HOSANAGARA ; ದೇಶದ ಪ್ರಗತಿಯಲ್ಲಿ ಮಹಿಳೆಯರು ಹಾಗು ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯೆ ಮತ್ತು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಸಂಘದ ಅಧ್ಯಕ್ಷೆ ಬಲ್ಕೀಶ್ ಬಾನು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಎಸ್‌ಡಿಸಿಸಿ ಬ್ಯಾಂಕ್, ಶಿಮುಲ್, ಸಹಕಾರ ಇಲಾಖೆ ಹಾಗೂ ತಾಲೂಕಿನ ಎಲ್ಲಾ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳ ಸಂಯುಕ್ತ ಆಶ್ರಯದಲ್ಲಿ ಬಟ್ಟೆಮಲ್ಲಪ್ಪ ಗ್ರಾಮದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರು ಸಹ ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕವಾಗಿ ಪ್ರಗತಿ ಕಾರಣಬೇಕು. ಈ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ದಿವಂಗತ ರಾಜೀವ್‌ಗಾಂಧಿ ಮಹಿಳೆಯರಿಗಾಗಿ ಶೇ.33 ಮೀಸಲಾತಿ ಜಾರಿಗೊಳಿಸಿದರು. ಅಲ್ಲದೇ 18 ವರ್ಷ ವಯೋಮಾನದ ಯುವಕರಿಗೆ ಮತದಾನದ ಹಕ್ಕು ನೀಡುವ ಮೂಲಕ ದೇಶದಲ್ಲಿ ಕ್ರಾಂತಿ ಮೂಡಿಸಿದರು. ಇದು ಯುವಸಮೂಹದಲ್ಲಿ ಸ್ವಸಾಮರ್ಥ್ಯ, ನಾಯಕತ್ವ ಗುಣಲಕ್ಷಣಗಳ ಬೆಳವಣಿಗೆಗೆೆ ಸಹಕಾರಿ ಆಯ್ತು. ಮಹಿಳೆ ಕೇವಲ ಮನೆ ವಾರ್ತೆಗೆ ಸೀಮಿತ ಆಗಬಾರದು. ಆಕೆಯ ಸೇವೆ ಮನೋಭಾವ ಹೊಂದುವ ಮೂಲಕ ದೇಶದ ಆಡಳಿತ ಚುಕ್ಕಾಣಿ ಹಿಡಿಯುವಂತಾಗಲಿ ಎಂಬ ಉದ್ದೇಶದೊಂದಿಗೆ ಸಂವಿಧಾನದ 73ನೇ ಪರಿಶ್ಚೇದಕ್ಕೆ ಕಾನೂನಿಗೆ ತಿದ್ದುಪಡಿ ತಂದ ಕೀರ್ತಿ ರಾಜೀವ್‌ಗಾಂಧಿ ಅವರಿಗೆ ಸಲ್ಲುತ್ತದೆ. ಮುಂದೆ ಇದು ಪಂಚಾಯತಿ ವ್ಯಾಪ್ತಿಯಿಂದ ಮಹಾನಗರ ಪಾಲಿಕೆ ವರಗೆ ಮಹಿಳಾ ಮೀಸಲಾತಿಗೆ ಇದು ನಾಂದಿ ಹಾಡಿತು. ಮೀಸಲಾತಿಯ ಪ್ರಯೋಜನವನ್ನು ಮಹಿಳೆಯರು ಸರಿಯಾದ ರೀತಿಯಲ್ಲಿ ಪಡೆಯಬೇಕು. ನಾನು ಸಹ ಮೀಸಲಾತಿಯ ಫಲಾನುಭವಿಯೇ ಆಗಿರುವೆ ಎಂದರು. ಇಂದಿನ ನನ್ನ ಈ ಸ್ಥಾನಮಾನ ನನ್ನ ರಾಜಕೀಯ ಗುರುಗಳಾಗಿದ್ದ ಜೆ.ಹೆಚ್. ಪಟೇಲ್, ರಾಮಕೃಷ್ಣ ಹೆಗಡೆ, ಸಿದ್ದರಾಮಯ್ಯ ಹಾಕಿಕೊಟ್ಟ ಸುಭದ್ರ ರಾಜಕೀಯ ಅಡಿಪಾಯ ಎಂಬ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಆರ್ಥಿಕ ಪ್ರಗತಿ ಸಾಧಿಸಿರುವ ಜಿಲ್ಲಾ ಡಿಸಿಸಿ ಬ್ಯಾಂಕ್, ಆರ್ಥಿಕವಾಗಿ ನಷ್ಟದಲ್ಲಿರುವ ಮೈಸೂರು ಪೇಪರ್ ಮಿಲ್ ಅನ್ನು ಏಕೆ ದತ್ತು ಪಡೆಯಬಾರದು? ಇದರಿಂದ ನೂರಾರು ಕಾರ್ಮಿಕರಿಗೆ ಮತ್ತೆ ವೃತ್ತಿ ಕಲ್ಪಿಸಿದಂತಾಗುತ್ತದೆ ಎಂಬ ಸಲಹೆ ನೀಡಿದರು.
ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ, ಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ. ಆರ್. ಎಂ. ಮಂಜುನಾಥಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ 8.10ಲಕ್ಷ ಸಹಕಾರಿ ಸಂಘಗಳಿವೆ. 30 ಕೋಟಿಗೂ ಅಧಿಕ ಸದಸ್ಯರಿದ್ದಾರೆ. ಇಫ್ಕೋ, ಕ್ರಿಫ್ಕೋ, ಅಮೂಲ್ ಸೇರಿದಂತೆ ವಿವಿಧ ಸಹಕಾರಿ ಸಂಘಗಳಿಂದ ಸುಮಾರು 3 ಕೋಟಿ ನೇರ ಉದ್ಯೋಗ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಸುಮಾರು 35 ಸಾವಿರ ಸಹಕಾರಿ ಸಂಘಗಳಿದ್ದು ಸಾವಿರಾರು ಉದ್ಯೋಗ ಸೃಷ್ಠಿಸಿವೆ. ಇದು ಯಾವೊಂದು ಚುನಾಯಿತ ಸರಕಾರದಿಂದ ಸಾಧ್ಯವೆ ? ಎಂಬುದಾಗಿ ಪ್ರಶ್ನಿಸಿದ ಗೌಡರು, ಸಹಕಾರಿ ಕ್ಷೇತ್ರದಲ್ಲಿ ಜಾತಿ, ಪಕ್ಷ, ಲಿಂಗಭೇಧ ಮರೆತು ಕಾರ್ಯ ನಿರ್ವಹಿಸಿದಲ್ಲಿ ಮಾತ್ರವೇ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವೆಂದರು.
ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್ ಪ್ರಾಸ್ಥಾವಿಕ ಮಾತನಾಡಿ, ಸಹಕಾರಿ ಸಂಘಗಳ ಅಭಿವೃದ್ದಿಗೆ ಠೇವಣಿ ಸಂಗ್ರಹ ಪ್ರಮುಖ ಪಾತ್ರವಹಿಸುತ್ತದೆ. ಉತ್ತಮ ಆಡಳಿತ ಮಂಡಳಿಯ ರಚನೆ, ಸಾಧ್ಯವಾದಷ್ಟು ನಿರ್ದೇಶಕ ಮಂಡಳಿಯ ಅವಿರೋಧ ಆಯ್ಕೆ ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಶೂನ್ಯ ಬಡ್ಡಿದರದ ಸಾಲ ಮುಂದಿನ ದಿನಗಳಲ್ಲಿ ಸಹಕಾರಿ ಸಂಘಗಳನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ. ಕಾರಣ ಪ್ರಸಕ್ತ ನರ್ಬಾಡ್ ಸಾಲ ಮರು ವಿತರಣೆಯಲ್ಲಿ ಕುಂಠಿತಗೊಂಡಿದೆ.
ರಾಷ್ಟ್ರೀಯ ಬ್ಯಾಂಕುಗಳು ಸಹ ಸಹಕಾರಿ ಸಂಘಗಳತ್ತ ಠೇವಣಿಗಾಗಿ ಮುಖ ಮಾಡುತ್ತಿರುವುದು ಸಹಕಾರಿ ಕ್ಷೇತ್ರದ ಸುಭದ್ರತೆಗೆ ಸಾಕ್ಷಿಯಾಗಿದೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕ ಎಂ.ಎಂ.ಪರಮೇಶ್, ಜಿ.ಎನ್. ಸುಧೀರ್, ವೃತ್ತಿಪರ ನಿರ್ದೇಶಕ ಮಧುಸೂಧನ್ ನಾವಡ, ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷ ಎಂ.ವಿ.ಜಯರಾಮ್, ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ನಿರ್ದೇಶಕ ಹರತಾಳು ನಾಗರಾಜ್, ಆಪ್ಸ್ಕೋಸ್ ನಿರ್ದೇಶಕ ಕಲ್ಯಾಣಪ್ಪಗೌಡ, ಓಂಕೇಶ್, ಮ್ಯಾಟ್‌ಕೋಸ್ ಅಧ್ಯಕ್ಷ ನಂಜುಂಡಪ್ಪ, ತೋಟಗರ‍್ಸ್ ಸೊಸೈಟಿಯ ಜಯಶೀಲಪ್ಪಗೌಡ, ವೀರಶೈವ ಪತ್ತಿನ ಸಹಕಾರ ಸಂಘದ ಈಶ್ವರಪ್ಪಗೌಡ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಸತೀಶ್ ಕುಮಾರ್, ಲೆಕ್ಕ ಪರಿಶೋಧನಾ ಸಹಕಾಯ ನಿರ್ದೇಶಕ ಪರಮೇಶ್ವರಪ್ಪ, ಜಿಲ್ಲಾ ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕಿ ಅನ್ನಪೂರ್ಣ, ಶಿಮುಲ್‌ನ ಎಸ್.ಜಿ.ಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ನಡೆದ ಚರ್ಚಾ ಸ್ಪರ್ಧೆ, ಪ್ರಬಂಧ ಹಾಗೂ ವಿವಿಧ ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿಲಾಯಿತು.
ಕರ್ನಾಟಕ ಇನ್ ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟಿನ ಪ್ರಭಾರ ಉಪನ್ಯಾಸಕಿ ಟಿ. ಸರಸ್ಪತಿ ಅವರಿಂದ ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.