ಸತ್ಯದ ತಳಹದಿಯ ಮೇಲೆ ವೀರಶೈವ ಮಹಾಸಭಾ ಪುನಶ್ಚೇತನಗೊಳ್ಳಲಿ ; ರಂಭಾಪುರಿ ಜಗದ್ಗುರುಗಳು

Written by malnadtimes.com

Published on:

N.R.PURA | ಜ್ಞಾನ ಕ್ರಿಯಾತ್ಮಕ ಧರ್ಮ ಪಾಲನೆಯಿಂದ ಜಗದಲ್ಲಿ ಶಾಂತಿ ಸಾಮರಸ್ಯ ನೆಲೆಸಲು ಸಾಧ್ಯ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸತ್ಯದ ತಳಹದಿಯ ಮೇಲೆ ಸೈದ್ಧಾಂತಿಕ ನಿಲುವನ್ನು ಗಟ್ಟಿಗೊಳಿಸಿಕೊಳ್ಳಬೇಕೆಂದು
ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

WhatsApp Group Join Now
Telegram Group Join Now
Instagram Group Join Now

ಅವರು ಶುಕ್ರವಾರ ಶ್ರೀ ರಂಭಾಪುರಿ ಪೀಠದ ಸಭಾಂಗಣದಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕ ಹಾಗೂ ತಾಲೂಕ ಘಟಕದ ಸದಸ್ಯರು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.

ವರ್ತಮಾನ ಮತ್ತು ಭವಿಷ್ಯತ್ತುಗಳಿಗೆ ಇತಿಹಾಸ ದಾರಿದೀಪ. ವೀರಶೈವ ಧರ್ಮಕ್ಕೆ ಪ್ರಾಚೀನ ಇತಿಹಾಸವಿದೆ. ಭವ್ಯ ಪರಂಪರೆಯಿದೆ. ಪುಟ ಪುಸ್ತಕ ಬದಲಿಸಬಹುದು. ಆದರೆ ಇತಿಹಾಸ ಬದಲಿಸಲಾಗದು. ಧರ್ಮಾಚರಣೆಯಿಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು. ಅಂತರಂಗ ಬಹಿರಂಗ ಶುದ್ಧಿಗೆ ಪ್ರಾಧಾನ್ಯತೆ ಕೊಟ್ಟ ಧರ್ಮ ವೀರಶೈವ ಎಂಬುದನ್ನು ಮರೆಯಬಾರದು. ಧರ್ಮದಿಂದ ಮನುಷ್ಯ ವಿಮುಖನಾದರೆ ಬದುಕು ಅಶಾಂತಿಯ ಕಡಲಾಗುತ್ತದೆ. ವೀರಶೈವ ಲಿಂಗಾಯತ ಒಳಪಂಗಡ ಮರೆತು ಒಂದಾದಾಗ ಮಾತ್ರ ಸಮಾಜಕ್ಕೆ ಉಜ್ವಲ ಭವಿಷ್ಯವಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಶ್ರೀ ಪೀಠದ ಪವಿತ್ರ ಸ್ಥಾನದಲ್ಲಿ ಪದಗ್ರಹಣ ಮಾಡಿರುವುದು ವಿನೂತನ ದಾಖಲೆಯಾಗಿದೆ. ಇಂಥ ದಿಟ್ಟ ನಿರ್ಧಾರ ಕೈಗೊಂಡ ಜಿಲ್ಲಾ ಘಟಕದ ಆದರ್ಶತೆಯನ್ನು ಪ್ರಶಂಸನೀಯ ನುಡಿಗಳ ಮೂಲಕ ಶ್ರೀ ಜಗದ್ಗುರುಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಹೆಚ್.ಎಂ.ಲೋಕೇಶ ಮಾತನಾಡಿ, ವಿಚಾರ ವಿಮರ್ಶೆಗಳು ಸಂಸ್ಕೃತಿಯ ಮೇಲೆ ಹೊಸ ಬೆಳಕು ಮೂಡಿಸಬೇಕೇ ವಿನಾಃ ಜನರನ್ನು ನಾಸ್ತಿಕರನ್ನಾಗಿ ಮಾಡುವ ಪ್ರಯತ್ನವನ್ನು ಯಾರೂ ಮಾಡಬಾರದು. ವ್ಯಕ್ತಿ ಹಿತಕ್ಕಿಂತ ಸಾಮಾಜಿಕ ಹಿತಾಸಕ್ತಿ ದೊಡ್ಡದು. ಮೂಲ ನಂಬಿಕೆಗಳನ್ನು ಮೂಢ ನಂಬಿಕೆ ಎನ್ನದೇ ಬದುಕಿನ ಆಚರಣೆಯಲ್ಲಿ ತರಬೇಕು. ಜಿಲ್ಲಾ ಘಟಕ ಸಮಾಜ ಸಂಘಟನೆ, ಧಾರ್ಮಿಕ ಮೌಲ್ಯಗಳ ಪುನರುತ್ಥಾನಕ್ಕೆ ಸದಾ ಶ್ರಮಿಸುತ್ತಾ ಬಂದಿದೆ. ಶ್ರೀ ರಂಭಾಪುರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ಅತ್ಯುತ್ತಮ ಸಮಾಜ ಕಟ್ಟುವ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ಸಂಕಲ್ಪ ನಮ್ಮೆಲ್ಲರದಾಗಿದೆ ಎಂದರು.

ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಕ್ಕಮಗಳೂರು ಜಿಲ್ಲಾ ಘಟಕಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿದ ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಚಿಕ್ಕಮಗಳೂರು ಸಮಾಜದ ಅಧ್ಯಕ್ಷ ಕೆ.ಸಿ.ನಿಶಾಂತ, ಮೂಡಿಗೆರೆ ಸಮಾಜದ ಅಧ್ಯಕ್ಷ ಬಿ.ಎಸ್.ಓಂಕಾರ, ಕಡೂರು ಸಮಾಜದ ಅಧ್ಯಕ್ಷ ಎಸ್.ಪಿ.ರೇಣುಕಾರಾಧ್ಯ, ತರೀಕೆರೆ ಸಮಾಜದ ಅಧ್ಯಕ್ಷ ಎಂ.ಬಿ.ಗಿರಿರಾಜು, ರಾಜ್ಯ ಸಮಿತಿ ಸದಸ್ಯ ಎಂ.ಆರ್.ಪೂರ್ಣೇಶ್ವರಮೂರ್ತಿ ಇವರೆಲ್ಲರೂ ಮಾತನಾಡಿ ವೀರಶೈವ ಲಿಂಗಾಯತ ಸಂಸ್ಕೃತಿಯ ಬೆಳವಣಿಗೆಗಾಗಿ ಶ್ರಮಿಸುವುದಾಗಿ ಸಂಕಲ್ಪ ಕೈಗೊಂಡರು.

ಜಿಲ್ಲಾ ಮಹಾಸಭಾ ಅಧ್ಯಕ್ಷ ಹೆಚ್.ಎಂ.ಲೋಕೇಶ ಇವರು ಜಿಲ್ಲಾ ಹಾಗೂ ತಾಲೂಕ ಘಟಕದ ಸದಸ್ಯರಿಗೆ ಗೋಪ್ಯತೆ ವಿಧಿ ನೆರವೇರಿಸಿದರು. ಆಯ್ಕೆಗೊಂಡ ಎಲ್ಲಾ ಸದಸ್ಯರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಪ್ರಮಾಣ ಪತ್ರ ವಿತರಿಸಿ ಆಶೀರ್ವದಿಸಿದರು.

ಬೀರೂರು ರುದ್ರಮುನಿ ಶಿವಾಚಾರ್ಯರು, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿ ಮಠದ ರೇಣುಕ ಮಹಂತ ಶಿವಾಚಾರ್ಯರು, ಕೊಡಿಯಾಲ ಹೊಸಪೇಟೆಯ ಜಗದೀಶ್ವರ ಸ್ವಾಮಿಗಳು, ಸವಡಿ ಮಹಂತ ಶ್ರೀಗಳು ಉಪಸ್ಥಿತರಿದ್ದು ನೂತನ ಸದಸ್ಯರಿಗೆ ಶುಭ ಹಾರೈಸಿದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ ಜರುಗಿತು. ಮಹಿಳಾ ಸದಸ್ಯರಿಂದ ಪ್ರಾರ್ಥನೆ ಜರುಗಿತು. ರೇವಣಸಿದ್ಧಪ್ಪ ಸ್ವಾಗತಿಸಿದರು. ಮೋಹನ ರಾಜಣ್ಣ ನಿರೂಪಿಸಿದರು. ಶಿಕ್ಷಕ ಯತೀಶ ವಂದನಾರ್ಪಣೆ ಸಲ್ಲಿಸಿದರು. ಸಮಾರಂಭದ ನಂತರ ಅನ್ನದಾಸೋಹ ಜರುಗಿತು.

Leave a Comment