ಹೊಸನಗರ : ನೂರಾರು ವರ್ಷದ ನೆನಪುಗಳು ಕನ್ನಡಕ್ಕಾಗಿ ಕೊಡುಗೆ ನೀಡಿದ ಹಿರಿಯರನ್ನು ಗುರುತಿಸಿ ನೆನಪಿಸುವ ಕಾರ್ಯಕ್ರಮ ಹಾಗೂ ಕನ್ನಡ ನಾಡು-ನುಡಿಗಾಗಿ ತ್ಯಾಗ ಮಾಡುವುದರ ಜೊತೆಗೆ ಹಿರಿಯರ ಹೆಸರನ್ನು ನೆನಪಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ ದತ್ತಿ ನಿಧಿಯಂಥಹ ಕಾರ್ಯಕ್ರಮ ನಡೆಸಲಾಗುತ್ತದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಣೇಶ್‌ಮೂರ್ತಿ ಹೇಳಿದರು.
ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದಿ. ನಾರಾಯಣ ಶೇಷಗಿರಿ ಕಾಮತ್ ಮತ್ತು ಲಕ್ಷ್ಮಿಬಾಯಿ ಎನ್ ಕಾಮತ್ ಅವರ ಸ್ಮರಣಾರ್ಥ ಕಸಾಪ ಅಂಗಳದಲ್ಲಿ ಬೆಳಕಿನ ದಿನ ಡಾ. ರಾಜ್‍ಕುಮಾರ್ ನೇತ್ರದಾನ ಮಾಡಿ ಅರಿವು ಮೂಡಿಸಿದ ದಿನದ ನೆನಪಿಗಾಗಿ ರಾಜ್‍ಗೀತಾ ಗಾಯನವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಗಾಯಕ ಗಾಯಕಿಯರು ಡಾ. ರಾಜ್‍ಕುಮಾರ್ ಸಿನಿಮಾ ಗೀತೆಗಳನ್ನು ಹಾಡಿ ನೆರೆದವರನ್ನು ರಂಜಿಸಿದರು. ದತ್ತಿದಾನಿಗಳಾದ ಮಂಜುನಾಥ ಕಾಮತ್ ರಾಜ್‌ರೊಂದಿಗಿನ ಒಡನಾಟ, ಗೋಕಾಕ್ ಚಳುವಳಿಯ ಬಗ್ಗೆ ಮೆಲುಕು ಹಾಕಿದರು. ಉದ್ಘಾಟಕರಾದ ಕಸಾಪ ಜಿಲ್ಲಾಧ್ಯಕ್ಷ ಡಿ ಮಂಜುನಾಥ್ ಕಾರ್ಯಕ್ರಮದ ಆಶಯವನ್ನು ಸವಿವರವಾಗಿ ತಿಳಿಸಿದರು.
ಈ ವೇದಿಕೆಯಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಐದು ವಿದ್ಯಾರ್ಥಿಗಳು 125ಕ್ಕೆ125 ಅಂಕವನ್ನು ಪಡೆದ ಕಾರಣಕ್ಕಾಗಿ ಗೀತಾ ಹೆಚ್ ಕೆ ಸಹಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ಅಂಚಟಗೇರಿ ತಾಲೂಕು ಹುಬ್ಬಳ್ಳಿರವರನ್ನು ಮತ್ತು ಹೊಸನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಶೇ. 100 ಫಲಿತಾಂಶ ಪಡೆದಿದ್ದಕ್ಕಾಗಿ ಅಶ್ವಿನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಶ್ವಿನಿ ಪಂಡಿತ್, ಸುಜಾತ ಸುರೇಶ್, ರಾಧಿಕಾ, ಸುಜಾತ ಕೆ.ಜಿ. ನಾಗೇಶ್, ವಾಸಂತಿ ರಾಜೇಂದ್ರ ಕೊತ್ವಾಲ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

