ರಿಪ್ಪನ್‌ಪೇಟೆ ; ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 24X7 ಆಸ್ಪತ್ರೆಯನ್ನಾಗಿ ಮತ್ತು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ರಿಪ್ಪನ್‌ಪೇಟೆಯ ವಿನಾಯಕ ದೇವಸ್ಥಾನ ಹಿಂಭಾಗದ ವೀರಸಾವರ್ಕರ್ ಲಿಂಕ್ ರಸ್ತೆಗೆ ಸರ್ಕಾರದ ವಿಶೇಷ ಅನುದಾನದಡಿ 25 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಾನು ಈ ಹಿಂದೆ ಶಾಸಕನಾಗಿದ್ದ ಆವಧಿಯಲ್ಲಿ ಹೊಸನಗರ ಬಸ್ ನಿಲ್ದಾಣ, ಅಗ್ನಿಶಾಮಕ ಕಛೇರಿ, ತಾಲ್ಲೂಕು ಕಛೇರಿ, ಲೋಕೋಪಯೋಗಿ ಇಲಾಖೆಯ ಕಛೇರಿ ಹೀಗೆ ಹಲವು ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿಪಡಿಸಿದ್ದು ಈಗ ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಸಹ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತರುವುದರೊಂದಿಗೆ ಸಂಪರ್ಕ ರಸ್ತೆಗಳ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತಿರುವುದಾಗಿ ಹೇಳಿ, ಸ್ಥಳೀಯ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬರುವ ಲಿಂಕ್ ರಸ್ತೆಗಳನ್ನು ಸಂಪೂರ್ಣವಾಗಿ ಸಿಸಿ ರಸ್ತೆಯನ್ನಾಗಿ ಮಾಡಲಾಗುತ್ತಿದೆ ಎಂದರು.
ಪಕ್ಷಾತೀತವಾಗಿ ಜಾತ್ಯಾತೀತವಾಗಿ ಸರ್ವರನ್ನು ಸಮಾನವಾಗಿ ಕಾಣುವುದರೊಂದಿಗೆ ಅಭಿವೃದ್ದಿ ಕಾರ್ಯಗಳ ಬಗ್ಗೆ ಅಹವಾಲು ಹೊತ್ತು ಬಂದವರ ಕೆಲಸ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿವುದಾಗಿ ಹೇಳಿದ ಅವರು, ಜನ ನನಗೆ ಚುನಾವಣೆಯಲ್ಲಿ ಮತ ನೀಡಿ ಗೆಲ್ಲಿಸಿದ್ದಾರೆ, ಅವರ ಋಣ ತೀರಿಸುವ ಕೆಲಸವನ್ನು ಮಾಡುವುದು ನನ್ನ ಮೊದಲ ಕರ್ತವ್ಯವಾಗಿದೆ. ಅವರ ಪ್ರೀತಿ ವಿಶ್ವಾಸಕ್ಕೆ ಎಂದು ಚ್ಯುತಿ ಬಾರದಂತೆ ನೋಡಿಕೊಳ್ಳುವುದು ಜನಪ್ರತಿನಿಧಿಯಾದ ನನ್ನ ಕರ್ತವ್ಯವೆಂದು ಹೇಳಿ, ಸದಾ ನನ್ನ ಮನೆಯ ಬಾಗಿಲು ತೆರೆದಿರುತ್ತದೆಂದು ನೆರೆದ ಜನರಿಗೆ ಕರೆ ನೀಡಿದರು.

ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ಹೇಳಿ, ಭರವಸೆಯನ್ನು ಕೊಡುವುದಿಲ್ಲ ಆ ವಿಚಾರದಲ್ಲಿ ನನ್ನ ಸತತ ಪ್ರಯತ್ನ ಇದೆ ಎಂದರು.
ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ವಿ. ಈಶ್ವರಪ್ಪಗೌಡ, ಹೋಬಳಿ ಘಟಕದ ಕಾಂಗ್ರೆಸ್ ಅಧ್ಯಕ್ಷ ಗಣಪತಿ ಗವಟೂರು, ಗ್ರಾಮ ಪಂಚಾಯಿತ್ ಸದಸ್ಯರಾದ ಡಿ.ಈ. ಮಧುಸೂದನ್, ಎನ್.ಚಂದ್ರೇಶ್, ಪ್ರಕಾಶ್ ಪಾಲೇಕರ್, ಮಹಾಲಕ್ಷ್ಮಿ, ಅಶ್ವಿನಿ ರವಿಶಂಕರ್, ಸಾರಾಭಿ, ಅನುಪಮಾ ರಾಕೇಶ್, ಸೊಸೈಟಿ ಅಧ್ಯಕ್ಷ ಪರಮೇಶ, ರವೀಂದ್ರ ಕೆರೆಹಳ್ಳಿ, ಕೆ.ದೇವರಾಜ್, ಪಕ್ಷದ ಮುಖಂಡರು ಹಾಜರಿದ್ದರು.
ಮಂತ್ರಿಯಾಗಿ ಗೋಪಾಲಕೃಷ್ಣ !
25 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಗಾಗಿ ಆಗಮಿಸಿದ ಗೋಪಾಲಕೃಷ್ಣ ಬೇಳೂರು ಇವರು ಮುಂದಿನ ದಿನಗಳಲ್ಲಿ ಮಂತ್ರಿಯಾಗಿ ನೋಡುವ ಕಾಲ ದೂರವಿಲ್ಲ ಎಂದು ಗ್ರಾಮಾಧ್ಯಕ್ಷೆ ಧನಲಕ್ಷ್ಮಿ ಮತ್ತು ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಹೇಳಿದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.





