Ripponpete

ಪ್ರೋ. ಪದ್ಮಾಶೇಖರ್ ಅವರಿಗೆ “ಸಿದ್ಧಾಂತ ಕೀರ್ತಿ” ಪ್ರಶಸ್ತಿ

ರಿಪ್ಪನ್‌ಪೇಟೆ ; ಜೈನ ಮಠದ ವತಿಯಿಂದ ನೀಡುವ 2025ನೇ ಸಾಲಿನ ‘ಸಿದ್ಧಾಂತ ಕೀರ್ತಿ’ ಪ್ರಶಸ್ತಿಯನ್ನು ವಿಶ್ರಾಂತ ಕುಲಪತಿ, ಸಾಹಿತಿ ಹಾಗೂ ಶಿಕ್ಷಣ ತಜ್ಞರಾದ ಪ್ರೋ. ಪದ್ಮಾಶೇಖರ್ ಇವರಿಗೆ ನೀಡಲಾಗುವುದೆಂದು ಪರಮಪೂಜ್ಯ ಶ್ರೀಗಳು ಘೋಷಿಸಿರುತ್ತಾರೆ.

WhatsApp Group Join Now
Telegram Group Join Now
Instagram Group Join Now

ಈ ಪ್ರಶಸ್ತಿಯನ್ನು ವಾರ್ಷಿಕ ಮಹಾರಥಯಾತ್ರಾ ಮಹೋತ್ಸವದ ಮುನ್ನಾ ಮಾ. 21ರ ಶುಕ್ರವಾರದಂದು ನಡೆಯುವ ಧಾರ್ಮಿಕ ಸಭೆಯಲ್ಲಿ ನೀಡಲಾಗುವುದು. ಇವರು ಕವಯತ್ರಿ, ಲೇಖಕಿ, ಸಂಶೋಧಕಿ, ಪ್ರಾಧ್ಯಾಪಕಿ, ದಕ್ಷ ಆಡಳಿತಗಾರ್ತಿ, ವಿಮರ್ಶಕಿ ಹಾಗೂ ಮಹಿಳಾಪರ ಹೋರಾಟಗಾರ್ತಿ ಆಗಿ ಬಹುಮುಖ ಸಾಧಕರಾಗಿದ್ದಾರೆ. ಗ್ರಂಥರಚನೆ, ಗ್ರಂಥ ಸಂಪಾದನೆ, ಉಪನ್ಯಾಸ, ಇನ್ನಿತರ ಕಾರ್ಯಗಳಲ್ಲಿ ವಿಶೇಷ ಅನುಭವ ಹೊಂದಿರುತ್ತಾರೆ.

ಎಂ.ಎ., ಪಿಎಚ್.ಡಿ. ಜೈನಾಲಜಿ ಸ್ನಾತಕೋತ್ತರ ಡಿಪ್ಲೋಮಾ ಶಾಸನಶಾಸ್ತ್ರ ಸ್ನಾತಕೋತ್ತರ ಡಿಪ್ಲೋಮಾದಲ್ಲಿ ಪ್ರಥಮ ರ‍್ಯಾಂಕ್ ಹಾಗೂ ಚಿನ್ನದ ಪದಕ ಪಡೆದ ಇವರು ಉನ್ನತ ಪದವೀದರರಾಗಿ ಮೈಸೂರು ಜೈನಶಾಸ್ತ್ರ ಮತ್ತು ಪ್ರಾಕೃತ ವಿಭಾಗ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಪ್ರಾಧ್ಯಾಪಕ ವಿಭಾಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತಿಯ ನಂತರ ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಹಾಗೂ ಮೈಸೂರು ವಿ.ವಿ. ಪ್ರಾಕೃತ ಮತ್ತು ಜೈನ ಶಾಸ್ತ್ರ ಅಧ್ಯಯನ ವಿಭಾಗದ ವಿಭಾಗಾಧ್ಯಕ್ಷರಾಗಿ ನೇಮಕಗೊಂಡು ಸಮರ್ಥವಾಗಿ ಸೇವೆ ಸಲ್ಲಿಸಿರುತ್ತಾರೆ.

ಕನ್ನಡ, ಸಂಸ್ಕೃತ, ಇಂಗ್ಲೀಷ್, ಪ್ರಾಕೃತ ಭಾಷೆ ಮತ್ತು ಜೈನ ಸಾಹಿತ್ಯವನ್ನು ಕುರಿತಂತೆ ವಿಶೇಷವಾದ ಅಧ್ಯಯನ ಮತ್ತು ಅಧ್ಯಾಪನಾ ನಡೆಸಿ ಸಾಹಿತ್ಯ ಕೃಷಿ ವಿಮರ್ಶೆ, ಸಂಶೋಧನೆ, ಕಾವ್ಯ ಜೀವನ ಚರಿತ್ರೆ ಸೇರಿದಂತೆ ಬಹು ಸಾಹಿತ್ಯಿಕ ಪ್ರಕಾರಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರ ಮುಂದಾಳತ್ವದಲ್ಲಿ ಸುಮಾರು 6000ಕ್ಕೂ ಹೆಚ್ಚು ಪ್ರಾಚೀನ ತಾಳಪತ್ರಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.

ಪಿಎಚ್.ಡಿ ಸಂಶೋಧಕರಿಗೆ ಮಾರ್ಗದರ್ಶಕರಾಗಿ ಜೈನ ಸಾಹಿತ್ಯ, ಕನ್ನಡ ಸಾಹಿತ್ಯ, ಜಾನಪದ ಸಾಹಿತ್ಯಕ್ಕೆ ವಿಶೇಷ ಕೊಡುಗೆಯನ್ನು ನೀಡಿದ ಇವರು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರ, ಗೌರವಗಳು ಸಂದಿವೆ. ಅವುಗಳಲ್ಲಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ವಿಠಲಾನುಗ್ರಹ ಪ್ರಶಸ್ತಿ, ಚಾವುಂಡರಾಯ ಪ್ರಶಸ್ತಿ, ಆದರ್ಶ ಮಹಿಳಾ ರಾಷ್ಟ್ರೀಯ ಪುರಸ್ಕಾರಗಳು ಸಂದಿವೆ. ಇತ್ತೀಚೆಗೆ 2024ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸಹ ಇವರಿಗೆ ಲಭಿಸಿದೆ.

ಹೊಂಬುಜ ಜೈನ ಮಠದಿಂದ ನೀಡುವ ಸಿದ್ದಾಂತಕೀರ್ತಿ ಪ್ರಶಸ್ತಿಯು 51ಸಾವಿರ ರೂ.ಗಳ ನಗದು ಮತ್ತು ಅಂಗವಸ್ತ್ರ ಸಹಿತ ನೀಡಿ ಗೌರವಿಸಲಾಗುವುದು. ಇದುವರೆಗೂ ಅನೇಕ ವಿದ್ವಾಂಸರಿಗೆ ಈ ಪ್ರಶಸ್ತಿಯನ್ನು ಸುಮಾರು 5 ದಶಕಗಳಿಂದ ಶ್ರೀಮಠದಿಂದ ನೀಡಲಾಗುತ್ತಿದೆ.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]