ಸದ್ಯದಲ್ಲೇ 35 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭ ; ಸಚಿವ ಮಧು ಬಂಗಾರಪ್ಪ

Written by Mahesha Hindlemane

Published on:

ರಿಪ್ಪನ್‌ಪೇಟೆ ; ಪ್ರಸಕ್ತ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಸರ್ಕಾರ ಸಾಕಷ್ಟು ಉತ್ತೇಜನ ನೀಡಲಾಗುತ್ತಿದ್ದು ಈ ಸೌಲಭ್ಯದ ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸುವಂತಾಗಬೇಕೆಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಕರೆ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕೋಡೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯಳಗಲ್ಲು ಗ್ರಾಮದಲ್ಲಿ ಸುಮಾರು 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆ ವಸತಿ ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಕಡ್ಡಾಯ ಮಾಡಲಾಗಿದೆ. ಮಕ್ಕಳಲ್ಲಿ ದೇಶದ ಬಗ್ಗೆ ಶ್ರದ್ಧೆ ಭಕ್ತಿ ಭಾವನೆ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಮೂಲಕ ದೇಶಾಭಿಮಾನ ಮೂಡಿಸಲು ಸಾಧ್ಯ ಎಂದ ಅವರು, 28 ಕೋಟಿ ರೂ‌. ವೆಚ್ಚದಲ್ಲಿ 250 ಪರಿಶಿಷ್ಟ ಜಾತಿ ಜನಾಂಗದ ಮಕ್ಕಳಿಗಾಗಿ ಸುಸಜ್ಜಿತ ಕಟ್ಟಡ ನಿರ್ಮಿಸುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವುದರೊಂದಿಗೆ ಬರುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಗಳಿಸುವ ಮೂಲಕ ಮಕ್ಕಳು 625ಕ್ಕೆ 620 ಅಂಕ ಪಡೆದು ಉತ್ತೀರ್ಣತೆ ಹೊಂದುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, ಶಿಕ್ಷಕರು ಮಕ್ಕಳ ತೇರ್ಗಡೆಗೆ ಚಾಲೆಂಜ್ ತೆಗೆದುಕೊಳ್ಳುವಂತೆ ಸೂಚಿಸಿದರು.

ರಾಜ್ಯದಲ್ಲಿನ 1.16 ಕೋಟಿ ಶಾಲಾ ಮಕ್ಕಳಿಗಾಗಿ 1591 ಕೋಟಿ ರೂ. ಹಣವನ್ನು ಖರ್ಚು ಮಾಡುವ ಮೂಲಕ ಸರ್ಕಾರ ಬಿಸಿಯೂಟ ಮತ್ತು ಪಠ್ಯಪುಸ್ತಕ ಸಮವಸ್ತ್ರ ಸೇರಿದಂತೆ ವಾರದಲ್ಲಿ ಒಂದು ದಿನ ಪೌಷ್ಟಿಕ ಆಹಾರವಾಗಿ ಮೊಟ್ಟೆ ಹಾಲು ರಾಗಿ ಮಾಲ್ಟ್ ಹೀಗೆ ಹಲವು ಸೌಕರ್ಯಗಳನ್ನು ನೀಡಲಾಗುತ್ತಿದೆ. ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷೆಗೆ ಭೋದನೆಯನ್ನು ಆರಂಭಿಸಲಾಗಿ ತರಬೇತಿ ಹೊಂದಿರುವ ಶಿಕ್ಷಕರ ನೇಮಕಾತಿಯಲ್ಲಿ ವ್ಯತ್ಯಾಸವಾಗಿದೆ ಪ್ರಸಕ್ತ ಸಾಲಿನಲ್ಲಿ 11 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಅರು ತಿಂಗಳಲ್ಲಿ 35 ಸಹಸ್ರ ಶಿಕ್ಷಕರ ನೇಮಕಾತಿ ಬಗ್ಗೆ ಪ್ರಕ್ರಿಯೆ ಆರಂಭಿಸಲಾಗುವುದೆಂದ ಅವರು, ರಾಜ್ಯದಲ್ಲಿ 500 ಕೆ.ಪಿ.ಎಸ್. ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಶೀಘ್ರದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಶಿವಮೊಗ್ಗ ಜಿಲ್ಲೆಯಿಂದಲೇ ಚಾಲನೆ ಕೊಡಿಸಲಾಗುವುದೆಂದು ತಿಳಿಸಿದರು.

ಮಕ್ಕಳಲ್ಲಿ ಸಮಾನತೆ ಕಾಪಾಡುವ ಶಿಕ್ಷಣ ಇಂದಿನ ಅಗತ್ಯವಾಗಿದೆ. ಎಸ್.ಎಸ್.ಎಲ್.ಸಿ. ಕಡಿಮೆ ಅಂಕ ಬಂದವರು ಅನುತ್ತೀರ್ಣರಾದ ವಿದ್ಯಾರ್ಥಿಗಳು ಚಿಂತಿಸುವ ಬದಲು ಅವರಿಗಾಗಿ ಮೂರು ಹಂತದಲ್ಲಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ನೀಡುವುದರೊಂದಿಗೆ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿ ಮುಂದಿನ ತರಗತಿಗೆ ಸೇರ್ಪಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಗರ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು, ಹೊಸನಗರ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹೆಚ್.ಬಿ.ಚಿದಂಬರ್, ಕೋಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಜಯಪ್ರಕಾಶ್, ಹುಂಚ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಸುಮಂಗಲ ದೇವರಾಜ್, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಜಿ.ಪಂ.ಮಾಜಿ ಸದಸ್ಯ ಜ್ಯೋತಿ ಚಂದ್ರಮೌಳಿ, ತಾಲ್ಲೂಕ್ ಪಂಚಾಯಿತ್ ಮಾಜಿ ಸದಸ್ಯ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ ಚಂದ್ರಮೌಳಿ, ತಹಸೀಲ್ದಾರ್ ಭರತ್‌ರಾಜ್ ಕೆ.ಎಸ್., ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ ವೈ, ಶಿವಮೊಗ್ಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲೇಶಪ್ಪ ಡಿ, ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಪ್ರಾಂಶುಪಾಲೆ ಚಂದ್ರಕಲಾ ಬಿ.ಇನ್ನಿತರರು ಹಾಜರಿದ್ದರು.

Leave a Comment