HOSANAGARA ; ಶಿವಮೊಗ್ಗ ಜಿಲ್ಲೆಯ ಅಡಿಕೆ ವ್ಯಾಪಾರ ಹಾಗೂ ಮಂಡಿಗಳಿಗೆ ಅಡಿಕೆ ಆಮದು ಹಂತದಲ್ಲಿ ಸುರಕ್ಷಿತವಾಗಿದ್ದು ಮಧ್ಯವರ್ತಿಗಳು ಅಡಿಕೆಯ ಮಾನ ತೆಗೆಯುತ್ತಿದ್ದಾರೆ ಎಂದು ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಹೇಳಿದರು.
ಪಟ್ಟಣದ ಎಪಿಎಂಸಿ ಯಾರ್ಡ್ ಆವರಣದಲ್ಲಿ ತುಂಗಾ ಅಡಿಕೆ ಮಂಡಿಯ 6ನೇ ವರ್ಷದ ಸರ್ವಸದಸ್ಯರ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊಸನಗರದ ಅಡಿಕೆ ಸುರಕ್ಷಿತವಾಗಿದ್ದು ಪ್ರತಿಯೊಬ್ಬ ಬೆಳೆಗಾರರು ಮಂಡಿಗಳಿಗೆ ಅಡಿಕೆ ಹಾಕಿರಿ. ನೀವು ಮಧ್ಯವರ್ತಿಗಳಿಗೆ ಅಡಿಕೆ ನೀಡುತ್ತಿರುವುದರಿಂದ ಅವರು ಕಲಬೆರಕೆ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೊರ ರಾಷ್ಟ್ರಗಳಿಗೆ ಅಡಿಕೆ ಕಳುಹಿಸಿದಾಗ ಗುಣಮಟ್ಟ ಸರಿಯಿಲ್ಲ ಎಂದು ವಾಪಾಸು ಕಳುಹಿಸುವುದರಿಂದ ನೀವು ಬೆಳೆದ ಅಡಿಕೆಗೆ ಬೆಲೆಯಿಲ್ಲದಂತಾಗಿ ಧಾರಣೆ ಕುಂಠಿತವಾಗುತ್ತದೆ. ಇದರ ಜೊತೆಗೆ ಪುನಃ ಎಲೆಚುಕ್ಕಿ ರೋಗ ಕಾಣಿಸಿಕೊಳ್ಳುತ್ತಿದೆ ಇದರಿಂದ ಮತ್ತೆ ಅಡಿಕೆ ಬೆಳೆಗಾರರಿಗೆ ಸಂಕಷ್ಟ ಎದರುರಾಗಲಿದೆ ಎಂದರು.
ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಡಿ :
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಡುವಾಗ ಎಚ್ಚರಿಕೆ ಇರಲಿ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಕೇಳುವ ಪರಿಸ್ಥಿತಿಯಲ್ಲಿದೆ ಎಚ್ಚರಿಕೆಯಿಂದ ಹೆಜ್ಜೆ ಇಡಿ ಎಂದರು.
34 ಲಕ್ಷ ಲಾಭಾಂಶ – ದುಮ್ಮ ವಿನಯಕುಮಾರ್
6 ವರ್ಷಗಳ ಹಿಂದೆ ಪ್ರಾರಂಭವಾಗಿರುವ ತುಂಗಾ ಅಡಿಕೆ ಮಂಡಿಯಲ್ಲಿ 2023-24ನೇ ಸಾಲಿನಲ್ಲಿ 34,06,057 ರೂ. ನಷ್ಟು ಲಾಭಾಂಶವಾಗಿದೆ ಎಂದು ತುಂಗಾ ಅಡಿಕೆ ಮಂಡಿ ಅಧ್ಯಕ್ಷ ದುಮ್ಮ ವಿನಯಕುಮಾರ್ ಸಭೆಯಲ್ಲಿ ತಿಳಿಸಿದರು.
ನಾವು ತುಂಗಾ ಅಡಿಕೆ ಮಂಡಿಯನ್ನು ಪ್ರಾರಂಭಿಸುವಾಗ 582 ಸದಸ್ಯರಿದ್ದು 2023-24ನೇ ಸಾಲಿನಲ್ಲಿ 1215 ಸದಸ್ಯರ ಬಲ ಹೊಂದಿದೆ. 2020-21ರಲ್ಲಿ 83,10,018 ರೂಪಾಯಿ ಠೇವಣಿ ಸಂಗ್ರಹವಾಗಿದ್ದು 2023-24ನೇ ಸಾಲಿನಲ್ಲಿ 6,76,90,766 ರೂಪಾಯಿ ಸಂಗ್ರಹವಾಗಿದೆ. 2020-21ರಲ್ಲಿ 173 ಸದಸ್ಯರಿಗೆ 2,00,10,993 ಸಾಲ ನೀಡಲಾಗಿದ್ದು 2023-24ನೇ ಸಾಲಿನಲ್ಲಿ 439 ಸದಸ್ಯರಿಗೆ ಸಾಲದ ಪ್ರಮಾಣ ಗಣನೀಯ ಏರಿಕೆ ಕಂಡಿದ್ದು 10,58,70,059 ರೂಪಾಯಿ ಸಾಲವನ್ನು ನೀಡಲಾಗಿದೆ ಎಂದರು.
