RIPPONPETE ; ಇಲ್ಲಿನ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿಯ ಗಣಪತಿ ವಿಸರ್ಜನೆ ಸೆ.17 ರಂದು ಮಂಗಳವಾರ ನಡೆಯಲಿರುವುದರಿಂದ ರಿಪ್ಪನ್‌ಪೇಟೆ ಮುಖ್ಯ ರಸ್ತೆಯಂಚಿನಲ್ಲಿ ಮತ್ತು ಪ್ರವೇಶ ಮಹಾದ್ವಾರವೆಲ್ಲ ಹಿಂದು ಕೇಸರಿ ಧ್ವಜದೊಂದಿಗೆ ರಾರಾಜಿಸುತ್ತಿದ್ದು ವಿಸರ್ಜನಾ ಮೆರವಣಿಗೆಗೆ ಬರುವ ಹೆಸರಾಂತ ಕಲಾತಂಡಗಳನ್ನು ಸ್ವಾಗತಿಸುವ ಬ್ಯಾನರ್‌ಗಳೊಂದಿಗೆ ಸೇವಾ ಸಮಿತಿಯ ಯುವಪಡೆ ಸಹ ಸಿದ್ದತೆಯಲ್ಲಿ ತೊಡಗಿರುವುದಾಗಿ ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಬಳೆಗಾರ್ ಮತ್ತು ಎಂ.ಬಿ.ಮಂಜುನಾಥ ವಿವರಿಸಿದರು.
ಕಳೆದ 57 ವರ್ಷಗಳಿಂದ ರಿಪ್ಪನ್‌ಪೇಟೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇವಾ ಸಮಿತಿಯವರು ಊರಿಗೊಂದೆ ಗಣಪತಿ ಎಂಬಂತೆ 9 ದಿನಗಳ ಕಾಲ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರುತ್ತಿದ್ದು ಕಳೆದ 2019 ಮಾಹಾಮಾರಿ ಕೊರೊನಾ ವರ್ಷದಲ್ಲಿ 3 ದಿನಗಳಿಗೆ ಸೀಮಿತವಾಗಿ ಈಗ ಮೂರ್ನಾಲ್ಕು ವರ್ಷದಿಂದ 11 ದಿನಗಳಿಗೆ ಗಣೇಶೋತ್ಸವವನ್ನು ಸಂಭ್ರಮ ಸಡಗಡದೊಂದಿಗೆ ಆಚರಿಸಲಾಗುತ್ತಿದ್ದು ರಾಜ್ಯದಲ್ಲಿಯೇ ಶಾಂತಿ ಸೌಹಾರ್ದತೆಯೊಂದಿಗೆ ಇಲ್ಲಿನ ಗಣಪತಿ ಮೆರವಣಿಗೆ ಮಾದರಿಯಾಗಿದೆ.
ಎಲ್ಲೆಲ್ಲೂ ಕೇಸರಿಮಯ :
ಹಿಂದು ಮಹಾಸಭಾ ಗಣಪತಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿರುವುದರಿಂದ ಪಟ್ಟಣದೆಲ್ಲಡೆ ಅಲಂಕಾರ ಮಾಡಲಾಗುತ್ತಿದೆ. ಕೇಸರಿ ಬಂಟಿಂಗ್, ಭಗವಾಧ್ವಜ, ಕೇಸರಿ ಬಟ್ಟೆಯಿಂದ ಮಾಡಿದ ಅಲಂಕಾರಗಳಿಂದ ಇಡೀ ಪಟ್ಟಣ ಕೇಸರಿಯಿಂದ ರಾರಾಜಿಸುತ್ತಿದೆ. ಗಣಪತಿ ಮೆರವಣಿಗೆಗೆ ಸಾಗುವ ಮಾರ್ಗ ಸೇರಿ ಸುತ್ತಮುತ್ತಲ ಪ್ರದೇಶವನ್ನು ಸಿಂಗಾರಗೊಳಿಸಲಾಗಿದೆ. ಪ್ರತೀ ವರ್ಷದಂತೆ ರಾಜಾಸ್ಥಾನ ಮಾರ್ವಡಿ ಸಂಘ ಮತ್ತು ವಿವಿಧ ಬಡಾವಣೆಯ ಸಂಘ ಸಂಸ್ಥೆಗಳವರು ಮಾರ್ಗದುದ್ದಕ್ಕೂ ಪ್ರಸಾದ ವಿತರಣೆಗೆ ವ್ಯವಸ್ಥೆಗೆ ಮುಂದಾಗಿದ್ದಾರೆ.
ಪೊಲೀಸ್ ಬಿಗಿ ಭದ್ರತೆ :
ಶಾಂತಿ ಸುವ್ಯವಸ್ಥೆಗಾಗಿ ಪೊಲೀಸ್ ಇಲಾಖೆ ತೀರ್ಥಹಳ್ಳಿ ವಿಭಾಗಾಧಿಕಾರಿ ನೇತೃತ್ವದಲ್ಲಿ 3 ವೃತ್ತನೀರಿಕ್ಷಕರು, 10 ಪೊಲೀಸ್ ಇನ್ಸ್‌ಪೆಕ್ಟರ್, 10-15 ಜನ ಎಎಸ್‌ಐಗಳು ಹಾಗೂ 92 ಹೆಡ್‌ಕಾನ್‌ಸ್ಟೇಬಲ್ ಪೊಲೀಸ್ ಪೇದೆಗಳು,
75 ಹೋಮಗಾರ್ಡ್ಗಳು ಗಣಪತಿ ವಿಸರ್ಜನಾ ಮೆರವಣಿಗೆಗೆ ನಿಯೋಜಿಸಲಾಗಿದೆ ಎನ್ನಲಾಗಿದೆ.