ಹೊಸನಗರ ; ನಿವೃತ್ತ ಮುಖ್ಯ ಶಿಕ್ಷಕನೊಬ್ಬ ಸೇತುವೆ ಮೇಲೆ ಬೈಕಿನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ಸಮೇತ ಹಿನ್ನೀರಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ನಗರ ಸಮೀಪದ ಸೋಮವಾರಪೇಟೆ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

ಸಂಪೇಕಟ್ಟೆ ಸರ್ಕಾರಿಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲವು ತಿಂಗಳ ಹಿಂದೆಯಷ್ಟೇ ನಿವೃತ್ತಿಯಾಗಿದ್ದ ಗಣೇಶ್ (61) ಮೃತ ದುರ್ಧೈವಿ. ಗಣೇಶ್ ಶನಿವಾರ ಬೆಳಗ್ಗೆ ಪತ್ನಿ ವೀಣಾರನ್ನು ಅವರು ಕರ್ತವ್ಯ ನಿರ್ವಹಿಸುತ್ತಿರುವ ಅರಮನೆಕೊಪ್ಪ ಗ್ರಾ.ಪಂ.ಗೆ ಬಿಟ್ಟು ವಾಪಾಸ್ ನಗರಕ್ಕೆ ಬಂದಿದ್ದರು. ಬಳಿಕ ಕಾರ್ಯನಿಮಿತ್ತ ಬಸವನಬ್ಯಾಣದ ಕಡೆ ಹೋಗುತ್ತಿರುವಾಗ ಈ ದುರ್ಘಟನೆ ನಡೆದಿದೆ.
ಹಿನ್ನೀರಿನಲ್ಲಿ ಬಿದ್ದಿದ್ದ ಬೈಕ್ ಮತ್ತು ವ್ಯಕ್ತಿಯ ಮೃತದೇಹ ನೋಡಿದ ಯಾರೋ ಸ್ಥಳೀಯರು ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ನಗರ ಠಾಣೆ ಪೊಲೀಸರು ಉಕ್ಕಡದ ಮೂಲಕ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ದಡಕ್ಕೆ ತಂದಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಬೈಕ್ ಅನ್ನು ಮೇಲಕ್ಕೆತ್ತಿದ್ದಾರೆ.

ಬಿದನೂರು ಮಾರಿಕಾಂಬಾ ಜಾತ್ರೆ ನಡೆಯುತ್ತಿದ್ದು ಶನಿವಾರ ಕೊನೆಯ ದಿನವಾಗಿದೆ. ಬೆಳಗ್ಗೆಯಷ್ಟೇ ಮೃತ ಗಣೇಶ್ ಕೂಡ ದೇಗುಲಕ್ಕೆ ಬಂದು ದೇವಿಯ ದರ್ಶನ ಮಾಡಿ ಹೋಗಿದ್ದರು. ದೇವಸ್ಥಾನದ ಅಣತಿ ದೂರದಲ್ಲೇ ಗಣೇಶ್ ಮನೆ ಇದ್ದು ಕುಟುಂಬಸ್ಥರ ರೋಧನೆ ಮುಗಿಲು ಮುಟ್ಟಿದೆ.

ಈ ಸಂಬಂಧ ಮೃತನ ಪತ್ನಿ ವೀಣಾ ನಗರ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