2023-24ನೇ ಸಾಲಿನಲ್ಲಿ ಸುಮಾರು 10 ಸಾವಿರ ಅಡಿಕೆ ಮೂಟೆಗಳು ಅವಕವಾಗುವಂತೆ ನೋಡಿಕೊಳ್ಳುವುದು ಸಹಕಾರಿಗೆ ಹೆಚ್ಚಿನ ಸದಸ್ಯರನ್ನು ಹೊಂದುವುದು ಹಾಗೂ ಸಹಕಾರಿಯ ಸೇವೆಯನ್ನು ವಿಸ್ತರಿಸುವುದು ಸಹಕಾರಿ ಗುಣಮಟ್ಟದ ಅಡಿಕೆ ಅವಕವಾಗುವಂತೆ ಕ್ರಮವಿಡುವುದು ಹಾಗೂ ರೈತ ಸದಸ್ಯರಿಗೆ ಗುಣಮಟ್ಟದ ಅಡಿಕೆ ಬಗ್ಗೆ ಅರಿವು ಮೂಡಿಸುವುದು ಸದಸ್ಯರನ್ನು ಆರ್ಥಿಕವಾಗಿ ಮೇಲೆತ್ತಲೂ ಕಾರ್ಯ ಯೋಜನೆ ರೂಪಿಸುವುದು ಹಾಗೂ ನಮ್ಮ ಸಂಸ್ಥೆಯ ರೈತ ಬೆಳೆಗಾರರಿಗೆ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಕಷ್ಟ ಕಾಲದಲ್ಲಿ ಕೈಜೋಡಿಸುವುದರ ಜೊತೆಗೆ ಅರ್ಥಿಕ ನೆರವು ನೀಡವ ಉದ್ದೇಶದಿಂದ ತುಂಗಾ ಅಡಿಕೆ ಮಂಡಿಯನ್ನು ಆರು ವರ್ಷಗಳ ಹಿಂದೆ ಸ್ಥಾಪಿಸಲಾಗಿದ್ದು ಮುಂದಿನ ದಿನದಲ್ಲಿ ಅಡಿಕೆ ಬೆಳೆಗಾರರ ಜೊತೆಗೆ ನಾವಿದ್ದೇವೆ ಎಂದರು.
ಈ ಸರ್ವ ಸದಸ್ಯರ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಾಲತೇಶ್, ದಿನೇಶ್ ಹೆಚ್.ಎಸ್, ನಾಗೇಶ್ ಹೆಚ್.ಟಿ, ರವಿ ಜಿ.ಎಸ್ ಗುಬ್ಬಿಗಾ, ಜಯದೇವಪ್ಪ ನವೀನ್‌ಕುಮಾರ್, ಮಹೇಶ್, ಸುಧೀರ್‌ಕುಮಾರ್, ಹೆಚ್.ಎಂ.ಬಷೀರ್ ಅಹಮ್ಮದ್, ಕೆ.ಎಸ್ ಶಿವಪ್ಪ, ಎಸ್.ಕೆ ಲೇಖನಮೂರ್ತಿ, ವಿನಾಯಕ ಸಿ, ವೀರಮ್ಮ, ಹೇಮಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರಸ್ವಾಮಿ ಹೆಚ್.ಎಸ್, ಯೂನಿಯನ್ ಬ್ಯಾಂಕ್ ಅಧ್ಯಕ್ಷ ವಾಟಗೋಡು ಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೆಶಕ ಎಂ.ಎಂ. ಪರಮೇಶ್, ಹಾಲು ಒಕ್ಕೂಟದ ಅಧ್ಯಕ್ಷ ವಿದ್ಯಾಧರ, ಗುಬ್ಬಿಗಾ ಅನಂತರಾವ್, ಗುಬ್ಬಿಗಾ ಸುನೀಲ್, ಚಂದ್ರಮೌಳಿ ಗೌಡ ಇನ್ನೂ ಮುಂತಾದವರು ಉಪಸ್ಥಿತರಿದ್ದರು.