ರಿಪ್ಪನ್‌ಪೇಟೆ ; ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ ಭಾಗಗಳಲ್ಲಿ ಆನೆಗಳ ಹಾವಳಿಯಿಂದಾಗಿ ರೈತರ ಸಮೂಹ ಕೆಂಗಟ್ಟಿದ್ದು ತಕ್ಷಣವೇ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಜನವರಿ 24 ರಂದು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ ಎದುರು ರೈತರಿಂದ ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ತಿಳಿಸಿದರು.
ರಿಪ್ಪನ್‌ಪೇಟೆಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಹೊಸನಗರ ತಾಲ್ಲೂಕಿನ ಬಸವಾಪುರ ಗ್ರಾಮದ ರೈತ ತಿಮ್ಮಪ್ಪನ ಪ್ರಾಣವನ್ನು ಆನೆಗಳು ಬಲಿ ಪಡೆದಿದ್ದು ಪ್ರತಿನಿತ್ಯ ರೈತರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳು ನಾಗರೀಕರು ಜೀವಭಯದಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಆನೆಗಳು ಅಪಾರ ಪ್ರಮಾಣದ ಬೆಳೆ ನಾಶ ಮಾಡಿ ರೈತರ ಪ್ರಾಣ ಬಲಿಪಡೆಯುತ್ತಿದ್ದರೂ ಕೂಡಾ ಅರಣ್ಯ ಇಲಾಖೆಯವರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಜನವರಿ 24 ರಂದು ಶುಕ್ರವಾರ ಶಿವಮೊಗ್ಗ ಸಿಸಿಎಫ್ ಕಛೇರಿಯ ಎದುರು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಜಿ ಸಚಿವ ಹರತಾಳು ಹಾಲಪ್ಪನವರ ಸಂಚಾಲಕತ್ವದಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ್, ವಿಧಾನಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಆರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಕೆ.ಬಿ.ಆಶೋಕ್‌ನಾಯ್ಕ್, ಕೆ.ಜಿ.ಕುಮಾರಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಹೊನಗೋಡು ರತ್ನಾಕರ ಸೇರಿದಂತೆ ಜಿಲ್ಲೆಯ ರೈತ ಮುಖಂಡರು, ಜಿಲ್ಲಾ ಬಿಜೆಪಿ ಮುಖಂಡರುಗಳು ಹಾಗೂ ವಿವಿಧ ಸಂಘ ಸಂಸ್ಥೆಯವರು ಮತ್ತು ಬಸವಾಪುರ, ಹಾರೋಹಿತ್ತಲು, ಬೆಳ್ಳೂರು, ಅರಸಾಳು, ಕೆಂಚನಾಲ, ಚೋರಡಿ, ತುಪ್ಪೂರು, ಹೊಸೂರು ಇನ್ನಿತರ ಗ್ರಾಮಗಳಲ್ಲಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಲಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಎಂ.ಬಿ.ಮಂಜುನಾಥ, ಜಿಲ್ಲಾ ಬಿಜೆಪಿ ಮುಖಂಡ ಎಂ.ಸುರೇಶ್‌ಸಿಂಗ್, ರೈತಮೋರ್ಚಾ ಮುಖಂಡ ಮುರುಳಿ ಕೆರೆಹಳ್ಳಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಮಹಾಶಕ್ತಿ ಕೇಂದ್ರದ ಪ್ರಧಾನಕಾರ್ಯದರ್ಶಿ ಸುಂದರೇಶ್, ಯೋಗೇಂದ್ರಗೌಡ, ರಾಜೇಶ್‌ಜೈನ್ ಇನ್ನಿತರರು ಹಾಜರಿದ್ದರು.