ಹೊಸನಗರ ; 2022-23ನೇ ಶೈಕ್ಷಣಿಕ ಸಾಲಿನಲ್ಲಿ ತೇರ್ಗಡೆ ಹೊಂದಿರುವ ವೃತ್ತಿಪರ ಕೋರ್ಸ್ ಸೇರಿದಂತೆ ಎಲ್ಲಾ ವಿವಿಧ ಪದವೀಧರ ಹಾಗು ಡಿಪ್ಲೋಮಾ ಯುವಕ-ಯುವತಿಯರು, ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಫಲಾನುಭವಿಗಳಾಗಿ ಯೋಜನೆ ಸದುಪಯೋಗ ಪಡೆಯಲು ಮುಂದಾಗಬೇಕೆಂದು ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಹೆಚ್. ಬಿ. ಚಿದಂಬರ ಕರೆ ನೀಡಿದರು.
ಇಲ್ಲಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಸಕ್ತ ಸಾಲಿನ 6ನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಯುವನಿಧಿ ಯೋಜನೆ ಕುರಿತು ಭಿತ್ತಿಚಿತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಕನ್ನಡಿಗ ಪದವೀಧರರಿಗೆ, ಅವರ ಮುಂದಿನ 24 ತಿಂಗಳ ಅವಧಿಗೆ ಮಾಸಿಕ ರೂ ಮೂರು ಸಾವಿರ ಹಾಗು ಡಿಪ್ಲೋಮಾ ಪೂರೈಸಿದವರಿಗೆ ಮಾಸಿಕ ಒಂದೂವರೆ ಸಾವಿರ ರೂ. ನಿರುದ್ಯೋಗ ಭತ್ಯೆ ನೀಡುವುದು ಯುವನಿಧಿ ಯೋಜನೆ ಉದ್ದೇಶವಾಗಿದೆ. ಆರು ತಿಂಗಳೊಳಗೆ ಉದ್ಯೋಗ ದೊರೆತಲ್ಲಿ ಅಥವಾ ಅರ್ಜಿ ಸಲ್ಲಿಸಿದ ಬಳಿಕ ನೌಕರಿ ಸಿಕ್ಕರೆ ಯೋಜನೆ ಅನ್ವಯಿಸುವುದಿಲ್ಲ. ಅರ್ಹರಿಗೆ ಯೋಜನೆಯು ಎರಡು ವರ್ಷಗಳಿಗೆ ಮಾತ್ರವೇ ಅನ್ವಯಿಸಲಿದೆ. ಅರ್ಹರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ನೇರ ಸಂದಾಯ ಆಗಲಿದೆ ಎಂದರು.
ತಾಲೂಕಿನಲ್ಲಿ ಈವರೆಗೆ ಗೃಹಲಕ್ಷ್ಮಿ ಯೋಜನೆಯ ಒಟ್ಟು 26,336 ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು 5,26,72,000 ರೂ. ಹಣ ಬಿಡುಗಡೆ ಆಗುತ್ತಿದೆ. ಈವರೆಗೆ ಗೃಹಜ್ಯೋತಿ ಯೋಜನೆಯ 32,369 ಫಲಾನುಭವಿಗಳು 26,75,66,814 ರೂ., ಶಕ್ತಿ ಯೋಜನೆಯಿಂದ 48,8441 ಮಂದಿಗೆ 52,76,21,922 ರೂ., ಯುವನಿಧಿ ಯೋಜನೆಯು 700 ಅರ್ಹ ಫಲಾನುಭವಿಗಳಿಗೆ 1,09,75,500 ರೂ. ಹಾಗು 21,601 ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಫಲಾನುಭವಿ ಆಗಿದ್ದಾರೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಕಾರ್ಯದರ್ಶಿ ನರೇಂದ್ರ ಕುಮಾರ್, ಸದಸ್ಯರಾದ ಅನಿಲ್ ಕುಮಾರ್, ಸಂತೋಷ್ ಮಳವಳ್ಳಿ, ಕರುಣಾಕರ್, ರವೀಂದ್ರ ಕೆರೆಹಳ್ಳಿ, ಸುಮಂಗಳ ದೇವರಾಜ್, ಪೂರ್ಣಿಮಾ ಮೂರ್ತಿ, ಅಕ್ಷತಾ ನಾಗರಾಜ್, ನರಸಿಂಹ ಪೂಜಾರ್, ಎಸ್ಡಿಎ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿಸಿದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.