ಭಕ್ತರಿಗೆ ಅನ್ನ ದಾಸೋಹ ಜರುಗಿತು.

Leave a Comment